ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನಲ್ಲಿ ಇನ್ನೂ ಹೊಂದಾಣಿಕೆ ಕಾಣುತ್ತಿಲ್ಲ. ಈಗ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಅವರು ಮುಂದಿನ 2.5 ವರ್ಷಕ್ಕೆ ಅಧಿಕಾರವನ್ನು ಬಿಟ್ಟುಕೊಡುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತಿತ್ತಾದರೂ ಇದನ್ನು ಸೋಮವಾರ (ಮೇ 22) ಅಲ್ಲಗಳೆದಿದ್ದ ಸಚಿವ ಎಂ.ಬಿ. ಪಾಟೀಲ್, ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿದ್ದರು. ಇದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ, ಮಂಗಳವಾರವೂ (ಮೇ 23) ಈ ಮಾತನ್ನೇ ಪುನುರುಚ್ಚಾರ ಮಾಡಿರುವ ಎಂ.ಬಿ. ಪಾಟೀಲ್ (MB Patil), ಪಕ್ಷದ ವರಿಷ್ಠರು ಹೇಳಿದ್ದನೇ ನಾನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿರುವ ಡಿ.ಕೆ. ಶಿವಕುಮಾರ್, “ಡೋಂಟ್ ಡಿಸ್ಟರ್ಬ್ ಮಿ” ಎಂದು ಹೇಳಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಇದರ ಬಗ್ಗೆ ಮಂಗಳವಾರ ಪುನಃ ಸ್ಪಷ್ಟೀಕರಣ ನೀಡಿರುವ ಸಚಿವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂ.ಬಿ. ಪಾಟೀಲ್, ನಾನು ಪದೇ ಪದೆ ಈ ಬಗ್ಗೆ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಎಂದು ನಮ್ಮ ನಾಯಕರಾದ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅವರು ಏನು ಹೇಳಿದ್ದರೋ ನಾನೂ ಅದನ್ನೇ ಹೇಳಿದ್ದೇನೆ. ಅಧಿಕಾರ ಹಂಚಿಕೆ ಇಲ್ಲ, ಅದೇನಿದ್ದರೂ ಜನರ ಜತೆ ಮಾತ್ರ ಎಂದು ಹೇಳಿದ್ದರು. ಇದರಲ್ಲಿ ನನ್ನದು ಯಾವುದೇ ಹೇಳಿಕೆ ಇಲ್ಲ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಎಐಸಿಸಿ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದನ್ನು ಮಾತ್ರವೇ ನಾನು ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರಿಯುತ್ತಾರೆ ಎಂದು ಹೇಳಿದ್ದರು. ನಾನೂ ಅದನ್ನೇ ಹೇಳಿದ್ದೇನೆ ಎಂದು ತಿಳಿಸಿದರು.
ಖಾತೆ ಹಂಚಿಕೆ ವಿಚಾರ ಸಿಎಂ ಪರಮಾಧಿಕಾರ
ಇನ್ನು ಖಾತೆ ಹಂಚಿಕೆ ವಿಚಾರ ಸಿಎಂ ಪರಮಾಧಿಕಾರವಾಗಿದೆ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟ ವಿಚಾರ. ನಮ್ಮ ಆದ್ಯತೆಗಳ ಬಗ್ಗೆ ನಾವು ಕೂಡ ಹೇಳಿದ್ದೇವೆ. ಅಂತಿಮವಾಗಿ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡಬೇಕು. ಸಂಧಾನ ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
ಡಿಸ್ಟರ್ಬ್ ಆದ್ರಾ ಡಿಸಿಎಂ ಡಿ.ಕೆ ಶಿವಕುಮಾರ್?
ಸಚಿವ ಎಂ.ಬಿ. ಪಾಟೀಲ್ ಹೇಳಿಕೆಯಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಡಿಸ್ಟರ್ಬ್ ಆದಂತೆ ಕಂಡುಬಂದರು. ವಿಧಾನಸೌಧಕ್ಕೆ ಆಗಮಿಸಿದ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಡೋಂಟ್ ಡಿಸ್ಟರ್ಬ್ ಮಿ ಎಂದಷ್ಟೇ ಹೇಳಿ ಒಳ ನಡೆದರು. ಈ ಮೂಲಕ ಪರೋಕ್ಷವಾಗಿ ಎಂ.ಬಿ. ಪಾಟೀಲ್‌ಗೆ ಅವರು ಎಚ್ಚರಿಕೆಯನ್ನು ನೀಡಿದ್ದಾರೆಂದೇ ವಿಶ್ಲೇಷಿಸಲಾಗುತ್ತಿದೆ. ಒಟ್ಟಾರೆ ಈ ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಪವರ್ ಶೇರಿಂಗ್ ಹೇಳಿಕೆಗಳೆಲ್ಲವೂ ಅಪ್ರಸ್ತುತ- ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎನ್ನುವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವೇ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: Assembly session: ಸ್ಪೀಕರ್‌ಗಿರಿಗೆ ಒಪ್ಪಿದ ಯು.ಟಿ ಖಾದರ್; ಮುಸ್ಲಿಂ ಸಮುದಾಯದ ಮೊದಲ ಸ್ಪೀಕರ್, 2 ವರ್ಷದ ಶರತ್ತು
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಒಳಗೆ ನಡೆದಿರುವ ಚರ್ಚೆ ಕೇವಲ ನಾಲ್ಕು ಜನರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ವೇಣುಗೋಪಾಲ್ ಅವರಿಗೆ ಮಾತ್ರ ಈ ಬಗ್ಗೆ ಮಾಹಿತಿ ಇದೆ. ಈಗ ಪವರ್ ಶೇರಿಂಗ್ ಹೇಳಿಕೆಗಳೆಲ್ಲವೂ ಅಪ್ರಸ್ತುತ. ಶಾಸಕಾಂಗ ಸಭೆಯಲ್ಲಿ ಅಧಿಕಾರದ ಅವಧಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇನ್ನು ಈ ವಿಚಾರವಾಗಿ ಎಂ.ಬಿ. ಪಾಟೀಲ್‌ಗೆ ಏನು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಮಾಹಿತಿಯನ್ನು ಮಾತ್ರ ಹೇಳಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.