ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡುವುದು ಬೇಡ ಎಂದಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಕಾರ್ಯಕ್ರಮ ಆರಂಭಿಸಲಾಯಿತು. ಆಗ ಕಾಂಗ್ರೆಸ್ ಕಾರ್ಯಕರ್ತರು ವಂದೇ ಮಾತರಂ ಹಾಡಲು ಮುಂದಾದರು. ಇದು ಗಮನಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು, ವಂದೇ ಮಾತರಂ ಬೇಡಯ್ಯ ಎಂದು ಮುಖ ಕಿವುಚಿಕೊಂಡು ಹೇಳಿದರು. ಸ್ವಾಗತ ಭಾಷಣ ಶುರು ಮಾಡಿ ಎಂದರು.
ಕೆಲವು ಕ್ಷಣಗಳ ಬಳಿಕ ತಾವಾಡಿದ ಮಾತಿನ ಪ್ರಮಾದ ಅರಿತ ಸಿದ್ದರಾಮಯ್ಯ ಅವರು, ವಂದೇ ಮಾತರಂ ಹಾಡೋದಿದ್ರೆ ಹಾಡ್ರಪ್ಪ. ಸಿದ್ದರಾಮಯ್ಯ ವಂದೇ ಮಾತರಂ ಹಾಡೋದು ಬೇಡ ಅಂದರು ಅಂತ ನಾಳೆ ಕಾಂಟ್ರೋವರ್ಸಿ ಮಾಡಿದ್ರೆ ಕಷ್ಟ ಎಂದು ಹೇಳಿದರು.
ಬಳಿಕ ಈ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಾಯಿತು.
ಬಿಜೆಪಿಯಿಂದ ವಾಗ್ದಾಳಿ
ನಾಡಪ್ರಭು ಕೆಂಪೇಗೌಡ ಬೇಡ ಅಂತಾರೆ. ಟಿಪ್ಪುವನ್ನು ಮೆರೆಸ್ತಾರೆ. ಶ್ರೀರಾಮಚಂದ್ರ ಯಾರು ಅಂತ ಪ್ರಶ್ನೆ ಮಾಡ್ತಾರೆ. ವಂದೇ ಮಾತರಂ ಹಾಡೋದು ಬೇಡ ಅಂತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೌದ್ಧಿಕ ದಾರಿದ್ರ್ಯತನದಿಂದ ರಾಜಕೀಯ ಸನ್ಯಾಸದ ಅಂಚಿನಲ್ಲಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿ ಕಾರಿದೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿ, ರಾಹುಲ್ ಗಾಂಧಿ ಅವರ ಆಪ್ತ ಸಿದ್ದರಾಮಯ್ಯ ಅವರಿಗೆ ವಂದೇ ಮಾತರಂ ಹಾಡುವುದು ಬೇಡವಂತೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ | Karnataka Election 2023 | ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯ ಆಸೆಗೆ ಡಿಕೆಶಿ ತಣ್ಣೀರು