Site icon Vistara News

Power Point with HPK : ಸಿದ್ದರಾಮಯ್ಯ ಕೈ ಕಟ್ಟಿದೆ, ಸ್ವತಂತ್ರ ನಿರ್ಧಾರ ಸಾಧ್ಯವಾಗುತ್ತಿಲ್ಲ: ಬಸವರಾಜ ರಾಯರೆಡ್ಡಿ

Basavaraj Rayareddy in Power point with HPK 4

ಬೆಂಗಳೂರು: 2013ರಲ್ಲಿ ಸಿದ್ದರಾಮಯ್ಯ (CM Siddaramaiah) ಅವರು ಸಿಎಂ ಆಗಿದ್ದಾಗ ತೆಗೆದುಕೊಳ್ಳುತ್ತಿದ್ದ ಸ್ವತಂತ್ರ ನಿರ್ಣಯಗಳನ್ನು ಈ ಬಾರಿ ತೆಗೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ರಾಜಕೀಯವಾಗಿ ಹಲವು ಕಾರಣಗಳು ಇವೆ. ಹೈಕಮಾಂಡ್‌ ಕೊಟ್ಟ ಮಾತನ್ನು ನಡೆಸಿಕೊಡುವ ಅನಿವಾರ್ಯತೆಯು ಅವರನ್ನು ಕಟ್ಟಿಹಾಕಿದಂತಾಗಿದೆ ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಗ್ಯಾರಂಟಿ ಯೋಜನೆಗಳ (congress Guarantee scheme) ಸಹಿತ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಹೈಕಮಾಂಡ್‌ ಆದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಅವರು ಪಕ್ಷ ಗೆಲ್ಲಲು ಮಾತು ಕೊಟ್ಟಿರುತ್ತಾರೆ. ಆ ಮಾತುಗಳನ್ನು ಈಡೇರಿಸುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವಾಗಿದೆ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಿದಂತಾಗಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಸಿದ್ದರಾಮಯ್ಯ ಆರ್ಥಿಕ ಶಿಸ್ತು ಮೀರಿಲ್ಲ

ಇಂದು ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ ಸೇರಿದರೆ ಸುಮಾರು 40 ಸಾವಿರ ಕೋಟಿ ರೂಪಾಯಿ ಅನುದಾನ ಬೇಕು. ಮುಂದಿನ ವರ್ಷಕ್ಕೆ ಇದು 58ರಿಂದ 60 ಸಾವಿರ ಕೋಟಿ ರೂಪಾಯಿ ಬೇಕು. ಅಲ್ಲದೆ, ಈಗ ತೆರಿಗೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಏನಿದ್ದರೂ ಅಬಕಾರಿ, ವಾಹನಗಳು, ಸ್ಟಾಂಪ್‌ ಡ್ಯೂಟಿ ಮೇಲೆ ಹಾಕಬಹುದು. ಈ ಎಲ್ಲವೂ ಸೇರಿದಂತೆ ಹೆಚ್ಚೆಂದರೆ 10 ಸಾವಿರ ಕೋಟಿ ರೂಪಾಯಿಯನ್ನು ಪಡೆಯಬಹುದಾಗಿದೆ. ಈ ಕಾರಣದಿಂದ ತಮ್ಮದೇ ಆದ ಇತಿಮಿತಿಯಲ್ಲಿ ಅವಶ್ಯಕವೋ ಅನಾವಶ್ಯಕವೋ ಸಾಲವನ್ನು ತೆಗೆದುಕೊಳ್ಳಬೇಕು. ರಾಜ್ಯದ ಯೋಜನೆಗಳನ್ನು ರೂಪಿಸಬೇಕು. ಸಿದ್ದರಾಮಯ್ಯ ಅವರು ಆರ್ಥಿಕ ಶಿಸ್ತನ್ನು ಎಲ್ಲಿಯೂ ಮೀರಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಬೇಕಾಬಿಟ್ಟಿ ಸಾಲ ಪಡೆಯಲು ಬರುವುದಿಲ್ಲ. ಇದಕ್ಕೆ ಆರ್‌ಬಿಐ ಗೈಡ್‌ಲೈನ್ಸ್‌ ಇದೆ. ವ್ಯಾಪ್ತಿಯನ್ನು ಮೀರಿ ಸಾಲ ಮಾಡಲು ಆಗದು. ನಿಜ ಹೇಳಬೇಕೆಂದರೆ ಹಿಂದಿನ ಸರ್ಕಾರದಲ್ಲಿ ಬಿ.ಎಸ್.‌ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಶಿಸ್ತನ್ನು ಮುರಿದಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಇದನ್ನೂ ಓದಿ: Commission Politics : ಕಮಿಷನ್‌ ಕೇಳಿಲ್ಲವಾದರೆ ಡಿಕೆಶಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ: ಸಿ.ಟಿ. ರವಿ ಸವಾಲು

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಒಬ್ಬ ಅತ್ಯುತ್ತಮ ನಾಯಕ. ಅವರು ಕಾಂಗ್ರೆಸ್‌ ಸಚಿವರ ಸಭೆಯಲ್ಲಿ ಕುಳಿತುಕೊಂಡರೆ ತಪ್ಪೇನಿದೆ? ಅವರು ಒಂದು ರಾಜ್ಯದ ಲೋಕಸಭಾ ಸದಸ್ಯರಾಗಿದ್ದಾರೆ. ಅವರು ಒಬ್ಬ ತಜ್ಞರಾಗಿದ್ದು, ಅವರಿಂದ ಸಲಹೆಗಳನ್ನು ನಾವೇಕೆ ಸ್ವೀಕರಿಸಬಾರದು ಎಂದು ಶಾಸಕ ಬಸವರಾಜ ರಾಯರೆಡ್ಡಿ ಪ್ರಶ್ನೆ ಮಾಡಿದರು.

Exit mobile version