ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬ ಅನೇಕ ತಿಂಗಳ ಚರ್ಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ತೆರೆ ಎಳೆಯಲು ಮುಂದಾಗಿದ್ದಾರೆ. ಹಾಲಿ ಪ್ರತಿನಿಧಿಸುತ್ತಿರುವ ಬಾದಾಮಿ, ಆಪ್ತರು ಪ್ರತಿನಿಧಿಸುತ್ತಿರುವ ಕೋಲಾರ ಹಾಗೂ ಚಾಮರಾಜಪೇಟೆಯ ಬದಲಿಗೆ ಪುತ್ರ ಶಾಸಕನಾಗಿರುವ ವರುಣದಿಂದಲೇ ಸ್ಪರ್ಧೆ ಮಾಡಲು ತೀರ್ಮಾನಕ್ಕೆ ಬಂದಿದ್ದಾರೆ.
ಬಾದಾಮಿಯಲ್ಲಿ ಸ್ಥಳೀಯ ವಿರೋಧ
2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರಾದರೂ ಅಲ್ಲಿ ಜೆಡಿಎಸ್‌ನಿಂದ ಜಿ.ಟಿ. ದೇವೇಗೌಡ ಪ್ರಬಲ ಸ್ಪರ್ಧೆಯೊಡ್ಡುವ ಸೂಚನೆ ನೀಡಿದ್ದರು. ಪರೋಕ್ಷವಾಗಿ ಬಿಜೆಪಿಯೂ ಕೈಜೋಡಿಸಿದ್ದರಿಂದಾಗಿ ತಮ್ಮ ಸೋಲು ಖಚಿತ ಎಂಬುದನ್ನು ಅರಿತ ಸಿದ್ದರಾಮಯ್ಯ, ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಬಾದಾಮಿಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಜಯಗಳಿಸಿದ ಸಿದ್ದರಾಮಯ್ಯ, ನಿರೀಕ್ಷೆಯಂತೆಯೇ ಇತ್ತ ಚಾಮುಂಡೇಶ್ವರಿಯಲ್ಲಿ ಸೋಲುಂಡರು. ಆದರೆ ಇಷ್ಟು ಭಾರೀ ಅಂತರದಲ್ಲಿ, ಹೀನಾಯವಾಗಿ ಸೋತಿದ್ದು ಗಾಬರಿ ಉಂಟುಮಾಡಿತ್ತು. ಈ ಕುರಿತು ಇತ್ತೀಚೆಗೆ ಸ್ವತಃ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.
ಮತ್ತೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಲು, ಆ ಆಕ್ಷೇತ್ರ ದೂರ ಎಂಬ ಕಾರಣವನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ. ಆದರೆ ನಿಜಕ್ಕೂ ಅಲ್ಲಿನ ರಾಜಕೀಯ ಸನ್ನಿವೇಶ ಬದಲಾಗಿದೆ. ಆಗ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಬಿ.ಬಿ. ಚಿಮ್ಮನಕಟ್ಟಿ, 2021ರಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ಷೇತ್ರ ಬಿಟ್ಟುಕೊಟ್ಟರೆ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಅದನ್ನೂ ಮಾಡಲಿಲ್ಲ. ಹುಲಿಯಂತೆ ಇದ್ದ ನಾನು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಇಲಿಯಂತಾಗಿದ್ದೇನೆ. ಸಿದ್ದರಾಮಯ್ಯ ಬೇಕಿದ್ದರೆ ತಮ್ಮ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸಲಿ ಎಂದು ಹೇಳಿದ್ದರು. ಸ್ಥಳೀಯ ನಾಯಕರ ವಿರೋಧದಿಂದಾಗಿ ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದರು.
ಕೋಲಾರದಲ್ಲಿ ಕಚ್ಚಾಟ
ಜೆಡಿಎಸ್‌ನ ಕೆ. ಶ್ರೀನಿವಾಸಗೌಡ ಪ್ರತಿನಿಧಿಸುತ್ತಿರುವ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಎರಡನೇ ಆಯ್ಕೆಯಾಗಿ ಸಿದ್ದರಾಮಯ್ಯ ಪರಿಗಣಿಸಿದರು. ಕಳೆದ ವರ್ಷ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡ ಮತದಾನ ಮಾಡಿದ್ದ ಶ್ರೀನಿವಾಸಗೌಡ, ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದರು.
ಮಾಜಿ ಸಚಿವ ರಮೇಶ್ ಕುಮಾರ್ ಸೇರಿ ಕೋಲಾರದ ಸುತ್ತಮುತ್ತಲಿನ ಕಾಂಗ್ರೆಸ್ ಶಾಸಕರೂ ಈ ಮಾತಿಗೆ ದನಿಗೂಡಿಸಿದ್ದರು. ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ತಮ್ಮ ಕ್ಷೇತ್ರಗಳಲ್ಲೂ ಈ ಪ್ರಭಾವ ಉಂಟಾಗಿ ಗೆಲುವು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಇತ್ತು. ಈ ಕುರಿತು ಬೆಂಬಲಿಗರ ಮಾತನ್ನು ಕೇಳದ ರಾಜಕಾರಣಿ ಸಿದ್ದರಾಮಯ್ಯ, ಕ್ಷೇತ್ರದ ಚಿತ್ರಣವನ್ನು ತಾವೇ ಕಾಣಲು ನವೆಂಬರ್ 13ರಂದು ಕೋಲಾರಕ್ಕೆ ಒಂದು ದಿನ ಭೇಟಿ ನೀಡಿದ್ದರು. ಕೋಲಾರದಿಂದಲೇ ಸ್ಪರ್ಧಿಸಿ ಏಕೆ ಸಿಎಂ ಆಗಬಾರದು? ಎಂದು ಸ್ಪರ್ಧಿಸುವ ಆಕಾಂಕ್ಷೆಯನ್ನೂ ಬಿಚ್ಚಿಟ್ಟರು.
