ಕೋಲಾರ: ಮಾಜಿ ಸಿಎಂ ಕೋಲಾರದಿಂದ ಸ್ಪರ್ಧೆ ಮಾಡುವ ಕುರಿತು ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಮಾತನಾಡಿದ್ದು, ಸಿದ್ದರಾಮಯ್ಯ ಕೋಲಾರಕ್ಕೆ ಬರದಿದ್ದರೆ ಕಾಂಗ್ರೆಸ್ ಮುಳುಗಿಹೋಗುತ್ತದೆ ಎಂದಿದ್ದಾರೆ.
ಕೋಲಾರದಲ್ಲಿ ಕುರುಬ ಸಮುದಾಯದ ಸಭೆಯೊಂದರಲ್ಲಿ ಮಾತನಾಡಿರುವ ರಮೇಶ್ ಕುಮಾರ್, ಸಿದ್ದರಾಮಯ್ಯರನ್ನ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರೋದಿಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಮುನಿಸಿಕೊಂಡು ಪಕ್ಕಕ್ಕೆ ಹೋದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂದಿರುವ ಗತಿ ಕರ್ನಾಟಕದ ಕಾಂಗ್ರೆಸ್‌ಗೆ ಬರುತ್ತದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಾರದೆ ಹೋದರೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತದೆ. ಇದನ್ನು ನನ್ನ ಸ್ವಾರ್ಥಕ್ಕಾಗಿ ಹೇಳುತ್ತಿಲ್ಲ.
ಮತ್ತೆ ಮತ್ತೆ ಕಸರತ್ತು ಮಾಡಿ ರಾಹುಲ್ ಗಾಂಧಿ ಮನಸ್ಸು ಪರಿವರ್ತನೆ ಮಾಡಿಸಿ ಸಿದ್ದರಾಮಯ್ಯರನ್ನ ಕರ್ನಾಟಕದಲ್ಲಿ ಮತ್ತೆ ವಿರೋಧ ಪಕ್ಷದಲ್ಲಿ ಕೂರಿಸಬೇಕಾಗುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯಗೆ ಟಿಕೆಟ್ ನೀಡದೇ ಇರುವ ಕುರಿತು ಕಾಂಗ್ರೆಸ್‌ನ ಒಂದು ಬಣ ಪ್ರಯತ್ನಿಸುತ್ತಿದೆ ಎನ್ನಲಾಗಿದ್ದು, ಇದು ಸಿದ್ದರಾಮಯ್ಯ ಆಪ್ತರಲ್ಲಿ ಆತಂಕ ಮೂಡಿಸಿದೆ. ಕೋಲಾರದಲ್ಲಿ ಜಯಗಳಿಸುವುದು ಬಹಳಷ್ಟು ಕಷ್ಟ ಹಾಗೂ ಬಹುತೇಕ ಅಸಾಧ್ಯ ಎನ್ನುವ ಹಂತ ತಲುಪಿದಾಗ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಆದರೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: Siddaramaiah: ಕೋಲಾರದಿಂದ ಸ್ಪರ್ಧೆಯನ್ನು ಖಚಿತಪಡಿಸಿದ ಸಿದ್ದರಾಮಯ್ಯ: ಮಾನಸಿಕವಾಗಿ ಸಿದ್ಧ ಎಂದ ಮಾಜಿ ಸಿಎಂ