Site icon Vistara News

ಸಿದ್ದರಾಮಯ್ಯ ಅಸಮರ್ಥ ಸಿಎಂ, ಇವ್ರಿಗೆ ರಾಜ್ಯದ ಆಂತರಿಕ ಭದ್ರತೆ ಕಾಪಾಡಲೂ ಸಾಧ್ಯವಾಗ್ತಿಲ್ಲ: ಪ್ರಲ್ಹಾದ್‌ ಜೋಶಿ ಕಿಡಿ

Siddaramaiah is an incompetent CM says Pralhad Joshi

ಬೆಂಗಳೂರು: ರಾಜ್ಯದ ಆಂತರಿಕ ಭದ್ರತೆಯನ್ನೂ ಕಾಪಾಡಿಕೊಳ್ಳಲು ಕಾಂಗ್ರೆಸ್ ಅಶಕ್ತ ಮತ್ತು ಅಸಮರ್ಥವಾಗಿದೆ. ಸಿದ್ದರಾಮಯ್ಯ ಒಬ್ಬ ಅಸಮರ್ಥ ಸಿಎಂ ಆಗಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ‌ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಸ್ಫೋಟದ (Blast in Bengaluru) ಬಗ್ಗೆ ಟ್ವಿಟ್ ಮಾಡಿರುವ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಆಂತರಿಕ ಭದ್ರತೆ ಕಾಪಾಡಿಕೊಳ್ಳುವಲ್ಲಿ ಕಾಂಗ್ರೆಸ್, ವಿಫಲ ಆಡಳಿತ ಪಕ್ಷವಾಗಿರುವುದು ಮತ್ತೆ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಪರಿಸ್ಥಿತಿ ಇಂದು ಎಲ್ಲಿಗೆ ಬಂದಿದೆ? ಎಂದರೆ ಜನ ಸದಾ ಆತಂಕದಲ್ಲೇ ಇರುವಂಥ ಸನ್ನಿವೇಶ ಕಾಂಗ್ರೆಸ್ ಆಡಳಿತದಲ್ಲಿ ಉದ್ಭವಿಸಿದೆ. ಶಾಸಕಾಂಗದ ದೇವಾಲಯ ಎಂದೇ ಕರೆಯಲ್ಪಡುವ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ‘ಕೈ’ ಎತ್ತಿ ಜೈಕಾರ ಕೂಗಿದರು. ಅದರ ಬೆನ್ನಲ್ಲೇ ಈಗ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ! ಇದು ನಿಜಕ್ಕೂ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಸ್ಥಿತಿಯನ್ನು ಉಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Blast in Bengaluru: ಬಾಂಬ್‌ ಇಟ್ಟು ಇಡ್ಲಿ ತಿಂದ; 1 ಗಂಟೆಗೆ ಟೈಮರ್‌ ಇಟ್ಟ: ಪಿನ್‌ ಟು ಪಿನ್‌ ಮಾಹಿತಿ ಬಿಚ್ಚಿಟ್ಟ ಡಿಕೆಶಿ

ಆಡಳಿತ ವೈಫಲ್ಯಕ್ಕೆ ʼಕೈ’ಗನ್ನಡಿ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಸಮರ್ಥ ಆಡಳಿತ ಮತ್ತು ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಈ ಎರಡೂ ಪ್ರಕರಣಗಳು ಕೈಗನ್ನಡಿ. ಇನ್ನು ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಉಳಿಸಿಕೊಳ್ಳಲು ತೋರಿದ ದಕ್ಷತೆಯನ್ನು ರಾಜ್ಯದ ಆಂತರಿಕ ಭದ್ರತೆ ಬಗ್ಗೆ ತೋರಿಲ್ಲ. ರಾಜ್ಯ ಕಂಡ ಅತೀ ಅಸಮರ್ಥ ಆಡಳಿತಗಾರ ಎಂದರೆ ಅದು ಸಿದ್ದರಾಮಯ್ಯ ಎಂಬುದು ಇದರಿಂದ ಸಾಬೀಗುತ್ತಿದೆ ಎಂದು ಹರಿ ಹಾಯ್ದಿದ್ದಾರೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಇಲ್ಲಿನ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಿಗೂಢ ಸ್ಫೋಟವು (Blast in Rameshwaram Cafe) ನಾಗರಿಕರನ್ನು ತಲ್ಲಣಗೊಳಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಘಟಕದಿಂದ ಕಟುವಾಗಿ ಟೀಕೆಗಳು ವ್ಯಕ್ತವಾಗಿವೆ. ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಕಿಡಿಕಾರಲಾಗಿದೆ. “ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ” ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಕೂಡಲೇ ಎನ್‌ಐಎಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ‌ ಬಂದ‌ ಬಳಿಕ ಒಂದಾದ ಮೇಲೆ ಒಂದು ಸರಣಿ ಘಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್‌ನಿಂದ ಹಿಡಿದು ಶಿವಮೊಗ್ಗದಲ್ಲಿ ಹಿಂದುಗಳ ಮನೆಗಳ ಮೇಲ ಕಲ್ಲು ತೂರುವವರೆಗೂ ನಡೆದಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಮನೆ ಮೇಲೆ ದಾಳಿ ನಡೆಯಿತು. ಅಮಾಯಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕೆಂದು ಆರೋಪಿಗಳ ಪರವಾಗಿ ಕಾಂಗ್ರೆಸ್ ಶಾಸಕರೇ ಮನವಿ ಮಾಡಿದ್ದಾರೆ. ಈಗ ಬೆಂಗಳೂರಿನಲ್ಲಿ ಸ್ಫೋಟ ಆಗಿದೆ. ಹಾಗಾಗಿ ಈ ಸ್ಫೋಟದ ತನಿಖೆಯನ್ನು ಕೂಡಲೇ ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಟ್ವಿಟರ್‌ನಲ್ಲೂ ಆಕ್ರೋಶ

