ಬೆಂಗಳೂರು: ನಾನೇನು ನಾಮಿನೇಷನ್ ಹಾಕ್ಲಿಕೆ ಹೋಗ್ತಿಲ್ಲ. ಜನರ ಜತೆ ಮಾತನಾಡ್ಲಿಕೆ ಹೋಗ್ತಿದೇನೆ: ಕೋಲಾರದಲ್ಲಿ ಹಲವು ಕಾರ್ಯಕ್ರಮಗಳಿಗಾಗಿ ಬೆಂಗಳೂರಿನಿಂದ ಹೊರಟ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತು.
ಮುಂದಿನ ಚುನಾವಣೆಗಾಗಿ ಕ್ಷೇತ್ರದ ಹುಡುಕಾಟದಲ್ಲಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾನುವಾರ ಕೋಲಾರದಲ್ಲಿ ಧಾರ್ಮಿಕ ಕ್ಷೇತ್ರಗಳು, ಸಮುದಾಯಗಳ ನಾಯಕರು ಸೇರಿದಂತೆ ಹಲವರನ್ನು ಭೇಟಿಯಾಗಿ ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧ್ಯವೇ ಎಂಬ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಇದಕ್ಕಾಗಿ ತಮ್ಮ ನಿವಾಸದಿಂದ ವಿಶೇಷವಾಗಿ ರೂಪಿಸಲಾದ ಬಸ್ಸಿನಲ್ಲಿ ಕೋಲಾರಕ್ಕೆ ಹೊರಟ ಹೊತ್ತಿನಲ್ಲಿ ಅವರು ಮಾತನಾಡಿದರು. ʻʻನನಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂಬ ಒತ್ತಡ ಇದೆ. ಕೋಲಾರದಿಂದ ಹೆಚ್ಚು ಒತ್ತಡ ಇದೆ. ಹೀಗಾಗಿ ಇವತ್ತು ಅಲ್ಲಿಗೆ ಹೋಗ್ತಿದ್ದೇನೆ. ನಾನೇನು ನಾಮಿನೇಷನ್ ಹಾಕಕ್ಕೆ ಹೋಗ್ತಿಲ್ಲʼʼ ಎಂದರು ಸಿದ್ದರಾಮಯ್ಯ.
ʻʻಅನೇಕ ನಾಯಕರು ಕೋಲಾರದಿಂದ ಸ್ಪರ್ಧೆ ಮಾಡಿ ಅಂತ ಕೇಳ್ತಿದ್ದಾರೆ. ಶ್ರೀನಿವಾಸ ಗೌಡ ಅವರು ಕಾಂಗ್ರೆಸ್‌ಗೆ ಬಂದಿದ್ದಾರೆ. ನನ್ನನ್ನೇ ನಿಂತುಕೊಳ್ಳಿ ಅಂತಿದ್ದಾರೆ. ಬಾದಾಮಿಯಲ್ಲೂ ನಿಲ್ಲಿ ಅಂತಿದ್ದಾರೆ. ಹೆಬ್ಬಾಳದವರು ಸಹ ಕರೆಯುತ್ತಿದ್ದಾರೆ. ನಾನು ಇನ್ನೂ ತೀರ್ಮಾನ ಮಾಡಿಲ್ಲ. ಅಂತಿಮವಾಗಿ ಹೈಕಮಾಂಡ್ ನಾನು ಎಲ್ಲಿ ನಿಲ್ಲಬೇಕು ಅಂತ ತೀರ್ಮಾನ ಮಾಡುತ್ತದೆʼʼ ಎಂದು ಹೇಳಿದರು.
ಇವತ್ತಿನ ಕೋಲಾರ ಭೇಟಿಯ ಬಳಿಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುತ್ತೀರಾ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಯಾವುದೇ ಉತ್ತರ ಕೊಡಲಿಲ್ಲ. ಬಸ್‌ನಲ್ಲಿ ಹೊರಟ ಸಿದ್ದರಾಮಯ್ಯ ಅವರಿಗೆ ಎಂಎಲ್‌ಸಿ ನಜೀರ್ ಅಹಮದ್, ಶಾಸಕರಾದ ಬೈರತಿ ಸುರೇಶ್, ಎಂಆರ್ ಸೀತಾರಾಮ್ ಸಾಥ್ ನೀಡಿದ್ದಾರೆ.
ಕೋಲಾರದಿಂದ ಸ್ಪರ್ಧಿಸಿ ಎಂದು ಬೇಡಿಕೆ ಇಟ್ಟಿದ್ದೇವೆ ಎಂದ ನಜೀರ್ ಅಹಮದ್
ಇದಕ್ಕೂ ಮುನ್ನ ಮಾಜಿ ಸಚಿವ ಎಂ.ಆರ್. ಸೀತಾರಾಮ್, ಪರಿಷತ್ ಸದಸ್ಯ ನಜೀರ್ ಅಹಮದ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿ ಮಾತನಾಡಿದ ನಜೀರ್ ಅಹಮದ್ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಬೇಡಿಕೆ ಇಟ್ಟಿದ್ದಾಗಿ ಹೇಳಿದರು.
