ಬೆಂಗಳೂರು: ನಮ್ಮ ನಮ್ಮ ನಡುವಲ್ಲೇ ಧ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ, ಎಚ್ಚರವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಕ್ರೀದ್ (Eid al Adha) ಅಂಗವಾಗಿ ಚಾಮರಾಜಪೇಟೆ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ರಾಜ್ಯದ ಅಭಿವೃದ್ಧಿಯ ಜತೆಗೆ ಜನತೆಯ ಪ್ರಗತಿಯೂ ಆಗಬೇಕು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು.
ಇದನ್ನೂ ಓದಿ: Eid al Adha: ಭಕ್ತಿ, ಬಲಿದಾನ ಮತ್ತು ಜೀವದಾನದ ದಿವ್ಯ ಸ್ಮರಣೆಯೇ ಬಕ್ರೀದ್ ಆಚರಣೆ
ಮನುಷ್ಯರು ಪ್ರೀತಿ, ವಿಶ್ವಾಸದಿಂದ , ಮನುಷ್ಯರಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಯ ಜೊತೆಗೆ ಜನತೆಯೂ ಅಭಿವೃದ್ಧಿ ಯಾಗಬೇಕು. ದೇವರು ಎಲ್ಲರಿಗೂ ಸದ್ಬುದ್ಧಿ ನೀಡಿ ಮನುಷ್ಯರಾಗಿ ಬಾಳುವ ಗುಣವನ್ನು ನೀಡಲಿ. ರಾಜ್ಯದ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ಬಕ್ರೀದ್ ಹಬ್ಬ ತ್ಯಾಗದ ಸಂಕೇತ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.