ರಾಯಚೂರು, ಕರ್ನಾಟಕ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗ್ಯಾರಂಟಿ ಎಕ್ಸ್‌ಪೈರಿ ಆಗಿದೆ ಎಂದು ಟೀಕಿಸಿದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು, ”ಬಿಜೆಪಿಯವರ ವಾರಂಟಿ ಮುಗಿದಿದೆ,” ಎಂದು ಹೇಳಿದ್ದಾರೆ(Karnataka Election 2023).
ರಾಯಚೂರು ಜಿಲ್ಲೆಯಲ್ಲಿ ಮಾನ್ವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ಬಿಜೆಪಿಯವರ ವಾರಂಟಿ ಮುಗಿದಿದೆ. ನಾನು ಸಿಎಂ ಆಗಿದ್ದಾಗ ಪರ್ಸೆಂಟ್ ಸರ್ಕಾರ ಅಂತಾ ಹೇಳ್ತಾ ಇದ್ರಾ? ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಅಂತಾ ಅಲ್ವಾ ಹೇಳೋದು. ಪ್ರಧಾನಿ ಮೋದಿ ಬಿಜೆಪಿಯವರೇ ಅಲ್ವಾ. ಹಾಗಿದ್ದಾರೆ, ಅವರು ಸುಳ್ಳು ಹೇಳುತ್ತಿದ್ದಾರೆಂದ ಅರ್ಥ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಂದ ಕಪ್ಪು ಹಣ ವಾಪಸ್ ತರುವುದಾಗಿ ಹೇಳಿದ್ದರು. ಆ ಕಪ್ಪು ಹಣ ವಾಪಸ್ ತಂದರೆ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಉದ್ಯೋಗ ಒದಗಿಸಿದ್ರಾ? ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಏನು ಸಹಾಯ ಮಾಡಿಲ್ಲ. ಬರಗಾಲ ಪ್ರವಾಹ ಬಂದಾಗ ಮೋದಿ ಬಂದ್ರಾ? ಇವಾಗ ಬಂದು ಬರಿ ಸುಳ್ಳು ಹೇಳ್ತಾ ಇದ್ದಾರೆ. ಸುಳ್ಳು ಹೇಳುವವರು ನರೇಂದ್ರ ಮೋದಿಯವರು ನಾವಲ್ಲ ಎಂದರು.
ನಾವು 58 ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ. ವಾರಂಟಿ ಮುಗಿದಿರೋದು ಅವರಿಗೆ ನಾವು ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸೊಸೆ ಪ್ರಚಾರ ಮಾಡಿದರೆ ಏನು ತಪ್ಪು?
ವರುಣಾ ಕ್ಷೇತ್ರದಲ್ಲಿ ನಮ್ಮ ಸೊಸೆ ಪ್ರಚಾರ ಮಾಡಿದರೆ ಏನು ತಪ್ಪು? ಯಾಕೆ ಅವರು ಪ್ರಚಾರ ಮಾಡಬಾರದಾ? ನಮ್ಮ ಪರವಾಗಿ ಪ್ರಚಾರಮ ಮಾಡಿದ್ರೆ ಏನು ತಪ್ಪು ಎಂದು ಪ್ರಶ್ನಿಸಿದರು. ಮೊಮ್ಮಗ ಧವನ್ ರಾಕೇಶ್ ಇನ್ನೂ ಸ್ಟೂಡೆಂಟ್ ಎಂದು ಹೇಳಿದರು.
ಬಿಜೆಪಿಯಿಂದಲೇ ಲಿಂಗಾಯತರಿಗೆ ಅವಮಾನ
ಲಿಂಗಾಯತರಿಗೆ ಅವಮಾನ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಲಿಂಗಾಯತರಿಗೆ ಬಿ ಎಲ್ ಸಂತೋಷ್ ಅವಮಾನ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರಿಂದ ಕಣ್ಣೀರು ಹಾಕಿಸಿದರು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೂಡ ಕೊಡಲಿಲ್ಲ. ಲಕ್ಷ್ಮಣ ಸವದಿ ಅವರಿಗೂ ಟಿಕೆಟ್ ಕೊಡಲಿಲ್ಲ. ಹಾಗಾದರೆ, ಲಿಂಗಾಯತರಿಗೆ ಅವಮಾನ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿಗೆ ನಡುಕ ಶುರುವಾಗಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಅವರಿಗೆ ಪಕ್ಕಾ ಆಗಿದೆ. ಹಾಗಾಗಿ ಸುಳ್ಳು ಹೇಳುತ್ತಿದ್ದಾರೆ. ಈ ವಿಷಯವು ಇಡೀ ರಾಜ್ಯಕ್ಕೆ ಗೊತ್ತು ಎಂದು ಸಿದ್ದಾರಾಮಯ್ಯ ಅವರು ಹೇಳಿದರು.