ಹುಬ್ಬಳ್ಳಿ: ಹೊಡಿ, ಬಡಿ, ಕಡಿ ಎಂಬುದು ಬಿಜೆಪಿಯ ಸಂಸ್ಕೃತಿಯಾಗಿದೆ. ಮಹಾತ್ಮಾ ಗಾಂಧೀಜಿಯನ್ನೇ ಗೋಡ್ಸೆ ಮೂಲಕ ಕೊಲೆ ಮಾಡಿಸಿದವರು ಇವರು. ಈಗ ಸಚಿವ ಅಶ್ವತ್ಥನಾರಾಯಣ (Ashwathnarayan) ಮೂಲಕ ನನ್ನನ್ನು ಹೊಡೆದು ಹಾಕುವಂತೆ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಹೇಳಿಕೆ ಕೊಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಆರೋಪಿಸಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ (Karnataka Election) ಚರ್ಚೆಯ ವಿಷಯ ಯಾವುದು ಇರಬೇಕು ಎಂದೂ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಕರ್ನಾಟಕ ರಾಜ್ಯದಲ್ಲಿ ರೈತರ, ಬಡವರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಯುವಕರ ಸಮಸ್ಯೆಗಳು ಸೇರಿದಂತೆ ಅಭಿವೃದ್ಧಿ ವಿಚಾರಗಳು ಚರ್ಚೆಯಾಗಬೇಕು. ಅದು ಬಿಟ್ಟು ಇಂತಹ ಹೇಳಿಕೆಯನ್ನು ನೀಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಬಿಜೆಪಿಯವರಿಗೆ ಅಭಿವೃದ್ಧಿಯ ಚರ್ಚೆ ಬೇಡವಾದರೆ ಅವರ ಪ್ರಣಾಳಿಕೆಯಲ್ಲಿ ಟಿಪ್ಪು ಸುಲ್ತಾನ್ ವರ್ಸಸ್ ಸಾವರ್ಕರ್ ಎಂದು ಪ್ರಕಟಿಸಬೇಕು. ಆಗ ಜನರೇ ತೀರ್ಮಾನ ಮಾಡುತ್ತಾರೆ. ಕರ್ನಾಟಕದಲ್ಲಿ ಸಾಮರಸ್ಯ ಹಾಳಾಗಿದೆ. ದಲಿತರು, ಬಡವರು ಆತಂಕದಲ್ಲಿದ್ದಾರೆ. ನಾನು ಮಾಜಿ ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಮುಗಿಸಿ ಎಂದು ಒಬ್ಬ ಮಂತ್ರಿ ಕರೆ ಕೊಡುತ್ತಾರೆ ಎಂದರೆ ಏನರ್ಥ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: 7th Pay Commission : ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ನಲ್ಲಿ ಘೋಷಣೆ; ಕಾಯ್ದಿರಿಸುವ ಹಣವೆಷ್ಟು?
ಈ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು. ಕೋಮುವಾದಿಗಳು ಅಧಿಕಾರಕ್ಕೆ ಬಂದರೆ ನಾಗರಿಕ ಯುದ್ಧ ಆರಂಭವಾಗುತ್ತದೆ. ಸರ್ಕಾರ ರಕ್ಷಣೆ ಮಾಡಬೇಕು. ಆದರೆ, ಅವರೇ ಪ್ರಚೋದನೆ ಮಾಡುವಂತಹ ಹೇಳಿಕೆಯನ್ನು ಕೊಡುತ್ತಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟಿಪ್ಪು, ಅಬ್ಬಕ್ಕ ಚುನಾವಣೆ ಎಂದು ಹೇಳುತ್ತಾರೆ. ಇನ್ನೊಬ್ಬರು ಟಿಪ್ಪು, ಸಾವರ್ಕರ್ ಎಂದು ಹೇಳುತ್ತಾರೆ. ಸಮಸ್ಯೆಗಳ ಬಗ್ಗೆ ಚುನಾವಣೆಯಲ್ಲಿ ಚರ್ಚೆ ಆಗಬೇಕು. ಅದು ಬಿಟ್ಟು ಹೊಡಿ, ಬಡಿ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸುಮೋಟೊ ಕೇಸ್ ದಾಖಲಿಸಲಿ
ನಾವು ಟಿಪ್ಪು, ಶರೀಫ್, ಬಸವಣ್ಣ ಎಲ್ಲರನ್ನೂ ಗೌರವಿಸುತ್ತೇವೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಅದಕ್ಕಾಗಿ ಅವರನ್ನು ಗೌರವಿಸುತ್ತೇವೆ. ಪೊಲೀಸರು ಸುಮೋಟೊ ಕೇಸ್ ದಾಖಲಿಸಬೇಕು ಎಂದು ಪೊಲೀಸರನ್ನು ನೋಡಿ ಸಿದ್ದರಾಮಯ್ಯ ಹೇಳಿದರು.
