ಮೈಸೂರು/ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡದಂತೆ ಕಾಂಗ್ರೆಸ್ ಹೈಕಮಾಂಡ್ ಹೇಳಿರುವುದು ಸತ್ಯ ಎಂದು ವರುಣ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಹೇಳಿದ್ದಾರೆ. ಆದರೆ ಹೈಕಮಾಂಡ್ ಆ ರೀತಿ ಹೇಳಿಯೇ ಇಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿರುವುದು ಗೊಂದಲ ಸೃಷ್ಟಿಸಿದೆ.
ತಿ. ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ಹೈಕಮಾಂಡ್ ಹೀಗೆ ಹೇಳಿರುವುದು ಸತ್ಯ. ಇನ್ನು ಎರಡು- ಮೂರು ದಿನಗಳಲ್ಲಿ ನಮ್ಮ ತಂದೆ ತಮ್ಮ ನಿರ್ಧಾರ ತಿಳಿಸಲಿದ್ದಾರೆ. ಹೈಕಮಾಂಡ್ ಮಾತು ಕೇಳಬೇಕಾಗುತ್ತದೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೈಕಮಾಂಡ್ ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ.
ಇದರ ಬಗ್ಗೆ ತಂದೆ ಅವರೇ ಸ್ಪಷ್ಟನೆ ನೀಡಬೇಕು. ಕೋಲಾರದಲ್ಲಿ ನಾನು ಸಹ ಎರಡು ಬಾರಿ ಆಂತರಿಕ ಸಮೀಕ್ಷೆ ಮಾಡಿಸಿದ್ದೆ. ಸಿದ್ದರಾಮಯ್ಯ ಪರವಾಗಿ ಸರ್ವೇ ರಿಸಲ್ಟ್ ಬಂದಿದೆ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅವರಿಗೆ ಬಹು ಕ್ಷೇತ್ರ ಆಯ್ಕೆಗೆ ಅವಕಾಶ ಇರುವುದೇ ತೊಂದರೆ ಆಗಿರೋದು. ಒಂದು ವೇಳೆ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಬಂದರೆ ನಾನು ಬಿಟ್ಟು ಕೊಡುವೆ. ನಾನು ಬೇರೆ ಯಾವುದೇ ಕ್ಷೇತ್ರದಲ್ಲೂ ನಾನು ಸ್ಪರ್ಧೆ ಮಾಡಲ್ಲ. ಬೇರೆ ಕ್ಷೇತ್ರವಾದರೂ ಅಲ್ಲಿನ ಸ್ಥಳೀಯ ಅಭ್ಯರ್ಥಿಗಳೇ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೋಗಿ ಸ್ಪರ್ಧಿಸಲಿ ಎಂಬ ಕಂದಾಯ ಸಚಿವ ಆರ್. ಅಶೋಕ್ ಮಾತಿಗೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ, ಆ ರೀತಿ ಹೇಳಲು ಅಶೋಕ್ ಏನು ಸಾರ್ವಭೌಮರ? ಸಿದ್ದರಾಮಯ್ಯ ಶಾಸಕ, ಸಿಎಂ, ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾರೆ. ಎಲ್ಲಿ ಬೇಕಾದರೂ ಸ್ಪರ್ಧಿಸುವ ಹಕ್ಕು ಇದೆ. ನೀವೂ ಪಾಕಿಸ್ತಾನಕ್ಕೆ ಹೋಗಿ ಅಂತ ಹೇಳಬಹುದು. ಹಾಗೆ ಹೇಳೋದಕ್ಕೆ ಆಗುತ್ತ ? ಎಂದು ಮರುಪ್ರಶ್ನೆ ಹಾಕಿದರು.
ಸುಳ್ಳು ಸುದ್ದಿ ಎಂದ ಸುರ್ಜೆವಾಲ
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಂತೆ ಹೈಕಮಾಂಡ್ ಸಲಹೆ ನೀಡಿರುವುದು ಸುಳ್ಳು ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. ಈ ವರದಿ ಸುಳ್ಳು, ಇದನ್ನ ನಾನು ಅಲ್ಲಗಳೆಯುತ್ತೇನೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜನಪ್ರಿಯ ನಾಯಕರು. ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬರಲಿ ಎಂದು ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಇದೆ.
