ವಿಜಯನಗರ: ಕಾಯಿಲೆ ಬಿದ್ದಾಗ ಯಾರ ರಕ್ತ ಆದರೂ ಕೊಡಿ ಬದುಕಿದ್ರೆ ಸಾಕು ಎಂದು ಪಡೆದು, ಬದುಕಿದ ಮೇಲೆ ಜಾತಿ, ಧರ್ಮ ಎಂದು ಸ್ವಾರ್ಥಿಗಳಾದರೆ ಹೇಗೆ? ಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಇದೇ ಕಾರಣಕ್ಕೆ ಗೌರವಿಸುವುದು ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ತಿಳಿಸಿದ್ದಾರೆ.
ಹಂಪಿ ಹೇಮಕೂಟದಲ್ಲಿ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್, ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿಯವರ 33ನೇ ಪೀಠಾರೋಹಣ ವಾರ್ಷಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ ಜನ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಶ್ರೀ ದಯಾನಂದಪುರಿ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ನಂತರ ಕಳೆದ 32 ವರ್ಷಗಳಿಂದ ದೇವಾಂಗ ಸಮಾಜದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡಿದ್ದಾರೆ. ಶ್ರೀಗಳು ಅತ್ಯಂತ ಸರಳ ಸ್ವಭಾವದವರು. ಸಮಾಜದ ಬಗೆಗೆ ಅಪಾರ ಕಾಳಜಿ ಹೊಂದಿದ್ದಾರೆ.
ಸಮಾಜದಲ್ಲಿ ಸಮಾನತೆ ಸ್ಥಾಪನೆಯಾದಾಗ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಮಾನವೀಯತೆ, ಸಾಮಾರಸ್ಯ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಯಾರೂ ಕೂಡ ನಾನು ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ, ಹುಟ್ಟಿದ ಮೇಲೆ ಮನುಷ್ಯರಾಗಿ ಬದುಕುವುದು ಮುಖ್ಯ. ಅದಕ್ಕಾಗಿ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ? ಎಂದಿದ್ದಾರೆ.
ಶೋಷಿತ ಜನರಿಗೆ ಮತ ಚಲಾಯಿಸುವ ಹಕ್ಕು ಸಿಕ್ಕರೆ ಸಾಲದು ಅಧಿಕಾರವೂ ಸಿಗಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸಮಾಜದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳು ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಾನತೆ ಸಾಧ್ಯ. ಸಂವಿಧಾನ ಜಾರಿಯಾದ ಮೇಲೆ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ನಾಶವಾದದ್ದು. ಅಧಿಕಾರ ಯಾವುದೇ ಒಂದು ಜಾತಿಯ ಸ್ವತ್ತಲ್ಲ.
ಈ ದೇಶ ಯಾವುದೋ ಒಂದು ಧರ್ಮದ ಆಧಾರದ ಮೇಲೆ ರಚನೆಯಾದ ದೇಶವಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಸಹಿಷ್ಣುತೆ ಇರಬೇಕು. ಕಾಯಕವೇ ಕೈಲಾಸ ಎಂದು ಬಸವಾದಿ ಶರಣರು ಹೇಳಿದ್ದರು. ಮನುಷ್ಯತ್ವ, ಮನುಷ್ಯ ಸಂಬಂಧಗಳು ಮುಖ್ಯ. ಕಾಯಿಲೆ ಬಿದ್ದಾಗ ಯಾರ ರಕ್ತ ಆದರೂ ಕೊಡಿ ಬದುಕಿದ್ರೆ ಸಾಕು ಎಂದು ಪಡೆದು, ಬದುಕಿದ ಮೇಲೆ ಜಾತಿ, ಧರ್ಮ ಎಂದು ಸ್ವಾರ್ಥಿಗಳಾದರೆ ಹೇಗೆ? ಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಇದೇ ಕಾರಣಕ್ಕೆ ಗೌರವಿಸುವುದು. ಅವರದು ನಿಸ್ವಾರ್ಥ ಬದುಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಕೊರೋನಾ ಕಾಲದಲ್ಲಿ ನೇಕಾರರು, ರಿಕ್ಷಾ ಚಾಲಕರು, ಸವಿತಾ ಸಮಾಜದವರು, ಚಾಲಕರು ಮುಂತಾದ ಜನ ಕಷ್ಟದಲ್ಲಿದ್ದಾರೆ, ಅವರಿಗೆ ತಲಾ ಹತ್ತು ಸಾವಿರ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದೆ. ಆದರೆ ಅವರು ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ಕೊರೋನಾ ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ, ಕಚ್ಚಾ ಸಾಮಾಗ್ರಿ ಬೆಲೆ ಜಾಸ್ತಿಯಾಗಿ, ಉದ್ಯೋಗ ಇಲ್ಲದೆ 36 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡರು. ಬಹಳ ನೋವಿನ ವಿಚಾರವಿದು. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದು, ನಿಮ್ಮ ಬದುಕಿಗೆ ಘನತೆ ತಂದು ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆಯ ಮಾತುಗಳನ್ನು ಆಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಮಾಜಿ ಸಚಿವರಾದ ಸಿ.ಟಿ.ರವಿ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