ʻʻ2023ರಲ್ಲಿ ಕೋಲಾರದಿಂದ ಸ್ಪರ್ಧೆ ಮಾಡೋ ಬಗ್ಗೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ನಾವು ಸ್ಪರ್ಧೆ ಮಾಡಿ ಅಂತ ಸಿದ್ದರಾಮಯ್ಯ ಅವರಿಗೆ ಕೇಳಿದ್ದೇವೆ. ಆರು ತಿಂಗಳಿಂದ ನಾವು ಕೆಲಸ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವರು ಬಾದಾಮಿ ಜನರನ್ನು ಕೇಳಿ ತೀರ್ಮಾನ ಮಾಡುತ್ತೇನೆ ಅಂತ ಹೇಳಿದ್ದಾರೆ. ಅವರು ಇನ್ನೂ ಬಾದಾಮಿಯಲ್ಲಿ ಸಭೆ ಮಾಡಿಲ್ಲ. ಸಭೆ ಮಾಡಿದ ಬಳಿಕ ತೀರ್ಮಾನ ಮಾಡ್ತಾರೆʼʼ ಎಂದರು ನಜೀರ್ ಅಹಮದ್ ಹೇಳಿದ್ದಾರೆ.
ʻʻಸಿದ್ಸರಾಮಯ್ಯ ಕೋಲಾರಕ್ಕೆ ಬಂದ್ರೆ ನಾವು ಸ್ವಾಗತ ಮಾಡ್ತೀವಿ. ಸಹಜವಾಗಿ ಪ್ರತಿ ಚುನಾವಣೆಗಳಲ್ಲಿ ಯಾವುದೇ ಪಕ್ಷದವರು ಚುನಾವಣೆ ಪ್ರಚಾರ ಪ್ರಾರಂಭ ಮಾಡಬೇಕಾದರೂ ಕೋಲಾರದಿಂದ ಮಾಡ್ತಾರೆ. ಸಿದ್ದರಾಮಯ್ಯ ಅಹಿಂದ ಮಾಡೋವಾಗಲೂ ಕೋಲಾರದಲ್ಲಿ ಪ್ರಾರಂಭ ಮಾಡಿದ್ರು. 2023ರ ಚುನಾವಣೆಗೆ ಈಗ ಸಿದ್ದರಾಮಯ್ಯ ಪ್ರಚಾರ ಪ್ರಾರಂಭ ಮಾಡ್ತಿದ್ದಾರೆʼʼ ಎಂದ ನಜೀರ್ ಅಹಮದ್, ʻʻಸಿದ್ದರಾಮಯ್ಯ ಮಾಸ್ ಲೀಡರ್. ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ತಾರೆ. 224 ಕ್ಷೇತ್ರದಲ್ಲಿ ಎಲ್ಲೇ ನಿಂತರು ಸಿದ್ದರಾಮಯ್ಯ ಗೆಲ್ತಾರೆʼʼ ಎಂದರು.
ಪ್ರಚಾರಕ್ಕೆ ಸಿದ್ಧವಾಗಿದೆ ಸಿದ್ದು ಬಸ್
ಈ ನಡುವೆ ೨೦೨೩ರ ಚುನಾವಣೆಯ ಪ್ರಚಾರ ಮತ್ತು ಓಡಾಟಕ್ಕಾಗಿ ಸಿದ್ದರಾಮಯ್ಯ ಅವರಿಗಾಗಿ ಒಂದು ಬಸ್ ಸಿದ್ಧಪಡಿಸಲಾಗಿದ್ದು, ಅದನ್ನು ಭಾನುವಾರ ಮೊದಲ ಬಾರಿ ಕೋಲಾರಕ್ಕೆ ಹೋಗಲು ಬಳಸಲಾಗಿದೆ.
ಬಸ್ಸಿನಲ್ಲಿ ಚಾಲಕ ಹೊರತುಪಡಿಸಿ ಆರು ಜನ ಕೂತು ಪಯಣ ಮಾಡಲು ಸೀಟ್ ವ್ಯವಸ್ಥೆ ಇದೆ. ಬಸ್ಸಿನ ಮೇಲೆ ನಿಂತು ಭಾಷಣ ಮಾಡಲು ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.
ವಿಶ್ರಾಂತಿ ಪಡೆಯಲು ಮಂಚದ ವ್ಯವಸ್ಥೆ, ಕೈ ತೊಳೆಯಲು ವಾಷ್ ಬೇಸಿನ್, ಸುಸಜ್ಜಿತವಾದ ಟಾಯ್ಲೆಟ್ ರೂಂ ಇರುವ ಈ ಏರ್ ಕಂಡೀಷನ್ಡ್ ಬಸ್ಸಿನಲ್ಲಿ ಮೂರು ಎಲ್‌ಇಡಿ ಟೀವಿಗಳಿವೆ.
ಇದನ್ನೂ ಓದಿ | Siddaramaiah in Kolar | ಸಿದ್ದರಾಮಯ್ಯ ಅವರ ಕೋಲಾರ ಟೆಸ್ಟ್‌ಗೆ ಗ್ರೌಂಡ್ ರೆಡಿ, ಇಂದು ಎಲ್ಲೆಲ್ಲಿ ರೌಂಡ್ಸ್?