ಆದರೆ ಸ್ಥಳೀಯವಾಗಿ, ಮುಖ್ಯವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಬುಸುಗುಡುವ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಅಪಸ್ವರ ತೆಗೆದರು. ಈ ಹಿಂದೆ ಮುನಿಯಪ್ಪ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂಬ ಸಿಟ್ಟನ್ನು ಹೊಂದಿರುವ ಮುನಿಯಪ್ಪ, ಸಿದ್ದರಾಮಯ್ಯ ಭೇಟಿ ನೀಡಿದ ದಿನ ಕೋಲಾರದಿಂದ ಹೊರಗಿದ್ದರು. ನಂತರವೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಮ್ಮತ ಮೂಡಿಲ್ಲ. ಇದೇ ವೇಳೆ ಜೆಡಿಎಸ್ ಸಹ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಯತ್ನದಲ್ಲಿದ್ದು, ಕೋಲಾರ ಜಿಲ್ಲೆಯಿಂದಲೇ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದೆ. ಕೋಲಾರ ಸಂಸದರಾಗಿ ಬಿಜೆಪಿಯ ಮುನಿಸ್ವಾಮಿ ಇದ್ದಾರೆ. ಕಾಂಗ್ರೆಸ್ ಭಿನ್ನಮತೀಯರ ಜತೆಗೆ ಜೆಡಿಎಸ್, ಬಿಜೆಪಿ ಶಕ್ತಿಗಳೂ ಸೇರಿದರೆ ತಮ್ಮ ಗೆಲುವು ಕಷ್ಟವಾಗಬಹುದು ಎಂಬ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿದ್ದಾರೆ.
ವರುಣದಲ್ಲಿ ಸಿದ್ದರಾಮಯ್ಯ ಮಿಂಚಿನ ಸಂಚಾರ: ಮಗನಿಗಾಗಿಯೋ? ತಮಗಾಗಿಯೋ?
ಚಾಮರಾಜಪೇಟೆಯ ತೊಂದರೆ
ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಪ್ರತಿನಿಧಿಸುತ್ತಿರುವ ಚಾಮರಾಜಪೇಟೆಯಿಂದಲೇ ಕಣಕ್ಕಿಳಿಯುವ ಕುರಿತೂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದರು. ಈ ಕುರಿತು ಜಮೀರ್ ಆಸಕ್ತಿ ತೋರಿದ್ದರು. ಇಡೀ ಕ್ಷೇತ್ರ ತಮ್ಮ ವಶದಲ್ಲಿದ್ದು, ಮುಸ್ಲಿಂ ಮತಗಳೇ ನಿರ್ಣಾಯಕ ಆಗಿರುವುದರಿಂದ ಗೆದ್ದುಬರಲು ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಪಾಡಿಗೆ ಬೇರೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ನಾನು ಗೆಲ್ಲಿಸಿಕೊಂಡು ಬರುವೆ ಎಂದು ಜಮೀರ್ ಭರವಸೆ ನೀಡಿದ್ದರು.
ಆದರೆ ಕಳೆದ ವಾರವಷ್ಟೆ ಚಾಮರಾಜಪೇಟೆಯ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಎಚ್.ಡಿ. ಕುಮಾರಸ್ವಾಮಿ, ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಇದರ ಜತೆಗೆ, ಮುಸ್ಲಿಂ ಮತಗಳಿರುವ ಕಾರಣಕ್ಕೇ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಈಗಾಗಲೆ ಹಿಂದು ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಎಲ್ಲ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಚಾಮರಾಜಪೇಟೆಯೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ವರುಣವೇ ಸೇಫ್
ಸುತ್ತಿ ಬಳಸಿ ಕೊನೆಗೆ ವರುಣ ಕ್ಷೇತ್ರವೇ ಸೇಫ್ ಎಂಬ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಈ ಕುರಿತು ಆಪ್ತರ ಜತೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ. ಪುತ್ರ ಪ್ರತಿನಿಧಿಸುತ್ತಿರುವ ವರುಣದಲ್ಲಿ ಕಳೆದ ವಾರ ಪ್ರವಾಸ ಮಾಡಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಪರ ಅಲೆ ಇರುವುದನ್ನು ಸಿದ್ದರಾಮಯ್ಯ ಗುರುತಿಸಿದ್ದಾರೆ. ಈ ಬಾರಿ ಪುತ್ರನಿಗೆ ಟಿಕೆಟ್ ತಪ್ಪಿಸಿ ತಾವೇ ಸ್ಪರ್ಧಿಸುವುದು, ಹೇಗಿದ್ದರೂ ಮುಂದಿನ ಚುನಾವಣೆಯಲ್ಲಿ ಯತೀಂದ್ರ ಅವರಿಗೇ ಬಿಟ್ಟುಕೊಡುವ ತೀರ್ಮಾನ ಮಾಡಿದ್ದಾರೆ. ಒಬ್ಬರಿಗೆ ಒಂದೇ ಕ್ಷೇತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ಕಾಗಿ ಹೇಳಿರುವುದೂ ವರುಣ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಅನಿವಾರ್ಯತೆ ಸೃಷ್ಟಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್ ಕುಮಾರ್ ವಾದ