ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ 14 ನೇ ದಾಖಲೆಯ ಬಜೆಟ್ (Karnataka budget 2023) ಮಂಡನೆ ಮಾಡಿದ್ದಾರೆ. ಇದು ಕೇವಲ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅಷ್ಟೆ ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಮುಖ ಬಜೆಟ್ ಎಂಬ ಸಂದೇಶವನ್ನೂ ಸಿದ್ದರಾಮಯ್ಯ ನೀಡಿದ್ದಾರೆ. ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರದ ಅವಧಿಯನ್ನು ʼಅಂಧಕಾರʼ ಎಂದು ಹೇಳಿರುವ ಸಿದ್ದರಾಮಯ್ಯ, ಈಗ ರಾಜ್ಯವು ಕತ್ತಲಿನಿಂದ ಹೊರಬಂದಿದೆ ಎಂದಿದ್ದಾರೆ.
ಹಾಗೂ ದೇಶದಲ್ಲಿ ಇನ್ನೂ ಅಂಧಕಾರ ಇದೆ, ಅದನ್ನು ಹೋಗಲಾಡಿಸಬೇಕಿದೆ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಾಡಿನ ಜನರು ಗಟ್ಟಿ ದನಿಯಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮೂಲ ಧ್ಯೇಯೋದ್ದೇಶ ಎಂದರೆ ರಾಜ್ಯದ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಅತ್ಯುತ್ತಮ ನಿರ್ವಹಣೆ ಹಾಗೂ ದಕ್ಷ ಆಡಳಿತ. ಕಾನೂನು ಸುವ್ಯವಸ್ಥೆ, ಕಾನೂನು ಸೇವೆ, ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ, ಸಮಾನ ಅವಕಾಶಗಳ ಸೃಜನೆ ಎಂದಿದ್ದಾರೆ. ಡಾ. ಗಿರೀಶ್ ಕಾರ್ನಾಡರ ಯಯಾತಿ ನಾಟಕದ ಸಾಲು ಉಲ್ಲೇಖಿಸಿ, “ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿಲ್ಲದ ಹಾದಿಯಲ್ಲಿ ಹೇಗೆ ನಡೆಯುವುದು?” ಎಂದರು.
ರಾಜ್ಯವು ಅಂಧಕಾರ, ಅನ್ಯಾಯದಿಂದ ತತ್ತರಿಸಿತ್ತು. ಒಂದೆಡೆ ಬಂಡವಾಳಶಾಹಿ, ಸಾಂಕ್ರಾಮಿಕದ ಜತೆಗೆ ದುರಾಡಳಿತ ಜನರಿಗೆ ಎರವಾಯಿತು. ರಾಜ್ಯದಲ್ಲಿ ಕತ್ತಲು ಅಂತ್ಯ ಕಂಡಿದೆ. ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಪ್ರಜ್ಞಾನವಂತಿಕೆ ಪ್ರದರ್ಶಿಸಿದ್ದಾರೆ ಎಂದಿದ್ದಾರೆ. ಆದರೆ ದೇಶದಲ್ಲಿ ಇನ್ನೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದನ್ನು ಟೀಕಿಸಿದ ಸಿದ್ದರಾಮಯ್ಯ, ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ ಶ್ರಮಿಸಲಿದೆ ಎಂದಿದ್ದಾರೆ.
ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರದಲ್ಲಲ್ಲ. ಭೇದಭಾವ ತೋರುವುದು, ಧ್ರುವೀಕರಣ ಮಾಡುವುದು, ಸಮಾಜವನ್ನು ಒಡೆಯುವುದು ನ್ಯಾಯವಲ್ಲ ಎಂಬ ಮಾತುಗಳನ್ನು ಆಡಿದ್ದಾರೆ. ಜತೆಗೆ, ಹಿಂದಿನ ಬಿಜೆಪಿ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯೂ ಹಳ್ಳ ಹಿಡಿದಿತ್ತು ಎಂದು ಅನೇಕ ಅಂಕಿ ಅಂಶಗಳನ್ನು ಮುಂದಿಟ್ಟು ಟೀಕಿಸಿದ್ದಾರೆ.
ಇದನ್ನೂ ಓದಿ: Karnataka Budget 2023: ಟೆಂಪಲ್ ರನ್‌ಗೆ ಬ್ರೇಕ್, ರಾಹುಕಾಲದ ನಂತರ ಬಜೆಟ್; ಜನತೆಯೇ ಜನಾರ್ದನ ಎಂದ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದನ್ನು ಟೀಕಿಸುತ್ತಿರುವವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೆ ಬೆಲೆಯೇರಿಗೆ, ನಿರುದ್ಯೋಗ ಹೆಚ್ಚಾಗಿರುವುದರಿಂದಲೇ ಈ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ತಮ್ಮ ಎಲ್ಲ ನಡೆಗಳಿಗೂ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ʼದುರಾಡಳಿತವೇʼ ಕಾರಣ ಎಂಬ ಗುರಾಣಿ ಹಿಡಿದಿದ್ದಾರೆ. ಈ ಮೂಲಕ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಿಎಂ ಆಗಿ ಎರಡನೇ ಅವಧಿಯಲ್ಲಿ ಮೊದಲ ಬಜೆಟ್ ಮಂಡನೆಯ ವೇಳೆ ರಾಜಕೀಯವಾಗಿ ಬಿಜೆಪಿಯನ್ನು ಟೀಕಿಸುವ ಯಾವ ಅವಕಾಶವನ್ನೂ ಸಿದ್ದರಾಮಯ್ಯ ಬಿಟ್ಟಿಲ್ಲ.