Site icon Vistara News

Keruru Case | ಕಾರಿಗೆ ಹಣ ಎಸೆದವರಿಗೆ ಮತ್ತೆ ದುಡ್ಡು ಕೊಟ್ಟು ಬಂದೆ ಅಂದ್ರು ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ

ಬಾಗಲಕೋಟೆ: ಮಾನವೀಯತೆ ದೃಷ್ಟಿಯಿಂದ ನಾನು ಕೆರೂರು ಪ್ರಕರಣದ ಗಾಯಾಳುಗಳಿಗೆ ನೆರವು ನೀಡಿದ್ದೆ. ಬಳಿಕ ಅವರು ನಿರಾಕರಿಸಿದರೂ ಪುನಃ ಅವರಿಗೆ ಹಣ ಕೊಟ್ಟು ಬಂದಿದ್ದೇನೆ. ಆದರೆ, ಅದನ್ನು ನೀವು ಮಾಧ್ಯಮದವರು ಹೇಳುವುದಿಲ್ಲ. ನಾನು ಕೊಟ್ಟ ಹಣ ಅವರಿಗೆ ಕಷ್ಟದ ಸಮಯದಲ್ಲಿ ಬಳಕೆ ಆಗುತ್ತದೆ ಅಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಾಯಾಳುಗಳಿಗೆ ನೀಡಿದ ಪರಿಹಾರ ಹಣವನ್ನು ಮಹಿಳೆ ಎಸೆದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರಿಗಾದರೂ ಏನಾದರೂ ಆದಾಗ ಸರ್ಕಾರದಿಂದ 1 ಲಕ್ಷ ರೂ., 2 ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ. ಸತ್ತವರಿಗೂ ಪರಿಹಾರ ಕೊಟ್ಟಿರುತ್ತೇವೆ. ಆದರೆ, ಸತ್ತವರು ವಾಪಸ್ ಬರ್ತಾರಾ? ಅವರಿಗೆ ನೆರವಾಗಲಿ ಎಂಬ ಮಾನವೀಯತೆಯಿಂದ ಹಣ ನೀಡಿದ್ದೇನೆ. ನನ್ನ ಪ್ರಕಾರ ನಾನು ಕೊಟ್ಟ ಹಣವನ್ನು ಒಪ್ಪಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ. ಅವರಿಗೂ ಕೊಟ್ಟಿದ್ದೀನಿ, ಇನ್ನೊಬ್ಬ ಗಾಯಾಳು ಗೋಪಾಲನಿಗೂ ಕೊಟ್ಟಿದ್ದೇನೆ. ಎರಡೂ ಕಡೆಯವರನ್ನು ಭೇಟಿ ಮಾಡಿ ಬಂದಿದ್ದೇನೆ ಎಂದು ಸಮಜಾಯಿಷಿ ಕೊಟ್ಟರು.

ಗುಂಪು ಘರ್ಷಣೆಯ ಕಾವು ತಣ್ಣಗಾಗಲಿ ಎಂದು ಇಷ್ಟು ದಿನ ಪ್ರಕರಣದ ಗಾಯಾಳುಗಳನ್ನು ಭೇಟಿಯಾಗಲು ಬಂದಿರಲಿಲ್ಲ. ಶುಕ್ರವಾರ ಎರಡೂ ಕಡೆಯ ಗಾಯಾಳುಗಳನ್ನು ಭೇಟಿ ಮಾಡಿದ್ದೇನೆ. ಇಂತಹ ಪ್ರಕರಣಗಳು ನಡೆಯಬಾರದು. ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿರುವೆ

ಕೆರೂರು ಘರ್ಷಣೆ ಪ್ರಕರಣದ ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಹೇಳಿದ್ದೇನೆ. ಪ್ರಕರಣ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಐಜಿ ಜತೆ ನಿರಂತರ ಸಂಪರ್ಕದಲ್ಲಿದ್ದೆ. ಗಲಭೆಯಲ್ಲಿ ಕೆಲವರಿಗೆ ಬಹಳ ಪೆಟ್ಟು ಬಿದ್ದಿದೆ. ಗಾಯಾಳು ಗೋಪಾಲ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಇರುವ ನಾಲ್ಕು ಜನರನ್ನು ಮಾತಾಡಿಸಿದ್ದೇನೆ ಎಂದರು.

ಇದನ್ನೂ ಓದಿ | Keruru Case | ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹಣವನ್ನು ವಾಪಸ್‌ ಎಸೆದ ರಜ್ಮಾ!

Exit mobile version