ಇದಕ್ಕೂ ಮೊದಲು ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಗುಡುಗಿದ್ದರು. ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.

ಬಿ.ವೈ. ವಿಜಯೇಂದ್ರ ಪೋಸ್ಟ್‌ನಲ್ಲೇನಿದೆ?

“ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ.

ಕೊಲೆ, ಸುಲಿಗೆ, ಗೂಂಡಾಗಿರಿ, ಮಹಿಳಾ ದೌರ್ಜನ್ಯಗಳು ಸರಣಿ ರೂಪದಲ್ಲಿ ವರದಿಯಾಗುತ್ತಲೇ ಇವೆ. ದೇಶ ಕಂಟಕ ಶಕ್ತಿಗಳು ವಿಧಾನ ಸೌಧದೊಳಗೇ ಬಂದು “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೂಗುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಜನನಿಬಿಡ ಹೋಟೆಲ್ ಪ್ರವೇಶಿಸಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಗಾಯಗೊಳಿಸಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದೆ.

ಸುಭದ್ರ ಕರ್ನಾಟಕಕ್ಕೆ ಗಂಡಾಂತರದ ಆತಂಕ ತರುವ ಚಟುವಟಿಕೆಯನ್ನು ಬಗ್ಗುಬಡಿಯುವಲ್ಲಿ ಮೀನಮೇಷ ಎಣಿಸುತ್ತಾ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಲೆಕ್ಕಾಚಾರದ ಹೆಜ್ಜೆಗಳ ದಾರಿ ಬದಲಿಸಿಕೊಳ್ಳದೆ ಹೋದರೆ ಅಧಿಕಾರದಿಂದ ಕೆಳಗಿಳಿಸಿ ವಿಧಾನಸೌಧದಿಂದ ಹೊರ ಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ” ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಕಾಂಗ್ರೆಸ್‌ದು ತುಘಲಕ್‌ ದರ್ಬಾರ್;‌ ಬಿಜೆಪಿ ಕಟು ಟೀಕೆ

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಬಗ್ಗೆ ಕರ್ನಾಟಕ ಬಿಜೆಪಿ ಘಟಕ ಕಿಡಿಕಾರಿದ್ದು, ಇದು ಕಾಂಗ್ರೆಸ್‌ನ ತುಘಲಕ್‌ ದರ್ಬಾರ್‌ನ ಪರಿಣಾಮವಾಗಿದೆ ಎಂದು ಹೇಳಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬಿಜೆಪಿ ಪೋಸ್ಟ್‌ ಮಾಡಿದೆ.

ಬಿಜೆಪಿ ಪೋಸ್ಟ್‌ನಲ್ಲೇನಿದೆ?

ಪಾ’ಕೈ’ಸ್ತಾನ್ ಜಿಂದಾಬಾದ್ ಎಂದವರ ರಕ್ಷಣೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವ ಬ್ರದರ್, ಡಿಜಿ ಹಳ್ಳಿ- ಕೆಜಿ ಹಳ್ಳಿಯ ಪಿಎಫ್ಐ ಗಲಭೆಕೋರರು ಅಮಾಯಕರು ಎನ್ನುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ತುಘಲಕ್ ದರ್ಬಾರಿನ ಪರಿಣಾಮವೇ ಇಂದು ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಲು ಕಾರಣ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಂತೂ ರಾಜ್ಯದಲ್ಲಿ ಅರಾಜಕತೆಯನ್ನೇ ಸೃಷ್ಟಿ ಮಾಡಿದ್ದಾರೆ. ಬಂಧಿತ ಭಯೋತ್ಪಾದಕರನ್ನು ಈಗಲೇ ಉಗ್ರರೆಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಹಂತಕರ ರಕ್ಷಣೆಗೆ ಮೊದಲು ಬುನಾದಿ ಹಾಕಿದ್ದಾರೆ. ಅಧಿಕಾರಕ್ಕೆ ಬಂದ 9 ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಶಾಂತಿಯ ಬೀಡನ್ನಾಗಿ ಮಾಡಿದೆ” ಎಂದು ಬಿಜೆಪಿ ಟ್ವೀಟ್‌ ಮೂಲಕ ಆಕ್ರೋಶವನ್ನು ಹೊರಹಾಕಿದೆ.

Exit mobile version