ಶಿರಸಿ: ನನಗೆ ಕ್ಷೇತ್ರ ಇಲ್ಲ ಎಂದು ಹೇಳುತ್ತಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಟಿಕೆಟ್ ಸಿಗಲಿಲ್ಲ. ಅವರು ನನಗೆ ಕ್ಷೇತ್ರ ಇಲ್ಲ ಎಂದು ಟೀಕಿಸಿದ್ದರು. ಈಗ ಅವರಿಗೇ ಟಿಕೆಟ್ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆ ಕರೆಯುತ್ತಾರೆ. ಆದರೆ, ಒಬ್ಬ ಹಿರಿಯ ರಾಜಕಾರಣಿ, ಮಾಜಿ ಉಪ ಮುಖ್ಯಮಂತ್ರಿ ಆಗಿದ್ದ ಈಶ್ವರಪ್ಪನಿಗೆ ಪಕ್ಷ ಹೀಗೆ ಮಾಡಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಅವರು ಹಳಿಯಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯು ಈಶ್ವರಪ್ಪ ಮಾತ್ರ ಅಲ್ಲ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜತೆ ನಡೆದುಕೊಂಡ ರೀತಿ ಸಹ ಸರಿಯಲ್ಲ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಡದೇ ಇರುವುದು ಸರಿಯಲ್ಲ. ಪಕ್ಷವನ್ನು ಕಟ್ಟಿದವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಪಕ್ಷಕ್ಕೆ ಬಂದರೆ ನಾವು ಸ್ವಾಗತ ಮಾಡುತ್ತೇವೆ. ಇನ್ನು ಹಲವು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ. ನನ್ನನ್ನು ಕಟ್ಟಿಹಾಕಲು ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತ ಕ್ಯಾಂಡಿಡೇಟ್ ಸ್ಪರ್ಧೆ ಮಾಡುತ್ತಾರೆ. ಶನಿವಾರ ಅಥವಾ ಭಾನುವಾರ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರಿಗೆ ನನ್ನ ಕಂಡರೆ ಭಯ
ಬಿಜೆಪಿಯವರು ಇಂದೂ ಟಾರ್ಗೆಟ್ ಮಾಡಿದ್ದಾರೆ, ನಾಳೆಯೂ ಟಾರ್ಗೆಟ್ ಮಾಡುತ್ತಾರೆ. ನನ್ನ ಕಂಡರೆ ಬಿಜೆಪಿಯವರಿಗೆ ಭಯ. ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ, ಮೀಸಲಾತಿ ಪರಿಷ್ಕರಣೆ ಮಾಡಿದ್ದ ಬಿಜೆಪಿ ಸರ್ಕಾರದ ನಿರ್ಧಾರ ದೋಷಪೂರಿತವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ಕ್ರಮ ಒಳ್ಳೆಯದಲ್ಲ. 1995ರಿಂದ ಅವರಿಗೆ ಮೀಸಲಾತಿ ಇತ್ತು. ಬೇರೆಯವರಿಗೆ ಮೀಸಲಾತಿ ಹೆಚ್ಚಿಸಿದ್ದು ತಪ್ಪಿಲ್ಲ. ಆದರೆ, ಮುಸ್ಲಿಂ ಅವರಿಗೆ ಯಾಕೆ ತೆಗೆಯಬೇಕಿತ್ತು? ಇದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಪಡೆಯಲು ಹೀಗೆ ಮಾಡಿದರು. ಸುಪ್ರೀಂ ಕೋರ್ಟ್ ಯಾವ ತೀರ್ಪು ಕೊಡಲಿದೆ ಎಂಬ ಬಗ್ಗೆ ಕಾದು ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.
ಹಳಿಯಾಳದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಹಳಿಯಾಳದ ಧಾರವಾಡ ರಸ್ತೆಯಲ್ಲಿನ ಶಿವಾಜಿ ಬಂಟವಾಡ ಬಡಾಣೆಯಲ್ಲಿ ಸಮಾವೇಶ ನಡೆಯುತ್ತಿದ್ದು, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪರ ಕಾಂಗ್ರೆಸ್ ನಾಯಕರು ಪ್ರಚಾರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.