ಕೋಲಾರ: ಕಾಂಗ್ರೆಸ್‌ನ ಮಹಾನಾಯಕ ಸಿದ್ದರಾಮಯ್ಯ ಅವರು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಫೈನಲ್ ಮಾಡುವ ದೃಷ್ಟಿಯಿಂದ ಭಾನುವಾರ ಕೋಲಾರಕ್ಕೆ ಆಗಮಿಸುತ್ತಿದ್ದಾರೆ. ಅವರ ಸ್ವಾಗತಕ್ಕೆ ನಾಯಕರು ಮತ್ತು ಕಾರ್ಯಕರ್ತರು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೭೫ರ ಕೋಲಾರ ಗಡಿ ರಾಮಸಂದ್ರ ಗೇಟ್ ಬಳಿ ಬೆಳಗ್ಗೆ ಹತ್ತು ಗಂಟೆಗೆ ಸಿದ್ಧರಾಮಯ್ಯ ಅವರಿಗೆ ಅದ್ದೂರಿ ಸ್ವಾಗತಕ್ಕೆ ಎಲ್ಲರೂ ಸಜ್ಜುಗೊಂಡಿದೆ. ಇಲ್ಲಿ ಅಭಿಮಾನಿಗಳೇ ಮುಂದೆ ನಿಂತು ಸ್ವಾಗತಿಸಲು ಅಣಿಯಾಗಿದ್ದಾರೆ. ಕೋಲಾರಮ್ಮನ ಪೂಜೆಯೊಂದಿಗೆ ಸಿದ್ದು ಪ್ರವಾಸ ಆರಂಭವಾಗಲಿದ್ದು, ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ ಬಳಿ ಬೃಹತ್ ಗಾತ್ರದ ಸೇಬಿನ ಹಾರ ಹಾಕಲಾಗುತ್ತದೆ. ೩೦೦ ಕೆಜಿ ಸೇಬಿನ ಹಾರವನ್ನು ಅಣಿ ಮಾಡಲಾಗಿದೆ.
ಯಾರೆಲ್ಲ ಇರುತ್ತಾರೆ ಜತೆಯಲ್ಲಿ?
ಮಾಜಿಸ್ಪೀಕರ್ ಕೆ ಆರ್ ರಮೇಶ್ ಕುಮಾರ್, ಶಾಸಕರಾದ ಕೆ.ಶ್ರೀನಿವಾಸಗೌಡ, ನಂಜೇಗೌಡ, ಎಸ್ಎನ್ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು ಈಗಾಗಲೇ ಮದುವೆ ಮನೆ ಸಿದ್ಧತೆಯ ಹಾಗೆ ಓಡಾಡುತ್ತಿದ್ದಾರೆ. ಆದರೆ, ಅತ್ಯಂತ ಪ್ರಮುಖವಾಗಿರುವ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರ ಟೀಮ್ ಮಾತ್ರ ಹೆಚ್ಚು ಹೊರಗೆ ಕಾಣಿಸಿಕೊಳ್ಳುತ್ತಿಲ್ಲ.
ಸಿದ್ದರಾಮಯ್ಯ ಪ್ರವಾಸದ ವೇಳೆ ಕೆ.ಎಚ್. ಮುನಿಯಪ್ಪ, ಶಾಸಕಿ ರೂಪಕಲಾ, ಸೇರಿದಂತೆ ಕೆ.ಹೆಚ್. ಬಣದ ಮುಖಂಡರು ಗೈರಾಗುವ ಸಾಧ್ಯತೆ ಹೆಚ್ಚು ಕಾಣಿಸುತ್ತಿದೆ. ಕೆ.ಎಚ್ ಮುನಿಯಪ್ಪ ಬಣದ ಕೆಲವು ಮುಖಂಡರು ಸಿದ್ದರಾಮಯ್ಯ ಅವರಿಗೆ ಮಾಲಾರ್ಪಣೆ ಮಾಡಿ ಹಿಂತಿರುಗುವ ಸಾಧ್ಯತೆ ದಟ್ಟವಾಗಿದೆ. ಅವರು ಇಷ್ಟಕ್ಕೇ ಸೀಮಿತವಾದರೆ ಸಿದ್ದರಾಮಯ್ಯ ಮುಂದೇನು ಮಾಡಲಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿದೆ.
ಕೆ.ಎಚ್. ಮುನಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದಲೇ ಹೊರಹೋಗುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಬಿಜೆಪಿ ಜತೆಗೆ ಮಾತುಕತೆ ನಡೆಸಿಯೂ ಇದ್ದಾರೆ. ಇಂಥ ಸ್ಥಿತಿಯಲ್ಲೂ ಜತೆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಎಷ್ಟರ ಮಟ್ಟಿಗೆ ಇದು ಸತ್ಯವಾಗಲಿದೆ ಎನ್ನುವುದು ಮುಂದೆ ತಿಳಿಯಲಿದೆ.
ಜೆಡಿಎಸ್ ಫ್ಲೆಕ್ಸ್ ಮೇಲೆ ಸಿದ್ದರಾಮಯ್ಯ ಬ್ಯಾನರ್!
ಕೋಲಾರ ಗಡಿ ಭಾಗವಾದ ರಾಮಸಂದ್ರ ಎಂಬಲ್ಲಿ ಸಿದ್ದರಾಮಯ್ಯ ಅವರ ಅದ್ಧೂರಿ ಸ್ವಾಗತಕ್ಕೆ ಕಾರ್ಯಕರ್ತರು ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಆದರೆ, ಅವರು ಫ್ಲೆಕ್ಸ್ ಹಾಕಿದ್ದು ಈ ಹಿಂದೆ ಜೆಡಿಎಸ್ ಪಂಚರತ್ನ ಕಾರ್ಯಕ್ರಮಕ್ಕೆಂದು ಹಾಕಿದ ಫ್ಲೆಕ್ಸ್‌ಗಳ ಮೇಲೆ!
ಮಳೆ ಕಾರಣಕ್ಕೆ ಪಂಚರತ್ನ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಆದರೆ, ಆದ್ದರಿಂದ ಜೆಡಿಎಸ್ ಬ್ಯಾನರ್ ಗಳನ್ನು ತೆರವು ಮಾಡಲಾಗಿಲ್ಲ. ಹೀಗಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಹಾಕಿರುವ ಬ್ಯಾನರ್‌ಗಳ ಮೇಲೆಯೇ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದ ಬ್ಯಾನರ್ ಹಾಕಲಾಗಿದೆ.
ಇದನ್ನೂ ಓದಿ | Siddaramaiah in Kolar | ಸಿದ್ದರಾಮಯ್ಯ ಅವರ ಕೋಲಾರ ಟೆಸ್ಟ್‌ಗೆ ಗ್ರೌಂಡ್ ರೆಡಿ, ಇಂದು ಎಲ್ಲೆಲ್ಲಿ ರೌಂಡ್ಸ್?