ಮೈಸೂರು: ವರುಣ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧೆಗೆ ತಾವು ಮಾನಸಿಕವಾಗಿ ಸಿದ್ಧವಾಗಿರುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚಾಮರಾಜ, ಚಾಮುಂಡೇಶ್ವರಿ ಟಿಕೆಟ್ ಸೋಮವಾರ ಇತ್ಯರ್ಥವಾಗಲಿದೆ. ಮಂಗಳವಾರ ಮೀಟಿಂಗ್ ಬಳಿಕ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಕೋಲಾರಕ್ಕೆ ಹೋಗುವುದು ಹೈಕಮಾಂಡ್ ತೀರ್ಮಾನವಾಗಿದೆ ಎಂದರು.
ವರುಣದಲ್ಲಿ ಸಿದ್ದರಾಮಯ್ಯರನ್ನು ಕಟ್ಟಿಹಾಕುವ ಪ್ಲಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು, ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯ್ಯಲ್ಲಿದೆ. ನಾನು ವರುಣಕ್ಕೆ ಪ್ರಚಾರಕ್ಕೆ ಈಗಲೂ ಹೋಗುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಹೋಗುತ್ತೇನೆ. ಎಲ್ಲವನ್ನೂ ನನ್ನ ಮಗ ಶಾಸಕ ಯತೀಂದ್ರ ನೋಡುತ್ತಿದ್ದಾರೆ. ಎಲ್ಲವನ್ನೂ ಅವರೇ ನೋಡಿಕೊಳ್ತಾರೆ ಎಂದರು.
ಮೀಸಲಾತಿ ಪರಿಷ್ಕರಣೆಯಿಂದ ಬಿಜೆಪಿಗೆ ಅನುಕೂಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಇದು ಯಾವುದೇ ಪೂರ್ವ ತಯಾರಿ ಇಲ್ಲದೆ ಚುನಾವಣೆಗಾಗಿ ತಂದಿರುವ ವಿಷಯ. ನಿಯಮ ಮೀರಿ ಶೇ.6 ರಷ್ಟು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಿತ್ತು. ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಯಬೇಕಿತ್ತು.
ಇದ್ಯಾವುದನ್ನೂ ಇವರು ಮಾಡಿಯೇ ಇಲ್ಲ. ಈ ಕಾರಣದಿಂದ ಇದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ.
ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದು ಸಮ್ಮಿಶ್ರ ಸರ್ಕಾರದಲ್ಲಿ. ಅದರ ವರದಿ ಬಂದಿದ್ದು 2017 ರಲ್ಲಿ. ನಾಲ್ಕು ವರ್ಷ ಅದನ್ನು ಜಾರಿಗೊಳಿಸದೆ ಏನು ಮಾಡುತ್ತಿದ್ದರು? ಇದೆಲ್ಲ ಚುನಾವಣೆಯ ಗಿಮಿಕ್ ಎಂದರು. ಜೇನುಗೂಡಿಗೆ ಕೈ ಹಾಕಿ ಜನರಿಗೆ ಸಿಹಿ ಹಂಚಿದ್ದೇನೆ ಎಂಬ ಸಿಎಂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇವರೇ ಏನು ಮೊದಲಿಗೆ ಮೀಸಲಾತಿ ಪರಿಷ್ಕರಣೆ ಮಾಡಿಲ್ಲ. 2ಎ, 2ಬಿ, 3ಎ, 3ಬಿ ಗಳನ್ನು ಮೊದಲೇ ಮಾಡಲಾಗಿದೆ. 1994 ರಿಂದ 2B ಮೀಸಲಾತಿ ಇತ್ತು. ಅದನ್ನು 2023 ರಲ್ಲಿ ಏಕೆ ತೆಗೆಯಲಾಯಿತು ಎಂದಿದ್ದಾರೆ.
ಏಪ್ರಿಲ್ 9ರಂದು ರಾಹುಲ್ ಗಾಂಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಕೋಲಾರಕ್ಕೆ ತೆರಳಿದ್ದಾಗ ಶನಿವಾರ ಈ ಕುರಿತು ಆಪ್ತರೊಂದಿಗೆ ಗೌಪ್ಯವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತೇನೆ. ನಾನು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತೇನೆ, ಇದಕ್ಕಾಗಿ ಮಾನಸಿಕವಾಗಿ ನಾನು ಸಿದ್ಧವಾಗಿದ್ದೇನೆ. ಹೈಕಮಾಂಡ್ ಒಪ್ಪಬೇಕು ಅಷ್ಟೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಮನವರಿಕೆ ಮಾಡಬೇಕು. ನನಗೆ ಕೋಲಾರದಿಂದ ಸ್ಪರ್ಧೆ ಮಾಡಲು ಇಷ್ಟ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡ್ತಾರೆ. ನನಗೆ ಇಷ್ಟ ಅಲ್ಲ ಎಂದಿದ್ದರೆ ಯಾಕೆ ನಾನು ಕೋಲಾರಕ್ಕೆ ಬರುತ್ತಿದೆ? ಹೈಕಮಾಂಡ್ ಎರಡು ಕ್ಷೇತ್ರಕ್ಕೆ ಅನುಮತಿ ಕೊಟ್ರೆ ವರುಣ ಹಾಗು ಕೋಲಾರ ಎರಡು ಕಡೆನೂ ಸ್ಪರ್ಧೆ ಮಾಡ್ತೇನೆ.
ವರುಣದಿಂದ ರಾಜಕೀಯ ಜೀವನ ಪ್ರಾರಂಭ ಆಗಿದೆ. ಇದು ನನ್ನ ಕೊನೆ ಚುನಾವಣೆ ಆದ್ದರಿಂದ ಹುಟ್ಟೂರಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕೋಲಾರದ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದೇನೆ. ನಾನು ಹಿಂದೆ ಸರಿಯಲ್ಲ, ಅದರೆ ಹೈಕಮಾಂಡ್ ಒಪ್ಪಬೇಕು. ಆದ್ದರಿಂದ ಮೊನ್ನೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೋಲಾರದ ಬಗ್ಗೆ ಚರ್ಚೆ ಮಾಡಿಲ್ಲ. ಹೈಕಮಾಂಡ್ ಮುಂದೆ ಮಾತಾಡೋಣ ಅಂತ ಸುಮ್ಮನೆ ಆಗಿದ್ದೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?