Site icon Vistara News

Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್;‌ ಮುಗಿಯದ ಕೈ ಕಿತ್ತಾಟ!

Siddaramaiah and Minister Venkatesh

ಚಾಮರಾಜನಗರ: ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿ ಇದ್ದಾರೆ. ಪೂರ್ಣಾವಧಿಗೆ ಅವರೇ ಇರುತ್ತಾರೆ ಎಂದು ಸಚಿವ ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಾಳಯದಲ್ಲಿ ಪೂರ್ಣಾವಧಿ ಸಿಎಂ ಚರ್ಚೆ ಇನ್ನೂ ನಿಂತಿಲ್ಲ. ಇಂತಹ ಹೇಳಿಕೆ ವಿರುದ್ಧ ಸಂಸದ ಡಿ.ಕೆ. ಸುರೇಶ್‌ ಸೋಮವಾರವಷ್ಟೇ ಗರಂ ಆಗಿ ಸಚಿವ ಮಹದೇವಪ್ಪ ವಿರುದ್ಧ ಹರಿಹಾಯ್ದಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ (CM Siddaramaiah) ಬೆಂಬಲಿಗರು ಮತ್ತೆ ಈ ಚರ್ಚೆಯನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಸರಿಯಾಗಿ ಒಂದು ತಿಂಗಳು ಗತಿಸಿದೆ. ಆದರೆ, ಆಂತರಿಕ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ. ಈ ಮೊದಲು ಯಾರು ಸಿಎಂ ಆಗಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ, ಸಭೆಗಳು ನಡೆದು ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ, ಡಿ.ಕೆ. ಶಿವಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ ನೇಮಕ ಮಾಡಲಾಗಿತ್ತು. ಆದರೆ, ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯನ್ನು 50:50 ಅಧಿಕಾರ ಹಂಚಿಕೆ ಸೂತ್ರದಡಿ ಮಾಡಲಾಗಿದೆ ಎಂಬ ಗುಸು ಗುಸು ಮುಂದುವರಿಯುತ್ತಲೇ ಇದೆ. ಆದರೆ, ಇದನ್ನು ಸುಳ್ಳು ಎಂದು ಬಿಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು ಆಗಾಗ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೂ ಕಾರಣವಾಗುತ್ತಿದೆ.

ಇದನ್ನೂ ಓದಿ: Yoga Day 2023: ಇದು ಯೋಗಾಭ್ಯಾಸದ ಸುಯೋಗ; ಫೋಟೊ-ವಿಡಿಯೊ ಮಾಡಿ ವಿಸ್ತಾರ ನ್ಯೂಸ್‌ಗೆ ಕಳುಹಿಸಿ

ಚಾಮರಾಜನಗರದಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿಯಾಗಿದ್ದಾರೆ. ಮುಂದೂ ಸಹ ಅವರೇ ಸಿಎಂ ಆಗಿರಲಿದ್ದಾರೆ. ಯಾವುದೇ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಪೂರ್ಣಾವಧಿ ಸಿಎಂ ಅವರೇ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗರಂ ಆಗಿದ್ದ ಡಿ.ಕೆ. ಸುರೇಶ್‌

ಸಿಎಂ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಆಗಾಗ ಪೂರ್ಣಾವಧಿ ಸಿಎಂ ಪ್ರಸ್ತಾಪ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹೋದರ, ಸಂಸದ ಡಿ.ಕೆ. ಸುರೇಶ್‌ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಈಚೆಗಷ್ಟೇ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷವೂ ಆಡಳಿತ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಗ್ರರಾಗಿದ್ದ ಸಂಸದ ಡಿ.ಕೆ. ಸುರೇಶ್‌, ಮಹದೇವಪ್ಪ ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ವಿಷಯಗಳ ಬಗ್ಗೆಯೇ ಆಸಕ್ತಿ ಜಾಸ್ತಿ ಎಂದು ವ್ಯಂಗ್ಯವಾಡಿದ್ದರು.

ಮಹದೇವಪ್ಪ ಅವರು ಹಿರಿಯ ರಾಜಕಾರಣಿ. ಮಹದೇವಪ್ಪ ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ? ಅವರು ಸಾಕಷ್ಟು ಐಡಿಯಾಲಜಿ ಹೊಂದಿದವರು. ಅವರಿಗೆ ಅವರದ್ದೇ ಆದ ರಾಜಕೀಯ ಶಕ್ತಿ ಇದೆ. ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆಯದ್ದರ ಬಗ್ಗೆ ಆಸಕ್ತಿ ಜಾಸ್ತಿ ಇದೆ ಎಂದು ಸಂಸದ‌ ಡಿ.ಕೆ. ಸುರೇಶ್ ಕಿಡಿಕಾರಿದ್ದರು.

ಇದನ್ನೂ ಓದಿ: Indira Canteen: ಇಂದಿರಾ ಕ್ಯಾಂಟೀನ್‌ಗೆ ಸುಸ್ವಾಗತ; ಸೋಮವಾರ ಟು ಶನಿವಾರ ತಿಂಡಿ-ತಿನಿಸಿನ ಜರ್ನಿ ಹೀಗಿದೆ!

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕತ್ವವೇ ಕಾರಣ ಎಂದು ಡಿ.ಕೆ. ಸುರೇಶ್‌ ಹೇಳುವ ಮೂಲಕ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಪರೋಕ್ಷವಾಗಿ ತಿಳಿಸಿಕೊಟ್ಟಿದ್ದರು.

Exit mobile version