ಅಶ್ವತ್ಥನಾರಾಯಣ ಹೇಳಿದ್ದೇನು?
ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ? ಇಲ್ಲವೇ ಟಿಪ್ಪು ಬೇಕಾ? ನೀವೇ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ, ನಮಗೆ ಸಾವರ್ಕರ್ ಬೇಕು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಇದನ್ನೇ ಕೇಳಿದಾಗಲೂ ಎಲ್ಲರೂ ಸಾವರ್ಕರ್ ಎಂದೇ ಉತ್ತರಿಸಿದ್ದಾರೆ.
ಆಗ ಮತ್ತೆ ಮಾತನಾಡಿದ ಸಚಿವರು, ಹಾಗಾದರೆ ಟಿಪ್ಪು ಸುಲ್ತಾನನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ, ನಂಜೇಗೌಡ ಏನ್ ಮಾಡಿದರು? ಎಂದು ಕೇಳಿದರು. ಆಗ ಅಲ್ಲಿನ ಕಾರ್ಯಕರ್ತರು ಹೊಡೆದು ಹಾಕಿದರು ಎಂದು ಉತ್ತರಿಸಿದರು. ಆಗ ಸಚಿವರು, “ಹೌದು. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಹೇಳುತಾ, ನಮ್ಮತನವನ್ನು ನಾವು ಕಾಪಾಡಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಸದನದಲ್ಲಿ ಪ್ರಶ್ನೆ ಮಾಡ್ತೇವೆ- ಪ್ರಿಯಾಂಕ್ ಖರ್ಗೆ
ಸರ್ಕಾರದ ಬಳಿ ಹೇಳಿಕೊಳ್ಳಲು ಸಾಧನೆಗಳು ಏನಿಲ್ಲ. ಇತಿಹಾಸವನ್ನೂ ಓದುವುದಿಲ್ಲ. ಕೇಶವಕೃಪ ಬುಕ್‌ನಲ್ಲಿ ಇರುವುದನ್ನು ಹೇಳುತ್ತಾರೆ. ಈಗ ಎಲ್ಲರೂ ಹತಾಶರಾಗಿದ್ದಾರೆ. ನಾಳೆ ಸೋಲು ಕಂಡರೆ ಇವರ ಮೇಲೆ ಬರಬಾರದಲ್ಲವಾ? ಅದಕ್ಕೆ ರೀತಿ ಮಾತಾಡುತ್ತಾರೆ, ನೋಡಿ ಸರ್ ನಾನು ಹೊಡೆದುಹಾಕಿ ಎಂದು ಕರೆ ಕೊಟ್ಟಿದ್ದೇನೆ ಎಂದು ಹೇಳಬೇಕಲ್ಲವೇ? ಹಾಗಾಗಿ ಈ ರೀತಿಯ ಉತ್ತರ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Karnataka Election : ಭ್ರಷ್ಟಾಸುರ ಬೊಮ್ಮಾಯಿ; ಕಾಂಗ್ರೆಸ್ ನಾಯಕ ಸುರ್ಜೇವಾಲ ವಾಗ್ದಾಳಿ; ಸರ್ಕಾರಕ್ಕೆ ಪ್ರಶ್ನಾವಳಿ
ಅಶ್ವತ್ಥ ನಾರಾಯಣ ಅವರು ಮೊದಲು ಈ ರೀತಿಯ ಇರಲಿಲ್ಲ. ಈಗ ಬದಲಾಗಿದ್ದಾರೆ. ಇಡಿ ಸದನವನ್ನು ಕೇಶವಕೃಪ ಕಂಟ್ರೋಲ್ ಮಾಡುತ್ತದೆ. ನಾವು ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ವಿಪಕ್ಷ ನಾಯಕರಿಗೆ ಹಿಂದೆ ಮೊಟ್ಟೆ ಎಸೆದಿದ್ದರು. ಈಗ ಹೊಡೆದು ಹಾಕಿ ಎಂದು ಹೇಳಿದ್ದಾರೆ. ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಈ ರೀತಿ ಹೇಳಿದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.
ಯತ್ನಾಳ್ ವಿರೋಧ
ರಾಜಕಾರಣದಲ್ಲಿ ಟೀಕೆಗಳು ಇರುತ್ತವೆ. ಆದರೆ ಹೊಡೆದು ಹಾಕುತ್ತೇನೆ, ಕೊಲೆ ಮಾಡುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ನನ್ನ ಮೇಲೂ ಒಬ್ಬ ಹೀಗೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದ. ಯಾವುದೇ ರಾಜಕಾರಣಿಗಳು ಸಹ ಈ ರೀತಿಯ ಹೇಳಿಕೆಯನ್ನು ಕೊಡಬಾರದು. ರಾಜಕೀಯದಲ್ಲಿ ಏನೇ ಇದ್ದರೂ ಸಿದ್ಧಾಂತದ ಮೇಲೆ ಟೀಕೆಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.