ಡಿ.ಕೆ. ಶಿವಕುಮಾರ್‌ಗೂ ಕನಕಪುರ ಬೇಡ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಬೇಡಿಕೆಯೂ ಇದೆ. ನಾವು ಈ ನಿರ್ಧಾರವನ್ನು ಅವರಿಬ್ಬರಿಗೂ ಬಿಟ್ಟಿದ್ದೇವೆ. ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎಂಬ ನಿರ್ಧಾರ ಅವರಿಗೆ ಬಿಟ್ಟಿದ್ದೇವೆ. ನಮ್ಮ ಪಕ್ಷ ಹಾಗೂ ನಾಯಕರು ಒಂದಾಗಿ ಕುಳಿತು ಚರ್ಚಿಸುತ್ತೇವೆ. ಅತಿ ಶೀಘ್ರವೇ ಈ ಬಗ್ಗೆ ಘೋಷಣೆ ಮಾಡ್ತೇವೆ, ಯಾವುದೇ ತೊಂದರೆ ಇಲ್ಲ.
ಬಹಳ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಂದು ಸ್ಪರ್ಧಿಸಲೆಂಬ ಬೇಡಿಕೆ ಇದೆ. ನಾವೇನೂ ಬಸವರಾಜ ಬೊಮ್ಮಾಯಿ ರೀತಿ ಶಿಗ್ಗಾಂವಿಯಿಂದ ಸ್ಪರ್ಧಿಸಲೋ ಬೇಡವೋ, ಕಾಂಗ್ರೆಸ್ ಯಾರನ್ನ ಅಭ್ಯರ್ಥಿ ಮಾಡ್ತಾರೆ ಅಂತೆಲ್ಲ ಯೋಚಿಸುತ್ತಿಲ್ಲ. ಬಿಜೆಪಿಯವರು ಇನ್ನೂ ಅಭ್ಯರ್ಥಿಗಳ ಬಗ್ಗೆ ಚರ್ಚೆಯೂ ನಡೆಸಿಲ್ಲ. ನಾವು ಅರ್ಧದಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ. ನಾವು ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ, ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಿಂದ ಹೊರನಡೆಯುವ ಸಿದ್ದು ನಿರ್ಧಾರದಿಂದ ನಾಯಕರಲ್ಲಿ ನಡುಕ, ನಿವಾಸಕ್ಕೆ ಶತಪಥ ಟೀಕಿಸಿದ BJP
ಕಳೆದ ವರ್ಷ ನವೆಂಬರ್‌ನಲ್ಲಿ ಕೋಲಾರದಿಂದ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದ ಸಿದ್ದರಾಮಯ್ಯ, 2018ರಲ್ಲಿ ಸೋತಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದರು.
2013ರಲ್ಲಿ ಗೆಲ್ಲಲು ನೆರವಾದ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸೂತ್ರವನ್ನು ಪುನರುಜ್ಜೀವನಗೊಳಿಸುವ ಆಶಯದೊಂದಿಗೆ ಸಿದ್ದರಾಮಯ್ಯ ಅವರು ಕೋಲಾರವನ್ನು ಆಯ್ಕೆ ಮಾಡಿದ್ದರು. ಕೋಲಾರವು ದಲಿತರು, ಮುಸ್ಲಿಮರು ಮತ್ತು ಕುರುಬರು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರವಾಗಿದೆ.
ಆದರೆ, ಬಿಜೆಪಿ, ಜೆಡಿಎಸ್ ಮತ್ತು ಬಂಡಾಯ ಕಾಂಗ್ರೆಸ್ ನಾಯಕರಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕೋಲಾರವನ್ನು ಕಠಿಣ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕೋಲಾರ ಲೋಕಸಭೆ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸ್ ಮುಖಂಡ ಕೆ. ಎಚ್. ಮುನಿಯಪ್ಪ ಕೂಡ ಸಿದ್ದರಾಮಯ್ಯ ಅವರ ಭದ್ರಕೋಟೆಗೆ ಎಂಟ್ರಿ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ.