ಬೆಳಗಾವಿ: ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಮತ್ತು ಮೂವರು ಡಿಸಿಎಂಗಳನ್ನು ಮಾಡಬೇಕು ಎಂಬ ಕೂಗು ಎದ್ದಿರುವ ಹೊತ್ತಿನಲ್ಲಿ ಸಿದ್ದರಾಮೋತ್ಸವ ಮಾದರಿಯಲ್ಲಿ ಬೃಹತ್ ಕುರುಬ ಸಮಾವೇಶ (Kuruba Conference) ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಪಕ್ಷದಲ್ಲಿ ಒಳಬೇಗುದಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಮುಖ ಕುರುಬ ನಾಯಕರಾಗಿರುವ ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳಿಗೆ ನೇರ ಸಂದೇಶ ರವಾನಿಸುವ ರೀತಿಯಲ್ಲಿ ಇಲ್ಲಿನ ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಮಂಗಳವಾರ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‌ನ 9ನೇ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕುರುಬ ನಾಯಕರು, ಸ್ವಾಮೀಜಿಗಳು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗಣ್ಯರು ಸನ್ಮಾನ ಮಾಡಿದರು.
ಕುರುಬ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಳದ ಬೇಡಿಕೆ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಇನ್ನು ಸಮಾವೇಶದಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ | Caste Census Report : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ ಎಂದ ಬಿ.ಕೆ. ಹರಿಪ್ರಸಾದ್
ಸಭೆಯಲ್ಲಿ ಸರ್ಕಾರಕ್ಕೆ 7 ಬೇಡಿಕೆಗಳು
1) ಜಾತಿವಾರು ಜನಗಣತಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
2) ರಾಷ್ಟ್ರ ಮಟ್ಟದಲ್ಲಿ ಕುರುಬರ ಆರ್ಥಿಕ, ಸಮಾಜಿಕ ಸಮೀಕ್ಷೆ ನಡೆಸಬೇಕು.
3) ರಾಷ್ಟ್ರದಲ್ಲಿ ಇರುವ ಎಲ್ಲಾ ಕುರುಬರನ್ನು ಎಸ್‌ಟಿ ಸಮಾಜಕ್ಕೆ ಸೇರಿಸಬೇಕು.
4) ಕೇಂದ್ರ ಮಹಿಳಾ ಮೀಸಲಾತಿಗೆ ಸ್ವಾಗತ. ಹಿಂದುಳಿದ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕು.
5) ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ನಂದಗಡ ಗ್ರಾಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು.
6) ಕುರಿ ಮೇಯಿಸಲು ಕಂದಾಯ ಭೂಮಿಯನ್ನು ಕಾಯ್ದಿರಿಸಬೇಕು. ಸಂಚಾರಿ ಆಸ್ಪತ್ರೆ, ಸಂಚಾರಿ ಶಾಲೆಗಳನ್ನು ಆರಂಭಿಸಬೇಕು. ಹಾನಿಗೆ ಒಳಗಾದ ಕುರಿಗಳಿಗೆ ಪರಿಹಾರ ನೀಡಬೇಕು.
7) ಕುರಿ, ಮೇಕೆ ಮಹಾಮಂಡಳಕ್ಕೆ 100 ಕೋಟಿ ರೂಪಾಯಿ ಕೊಡಬೇಕು.
ಜಾತಿ ರಾಜಕಾರಣ ಮಾಡಲ್ಲ, ಸಾಮಾಜಿಕ ನ್ಯಾಯ ನನ್ನ ಉಸಿರು: ಸಿದ್ದರಾಮಯ್ಯ
ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. ನಾನು ಯಾವತ್ತೂ ಜಾತಿ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಷ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ, ಅಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ. ಅಶಕ್ತ ಸಮುದಾಯಗಳು ಸಂಘಟಿತರಾಗದೇ ಇರುವುದರಿಂದ ಮತ್ತು ತಮ್ಮಲ್ಲಿ ನಾಯಕತ್ವ ಬೆಳೆಸಿಕೊಳ್ಳದೇ ಇರುವುದರಿಂದ ಅವರ ಪಾಲಿನ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತವಾಗಿವೆ ಎಂದು ವಿವರಿಸಿದರು.
ನಮ್ಮ ಸಮುದಾಯಕ್ಕೆ ರಾಜಕೀಯ ಇತಿಹಾಸ ಇದೆ. ಸಾಂಸ್ಕೃತಿಕ ಭವ್ಯತೆ ಇದೆ. ಹಕ್ಕ ಬುಕ್ಕರಿಂದ ಹಿಡಿದು ಅಹಲ್ಯಾಬಾಯಿ ಹೋಳ್ಕರ್‌ವರೆಗೂ ನಮಗೊಂದು ಚರಿತ್ರೆ ಇದೆ. ಆದರೆ, ಸಂಘಟನೆ ಇಲ್ಲದಿದ್ದರಿಂದ ನಮಗೆ ಸಲ್ಲಬೇಕಾಗಿದ್ದು ಸಲ್ಲುತ್ತಿರಲಿಲ್ಲ. ಸಂಘಟನೆ ಇಲ್ಲದಿದ್ದರೆ ಕಾಗಿನೆಲೆ ಗುರುಪೀಠ, ಸಂಸ್ಥಾನ ಆಗುತ್ತಿರಲಿಲ್ಲ. ಕಾಗಿನೆಲೆ ಪೀಠ ಒಂದು ಜಾತಿಯ ಮಠ ಅಲ್ಲ. ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು ಕಾಗಿನೆಲೆ ಪೀಠ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ | Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ, ಅವಕಾಶ ಸಿಗಬೇಕು. ಈ ಸಾಮಾನ್ಯ ಜ್ಞಾನ ನಮ್ಮನ್ನು ಟೀಕಿಸುವವರಿಗೆ ಇಲ್ಲವಾಗಿದೆ ಎಂದರು.
ನಮ್ಮದು ಹೇಳಿ ಕೇಳಿ ಜಾತಿ ಮತ್ತು ತಾರತಮ್ಯದಿಂದ ಕೂಡಿರುವ ಸಮಾಜ. ಹೀಗಾಗಿ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವನ್ನೆಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ ಎಂದ ಅವರು, ನಾನು ರೂಪಿಸಿದ ಐದು ಗ್ಯಾರಂಟಿ ಯೋಜನೆಗಳು ಒಂದು ಸಮಾಜಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತವಾದವುಗಳಲ್ಲ. ಸರ್ವ ಜಾತಿ ಜನಗಳ ಬದುಕಿಗೆ ಅನುಕೂಲ ಕಲ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಉದಾಹರಿಸಿದರು.
ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿಯವರುಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‌ನ ಅಧ್ಯಕ್ಷ ಮಾಜಿ ಮಂತ್ರಿ ಎಚ್.ವಿಶ್ವನಾಥ್ ಅವರು ವಹಿಸಿದ್ದರು.
ಇದನ್ನೂ ಓದಿ | Lingayat CM : ರಾಜ್ಯದಲ್ಲಿ 3 ಲಿಂಗಾಯತ ಡಿಸಿ, 7 ಎಸ್ಪಿ ಇದಾರೆ; ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ
ಮುಖ್ಯ ಅತಿಥಿಗಳಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂದೆ, ಶೆಫರ್ಡ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಆಂಧ್ರ. ಪ್ರದೇಶ ರಾಜ್ಯದ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ರಾಜ್ಯದ ಮುಖಂಡರಾದ ಸಾಗರ್ ರಾಯ್ಕ ಸೇರಿ 60ಕ್ಕೂ ಹೆಚ್ಚು ಮಂದಿ ನಾನಾ ರಾಜ್ಯಗಳ ಕುರುಬ ಮತ್ತು ಗೋಪಾಲಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.
.