Site icon Vistara News

Siddaramaiah : ಬಜೆಟ್‌ ಮಂಡನೆ ಬಳಿಕ ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ಸಿದ್ದರಾಮಯ್ಯ, ಯಾರ ಭೇಟಿಯೂ ಇಲ್ಲ

Siddaramaiah

ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿ (Chief Minister) ಪಟ್ಟಕ್ಕೇರಿರುವ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ತಮ್ಮ ಎರಡನೇ ಅವಧಿಯ ಮೊದಲ ಮತ್ತು ರಾಜಕೀಯ ಬದುಕಿನ 14ನೇ ಬಜೆಟನ್ನು (Karnataka Budget 2023-24) ಮಂಡಿಸಿದ್ದರು. ಸುಮಾರು 2 ಗಂಟೆ 54 ನಿಮಿಷಗಳ ಕಾಲ ಸುದೀರ್ಘ ಬಜೆಟ್‌ ಭಾಷಣ ಮಾಡಿದ ಅವರು ನಡು ನಡುವೆ ಕೆಮ್ಮುತ್ತಿದ್ದರು. ಬಜೆಟ್‌ ಮಂಡನೆ ಮುಕ್ತಾಯದ ಬಳಿಕ ಈ ಕೆಮ್ಮು ಹೆಚ್ಚಾಗಿದ್ದು, ಹೀಗಾಗಿ ಮುಖ್ಯಮಂತ್ರಿಗಳು ಶನಿವಾರ (ಜುಲೈ 8) ವಿಶ್ರಾಂತಿಯಲ್ಲಿದ್ದಾರೆ.

ಶುಕ್ರವಾರ ಭಾಷಣ ಮಾತನಾಡುತ್ತಿದ್ದಾಗ ಕೆಮ್ಮುತ್ತಿದ್ದರೂ ನೀರು ಕುಡಿದುಕೊಂಡು ಸಾವರಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘ ವಿವರಗಳನ್ನು ನೀಡಿದ್ದರು. ಹೀಗಾಗಿ ಗಂಟಲು ಸಮಸ್ಯೆ ಇನ್ನಷ್ಟು ಉಲ್ಬಣವಾಗಿ ರಾತ್ರಿ ಹೊತ್ತು ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಅವರು ಶನಿವಾರ ಮುಂಜಾನೆಯಿಂದಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಮ್ಮಿನಿಂದ ಬಳಲಿರುವ ಮುಖ್ಯಮಂತ್ರಿಗಳ ಶನಿವಾರದ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಅವರು ಅನ್ನ ಭಾಗ್ಯಕ್ಕೆ ಸಂಬಂಧಿಸಿ ಅವರು ಅಧಿಕಾರಿಗಳ ಜತೆ ಸಭೆ ನಡೆಸಬೇಕಾಗಿತ್ತು. ಇದೂ ಸೇರಿದಂತೆ ಹಲವು ಸಭೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಆ ಎಲ್ಲ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ.

ಇದನ್ನೂ ಓದಿ: FDC Medicine Ban: ಕೆಮ್ಮು, ನೆಗಡಿ, ಜ್ವರಕ್ಕೆ ನೀಡುವ 14 ಎಫ್‌ಡಿಸಿ ಔಷಧಿಗಳು ಬ್ಯಾನ್, ಈ ಟ್ಯಾಬ್ಲೆಟ್ ನೀವು ಬಳಸಿರಬಹುದು!

ಸಿಎಂ ಕಚೇರಿಯ ಸೂಚನೆಯಂತೆ ಶನಿವಾರ ಬೆಳಗ್ಗೆ ಹಲವು ಅಧಿಕಾರಿಗಳು ಮನೆಗೆ ಬಂದಿದ್ದರು. ಆದರೆ, ಯಾವ ಅಧಿಕಾರಿಗಳನ್ನು ಸಿದ್ದರಾಮಯ್ಯ ಅವರು ಭೇಟಿಯಾಗಿಲ್ಲ. ಹೀಗಾಗಿ ಅಧಿಕಾರಿಗಳು ವಾಪಸಾದರು. ಸರ್ಕಾರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಿಎಂ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಅಲೋಕ್ ಮೋಹನ್, ಇಂಟಲಿಜೆನ್ಸ್ ಎಡಿಜಿಪಿ ಶರತ್ ಚಂದ್ರ ಅವರೂ ಸಿಎಂ ಮನೆಗೆ ಬಂದು ಮರಳಿದ್ದಾರೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಕೂಡಾ ಸಿಎಂ ಭೇಟಿಗೆ ಬಂದಿದ್ದರು. ಆದರೆ, ಸಿಎಂ ಜತೆಗೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್, ಸುಂದರ್ ರಾಜ್ ಸೇರಿದಂತೆ ಹಲವರು ವಾಪಸ್ ಆಗಿದ್ದಾರೆ.

ಇದನ್ನೂ ಓದಿ: Karnataka Budget 2023 : ನೀವು Miss ಮಾಡಲೇಬಾರದ ಸಿದ್ದರಾಮಯ್ಯ ಬಜೆಟ್‌ನ TOP 60 ಮುಖ್ಯಾಂಶಗಳು

ಶನಿವಾರಕ್ಕೆ ಮೂರು ಕಾರ್ಯಕ್ರಮ ನಿಗದಿಯಾಗಿತ್ತು

1. ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ
ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಆಗಸ್ಟ್‌ 15ರಂದು ಅಥವಾ ಅದರ ಮರುದಿನ ಎಲ್ಲ ಫಲಾನುಭವಿ ಮಹಿಳೆಯರಿಗೆ 2,000 ಹಣ ವರ್ಗಾವಣೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆದಿದ್ದರು.
ಅನ್ನಭಾಗ್ಯ ಯೋಜನೆಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಬದಲಾಗಿ ತಲಾ 34 ರೂ.ನಂತೆ ಒಟ್ಟು 170 ರೂ. ಹಣವನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಹಣ ಹಂಚಿಕೆ ಬಗ್ಗೆ ಮಾಹಿತಿ ಪಡೆಯಲು ಬಯಸಿದ್ದರು.

2. ಅನ್ನಭಾಗ್ಯ ಪ್ರಕಟಣೆಗೆ ಧ್ವನಿಮುದ್ರಣ
ಅನ್ನಭಾಗ್ಯ ಯೋಜನೆ ಬಗ್ಗೆ ಧ್ವನಿ ಮುದ್ರಣ ಕಾರ್ಯಕ್ರಮ ಆಯೋಜನೆಯಾಗಿತ್ತು. ಆದರೆ, ಕೆಮ್ಮಿನ ಕಾರಣ ದೀರ್ಘವಾಗಿ ಮಾತನಾಡಲು ಸಾಧ್ಯವಿಲ್ಲವೆಂದು ಈ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ.

3. ಹಾಲಿನ ದರ ಹೆಚ್ಚಳದ ಸಾಧ್ಯತೆ ಬಗ್ಗೆ ಚರ್ಚೆ
ಹಾಲಿನ ದರ ಹೆಚ್ಚಳ ಮಾಡುವಂತೆ ಈಗಾಗಲೇ ಎಲ್ಲ ಒಕ್ಕೂಟಗಳಿಂದಲೂ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಬಗ್ಗೆ ಸಿಎಂ ಅಧಿಕಾರಿಗಳ ಜತೆ ಚರ್ಚೆಗೆ ಮುಂದಾಗಿದ್ದರು.

Exit mobile version