Site icon Vistara News

Siddaramaiah: ಸಿದ್ದರಾಮಯ್ಯ ಕುಟುಂಬ ಹಸ್ತಕ್ಷೇಪ ಮುಂದುವರಿಕೆ?: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಂಬಂಧಿಯ ವಿವಾದ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕಾರದ ವಿವಿಧ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಸಿಎಂ ಸಂಬಂಧಿಕರೊಬ್ಬರ ವಿಚಾರ ಇದೀಗ ವಿವಾದವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸೊಸೆಯ ಸಂಬಂಧಿಯೊಬ್ಬರನ್ನು ಅರ್ಹತೆಗೂ ಮೀರಿದ ಹುದ್ದೆಗೆ ನೇಮಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ರಾಜ್ಯದ ಸಿಎಂ ಆಗಿ ಮೇ 20ರಂದು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು. ಅದಾಗಿ ಕೇವಲ ಎರಡು ವಾರದಲ್ಲೇ ತಮ್ಮ ಸಂಬಂಧಿಕರನ್ನು ಉನ್ನತ ಹುದ್ದೆಗೆ ಕೂರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯತ ಸದಸ್ಯ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ಗಿರೀಶ್‌ ಎಚ್‌.ಸಿ. ಅವರನ್ನು ಕಿಯೋನಿಕ್ಸ್‌ಗೆ ಜೂನ್‌ 7ರಂದು ವರ್ಗಾವಣೆ ಮಾಡಲಾಗಿದೆ. ಈ ಸ್ಥಳಕ್ಕೆ, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಐಟಿ ವ್ಯವಸ್ಥಾಪಕರಾಗಿದ್ದ ಸೂರಿ ಪಾಯಲ ಅವರನ್ನು ಪ್ರಭಾರಿಯಾಗಿ ನೇಂಇಸಲಾಗಿತ್ತು.

ಸೂರಿ ಪಾಯಲ ಮೊದಲಿಗೆ 2016ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕವಾದರು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೇ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಲಕ್ಷ್ಮಣ್‌ ಅವರಿದ್ದಾಗ ಖಾಯಂ ಉದ್ಯೋಗಿಯಾಗಿದ್ದಾರೆ. ಸೂರಿ ಪಾಯಲ, ಸಿಎಂ ಸಿದ್ದರಾಮಯ್ಯ ಅವರ ಸೊಸೆಯ ಸಂಬಂಧಿಯಾಗಿದ್ದು, ಸದಸ್ಯ ಕಾರ್ಯದರ್ಶಿ ಹುದ್ದೆಗೆ ಅಗತ್ಯ ಅರ್ಹತೆ ಹೊಂದಿಲ್ಲ ಎಂದು ಈಗಿನ ಅಧ್ಯಕ್ಷ ಡಾ. ಶಾಂತ್‌ ಎ. ತಿಮ್ಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Shadow CM: ಶ್ಯಾಡೊ ಸಿಎಂ ಯತೀಂದ್ರರದ್ದು ʼಪ್ರಾಕ್ಸಿ ಕ್ಯಾಬಿನೆಟ್‌ʼ: ಬಿಜೆಪಿ ಟೀಕೆ

ಕಿತ್ತೆಸೆದ ಅಧ್ಯಕ್ಷ
ಅರ್ಹರಲ್ಲದ ವ್ಯಕ್ತಿಯನ್ನು ನೇಮಿಸಿದ್ದಷ್ಟೆ ಅಲ್ಲದೆ, ಸೂರಿ ಅವರು ಅಧ್ಯಕ್ಷರ ಮಾತನ್ನು ಲೆಕ್ಕಿಸದೆ ಮನಬಂದಂತೆ ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು. ಅಧ್ಯಕ್ಷರ ಸೂಚನೆಗೆ ಅನುಗುಣವಾಗಿ ಸಭೆ ಆಯೋಜನೆ, ಆದೇಶ ಹೊರಡಿಸುವ ಕಾರ್ಯವನ್ನು ಸದಸ್ಯ ಕಾರ್ಯದರ್ಶಿ ಮಾಡಬೇಕು ಎಂದು ಕಾಯ್ದೆಯಲ್ಲಿದೆ. ಆದರೆ ಸದಸ್ಯ ಕಾರ್ಯದರ್ಶಿ ಮನಬಂದಂತೆ ಆದೇಶಗಳನ್ನು ನೀಡುತ್ತಿರುವ ಕಾರಣ ಆಡಳಿತದಲ್ಲಿ ತೊಂದರೆ ಆಗುತ್ತಿದೆ. ತಾಂತ್ರಿಕವಾಗಿಯೂ ಅರ್ಹರಲ್ಲ ಎನ್ನುವ ಜತೆಗೆ ಆಡಳಿತಾತ್ಮಕವಾಗಿಗೂ ತೊಂದರೆ ಆಗುತ್ತಿರುವುದರಿಂದ ಸೂರಿ ಪಾಯಲ ಅವರನ್ನು ನೇಮಿಸಿದ ಆದೇಶವನ್ನು ಡಾ. ಶಾಂತ್‌ ಎ. ತಿಮ್ಮಯ್ಯ ಜುಲೈ 14ರಂದು ಹಿಂಪಡೆದಿದ್ದಾರೆ. ಈ ಸ್ಥಾನಕ್ಕೆ ಹಿರಿಯ ಪರಿಸರ ಅಧಿಕಾರಿ-1 ಹುದ್ದೆಯಲ್ಲಿರುವ ಟಿ. ಮಹೇಶ್‌ ಅವರನ್ನು ಜುಲೈ 15ರಂದು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಸಚಿವರಿಗೂ ಡೋಂಟ್‌ ಕೇರ್‌
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಮಾತಷ್ಟೆ ಅಲ್ಲದೆ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮಾತಿಗೂ ಸೂರಿ ಪಾಯಲ ಕ್ಯಾರೆ ಎನ್ನುತ್ತಿರಲಿಲ್ಲ. ಇಡೀ ಇಲಾಖೆಯನ್ನು ಸ್ವಚ್ಛಗೊಳಿಸಿ ತಮ್ಮ ಹಿಡಿತಕ್ಕೆ ಮುಂದಾಗಿದ್ದ ಈಶ್ವರ ಖಂಡ್ರೆ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ತಲೆನೋವಾಗಿತ್ತು. ತಾವು ಅಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಇದೀಗ ಸೂರಿ ಪಾಯಲ ಅವರನ್ನು ಸದಸ್ಯ ಕಾರ್ಯರ್ಶಿ ಹುದ್ದೆಯಿಂದ ತೆಗೆಸಿದ್ದಾರೆ ಎನ್ನಲಾಗುತ್ತಿದೆ. ಸಿಎಂ ಸಂಬಂಧಿಯೂ ಆಗಿರುವುದರಿಂದ ಸರ್ಕಾರದ ನಡೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

Exit mobile version