ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ (Congress government) ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳ (Guarantee scheme) ವಿಚಾರದಲ್ಲಿ ಕೈ ಎತ್ತುವುದು ಗ್ಯಾರಂಟಿ ಎಂದು ಬಿಜೆಪಿ ಗೇಲಿ ಮಾಡಿದೆ.
ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟ (Siddaramaiah Cabinet) ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿಗಳ ಅಧ್ಯಯನ ನಡೆಸಿ ಮುಂದಿನ ಸಂಪುಟ ಸಭೆಯ ಬಳಿಕ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಕಟಿಸಿತ್ತು. ಇದನ್ನು ಬಿಜೆಪಿ ಅಪಹಾಸ್ಯ ಮಾಡಿದೆ.
ʻʻನೀಡಲು ಸಾಧ್ಯವಿಲ್ಲದ ಗ್ಯಾರಂಟಿಗಳನ್ನು ಮುಂದಿಟ್ಟು, ಜನತೆಯನ್ನು ವಂಚಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಸಾಬೀತಾಗಿದೆ. ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಜಾರಿಗೆ ತರುತ್ತೇವೆ ಎಂದಿದ್ದ ಗ್ಯಾರಂಟಿಗಳ ಲಾಭವನ್ನು ಯಾರಿಗೆ ಮತ್ತು ಹೇಗೆ ಕೊಡುತ್ತೇವೆ ಎಂಬ ಯಾವುದೇ ವಿವರ ನೀಡದೆ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡುವ ನಾಟಕವಾಡಿದೆʼʼ ಎಂದು ಬಿಜೆಪಿ ತನ್ನ ಫೇಸ್ ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ.
ʻʻಇವು ಕೊಡುವ ಗ್ಯಾರಂಟಿಗಳಲ್ಲ, ಬದಲಾಗಿ ಕೈ ಎತ್ತುವ ಗ್ಯಾರಂಟಿಗಳು ಎಂಬುದನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ನಾಯಕರ ಹಾವಭಾವಗಳೇ ಸುಸ್ಪಷ್ಟವಾಗಿ ತೋರಿಸಿದೆ. ಈಡೇರಿಸಲಾಗದ ಗ್ಯಾರಂಟಿಗಳನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಉದ್ದೇಶದಿಂದ ಈಗ ಸಂಪನ್ಮೂಲ ಕ್ರೋಢೀಕರಣ ಎಂಬ ಸಬೂಬು ಹೇಳಲಾಗುತ್ತಿದೆಯಷ್ಟೆʼʼ ಎನ್ನುವುದು ಬಿಜೆಪಿಯ ಅಭಿಪ್ರಾಯ.
ಬೀದಿಯಲ್ಲಿ ಹೋಗೋರಿಗೆ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ವಾ?
ʻʻಗ್ಯಾರಂಟಿಗಳನ್ನು ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲಾಗುತ್ತದೆಯೇ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಈಗ ಕೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಹಾದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕಾರ್ಡ್ ನೀಡಿ ಈಗ ಈ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ದಾರಿಯಲ್ಲಿ ಹೋಗುವವರು ಕನ್ನಡಿಗರಲ್ಲವೇ?ʼʼ ಎಂದು ಖಾರವಾಗಿ ಪ್ರಶ್ನಿಸಿದೆ ಬಿಜೆಪಿ.
ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ ಸಿದ್ದರಾಮಯ್ಯ
ʻʻರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ಯನವರದ್ದು. ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲೀಯತ್ತುʼʼ ಎನ್ನುವುದು ಬಿಜೆಪಿಯ ವ್ಯಂಗ್ಯ
ಐದು ಗ್ಯಾರಂಟಿಗಳು ಯಾವುವು?
ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆಗೂ ಮೊದಲೇ ಐದು ಗ್ಯಾರಂಟಿಗಳನ್ನು ಪ್ರಕಟಿಸಿತ್ತು ಮತ್ತು ಅದಕ್ಕೆ ಸರ್ಕಾರ ಬಂದ ಬಳಿಕ ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ನೀಡಲಾಗುವುದು ಎಂದು ಪ್ರಕಟಿಸಿತ್ತು. ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ, ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಒಬ್ಬ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆಜಿ ಅಕ್ಕಿ ನೀಡುವ ಅನ್ನ ಭಾಗ್ಯ, ವಿದ್ಯಾವಂತ ನಿರುದ್ಯೋಗಿಗಳಿಗೆ ಎರಡು ವರ್ಷದ ಮಟ್ಟಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗಳನ್ನು ಪ್ರಕಟಿಸಿತ್ತು. ಇದಕ್ಕೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮತಿ ನೀಡಲಾಗಿದೆ. ಇದನ್ನು ಮೊದಲ ಸಂಪುಟ ಸಭೆಯ ಕ್ಷಣದಿಂದಲೇ ಜಾರಿಗೆ ತರಬೇಕಿತ್ತು ಎನ್ನುವುದು ಪ್ರತಿಪಕ್ಷವಾದ ಬಿಜೆಪಿಯ ಆಗ್ರಹ.