Site icon Vistara News

Shakti Scheme : ಸರ್ಕಾರಿ ಬಸ್‌ ಮೆಟ್ಟಿಲಿಗೆ ನಮಸ್ಕರಿಸಿದ್ದ ಮಹಿಳೆಯ ಜತೆ ಸಿದ್ದರಾಮಯ್ಯ ಅನಿರೀಕ್ಷಿತ ಭೇಟಿ

CM Siddaramaiah meets sangavva in colors kannada channel

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ (Congress Party) ಅಧಿಕಾರಕ್ಕೆ ಬರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು ಗ್ಯಾರಂಟಿ ಯೋಜನೆಗಳ (Congress Guarantee Scheme) ಘೋಷಣೆಗಳಾಗಿದ್ದವು. ಹೀಗಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮೊದಲಿಗೆ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Service) ಸೌಲಭ್ಯ ನೀಡುವ “ಶಕ್ತಿ” ಯೋಜನೆಗೆ (Shakti Scheme) ಚಾಲನೆ ನೀಡಿದ್ದರು. ಇದಕ್ಕೆ ಈಗ ರಾಜ್ಯಾದ್ಯಂತ ಮಹಿಳೆಯರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಬಹುತೇಕ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಶಕ್ತಿ ಯೋಜನೆಗೆ ಜೂನ್‌ 11ರಂದು ಚಾಲನೆ ಸಿಕ್ಕಿತ್ತು. ಅಂದು ಬೆಳಗಾವಿಯಲ್ಲಿ “ಶಕ್ತಿ” ಯೋಜನೆಯ ಪ್ರಯೋಜನ ಪಡೆಯಲು ಉತ್ಸುಕರಾಗಿದ್ದ ಮಹಿಳೆಯೊಬ್ಬರು ಕೆಎಸ್‌ಆರ್‌ಟಿಸಿ (KSRTC Bus) ಬಸ್‌ನ ಮೆಟ್ಟಿಲಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದರು. ಈಗ ಆಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದಾರೆ. ಅದರ ಖುಷಿಯನ್ನು ಸೋಷಿಯಲ್‌ ಮೀಡಿಯಾ (Social Media X) “ಎಕ್ಸ್”‌ ನಲ್ಲಿ ಪೋಸ್ಟ್‌ ಮಾಡಿ ಹಂಚಿಕೊಂಡಿದ್ದಾರೆ.

ಜೂನ್‌ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಮಹಿಳೆಯರು ಉತ್ಸಾಹದಿಂದ ಸಂಚಾರ ಮಾಡಿದ್ದರು. ಈ ವೇಳೆ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಎಂಬ ಮಹಿಳೆಯು ಕೆಎಸ್‌ಆರ್‌ಟಿಸಿ ಬಸ್‌ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಕಾಲಿಟ್ಟಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನವನ್ನೂ ಸೆಳೆದಿತ್ತು.

ಇದನ್ನೂ ಓದಿ: Mercy Killing : ಮುಳ್ಳಾಯ್ತೇ ಪ್ರೇಮ ವಿವಾಹ; ದಯಾಮರಣಕ್ಕೆ ಅನುಮತಿ ಕೋರಿದ ಒಂದು ತಿಂಗಳ ಮಗುವಿನ ಬಾಣಂತಿ ತಾಯಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಿದ್ದರಾಮಯ್ಯ – ಸಂಗವ್ವ ಮುಖಾಮುಖಿ‌

ಕನ್ನಡದ ಮನೋರಂಜನಾ ಚಾನೆಲ್ ಆಗಿರುವ ಕಲರ್ಸ್‌ ಕನ್ನಡದವರು (Colors Kannada) ಪ್ರತಿ ವರ್ಷ ಆಚರಿಸುವ ಅನುಬಂಧ ಅವಾರ್ಡ್‌ (Anubandha Award) ಕಾರ್ಯಕ್ರಮದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಈ ವೇಳೆ ಕಲರ್ಸ್‌ ಕನ್ನಡ ವಾಹಿನಿಯವರು, ಸಂಗವ್ವ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಮಾತನಾಡುವಾಗ ಅವರೆದುರು ಸರ್ಪ್ರೈಸ್‌ ಆಗಿ ಸಂಗವ್ವರನ್ನು ಕರೆ ತಂದು ನಿಲ್ಲಿಸಿದರು. ಇದರಿಂದ ಸಿದ್ದರಾಮಯ್ಯ ಅವರು ಖುಷಿಗೊಂಡಿದ್ದಲ್ಲದೆ, ಸರ್ಕಾರದ ಯೋಜನೆಗಳ ಬಗ್ಗೆ ಸಂಗವ್ವ ಅವರ ಬಳಿ ಕೇಳಿ, ಅಭಿಪ್ರಾಯವನ್ನು ತಿಳಿದುಕೊಂಡರು.

“ಎಕ್ಸ್‌”ನಲ್ಲಿ ಪೋಸ್ಟ್‌ ಮಾಡಿ ಸಂತಸ ಹಂಚಿಕೊಂಡ ಸಿಎಂ

ಸಂಗವ್ವ ಅವರನ್ನು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಭೇಟಿಯಾದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಅವರು ಪೋಸ್ಟ್‌ ಮಾಡಿ, ಮೊದಲ ದಿನ ಸಂಗವ್ವ ಅವರು ಪ್ರೀತಿಪೂರ್ವಕವಾಗಿ ನಡೆದುಕೊಂಡ ನಡೆಯಿಂದ “ಶಕ್ತಿ” ಯೋಜನೆಯ ಯಶಸ್ಸು ಕಾಣಲಿದೆ ಎಂಬುದು ಗೊತ್ತಾಗಿ ಹೋಗಿತ್ತು ಎಂದು ಸಹ ಹೇಳಿಕೊಂಡಿದ್ದಾರೆ.

ಸಿಎಂ ಪೋಸ್ಟ್‌ನಲ್ಲೇನಿದೆ?

“ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜತೆಗೆ ಸಾರ್ಥಕ್ಯದ ಭಾವ ಮೂಡಿಸಿತು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ತುಸು ಏರಿಕೆ, ಬೆಂಗಳೂರಿನಲ್ಲಿ ದರ ಹೀಗಿದೆ

ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ ಕಲರ್ಸ್‌ ಕನ್ನಡ (@ColorsKannada) ವಾಹಿನಿಗೆ ಧನ್ಯವಾದಗಳು” ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

Exit mobile version