ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಟಾಪಟಿ ಇದೀಗ ಬಹಿರಂಗವಾಗಿ ಉಳಿದಿಲ್ಲ. ಆಗಸ್ಟ್‌ನಲ್ಲಿ ಸಿದ್ದರಾಮೋತ್ಸವದ ಸಂದರ್ಭದಲ್ಲಿ ಉತ್ತುಂಗಕ್ಕೇರಿ ನಂತರ ತಣ್ಣಗಾಗಿದ್ದ ಜಟಾಪಟಿ ಇದೀಗ ಭಾರತ್ ಜೋಡೊ ಹತ್ತಿರವಾಗುತ್ತಿರುವಂತೆಯೇ ಮತ್ತೆ ಹೆಚ್ಚಾಗಿದೆ.
ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದ ಡೈಲಾಗ್ ಒಂದನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಇತ್ತೀಚಗೆ ಭಾರತ್ ಜೋಡೊ ಸಿದ್ಧತಾ ಸಭೆಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಬಿಜೆಪಿಯವರು ನೆಹರೂ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ವಿಚಾರವನ್ನು ಉಲ್ಲೇಖಿಸಿದ್ದರು. ನೆಹರೂ ಕುಟುಂಬದವರು ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಅವರು ಯಾವುದೇ ಅಧಿಕಾರವನ್ನು ವಹಿಸಿಕೊಂಡಿಲ್ಲ. ಆದರೂ ಬಿಜೆಪಿಯರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. No Strong-No enemy, Less Strong-Less Enemy, More Strong-More Enemy ಎಂದಿದ್ದರು. ಶಕ್ತಿ ಹೆಚ್ಚಳವಾದಂತೆಲ್ಲ ವಿರೋಧಿಗಳು ಹೆಚ್ಚಾಗುತ್ತಾರೆ ಎನ್ನುವುದನ್ನು ನೆಹರೂ ಕುಟುಂಬದ ಹಿನ್ನೆಲೆಯಲ್ಲಿ ಹೇಳಿದ್ದಾದರೂ, ಅದೇ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕುರಿತೇ ಹೇಳಿದ್ದಾರೆ ಎಂಬ ಮಾತು ಪಕ್ಷದಲ್ಲಿ ಕೇಳಿಬಂದಿತ್ತು.
ಇದನ್ನೂ ಓದಿ | ಇ.ಡಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿಗೆ ಕಾಡಿದ ಆರೋಗ್ಯ ಸಮಸ್ಯೆ, ವೈದ್ಯರ ತಪಾಸಣೆಗೆ ಅವಕಾಶ
ತಮ್ಮ ಶಕ್ತಿ ಹೆಚ್ಚಳ ಆಗುತ್ತಿರುವುದರಿಂದಲೇ ಪಕ್ಷದಲ್ಲಿ ವಿರೋಧಗಳೂ ಹೆಚ್ಚಾಗುತ್ತಿವೆ ಎಂದು ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ ಎನ್ನಲಾಗಿತ್ತು. ಇದೇ ಡೈಲಾಗ್ ಅನ್ನು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪುನರುಚ್ಚರಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ವೇಳೆ ಸರ್ಕಾರದ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಸಿದ್ದರಾಮಯ್ಯ ಅವರ ಕುರಿತು ಮಾತನಾಡಿದರು. ನಿಮ್ಮ ಅವಧಿಯಲ್ಲಿ ಕೆರೆ ಒತ್ತುವರಿ ಆಗಿದೆಯೇ ಎನ್ನುವುದನ್ನೂ ನಾನು ಪರಿಶೀಲನೆ ನಡೆಸಿದೆ, ಏಕೆಂದರೆ ನಿಮಗೆ ಶತ್ರುಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ. ಆದರೆ ಯಾವುದೂ ಒತ್ತುವರಿ ಆಗಿಲ್ಲ ಎನ್ನಿಸುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, No Strong-No enemy, Less Strong-Less Enemy, More Strong-More Enemy ಎಂದು ನಗೆಯ ಧಾಟಿಯಲ್ಲಿ ಹೇಳಿದರು. ಈ ಮಾತನ್ನು ನಿಜವಾಗಿ ಅಶೋಕ್ ಅವರಿಗೆ ಹೇಳಿದ್ದಾರೆ ಎನ್ನುವುದಕ್ಕಿಂತಲೂ, ತಮ್ಮ ಪಕ್ಷದಲ್ಲೆ ತಮ್ಮ ವಿರುದ್ಧ ನಡೆಯುತ್ತಿರುವವರಿಗೆ, ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಪರವಾಗಿರುವವರಿಗೆ ಹೇಳಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿದೆ.
ಭಾರತ್ ಜೋಡೊ ಹತ್ತಿರವಾಗುತ್ತಿರುವಂತೆಯೇ ಒಂದೆಡೆ ಡಿ.ಕೆ. ಶಿವಕುಮಾರ್ ಇಡಿ ವಿಚಾರಣೆ ಸಂಕಷ್ಟ ಎದುರಾದರೆ ಮತ್ತೊಂದೆಡೆ ಪಕ್ಷದಲ್ಲೂ ವಿರೋಧ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಕಾಂಗ್ರೆಸ್ ನಾಯಕತ್ವ ದಿಕ್ಸೂಚಿ ಆಗಬಲ್ಲದೇ ಎಂಬ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಯಶಸ್ಸಿಗೆ ವಿವಿಧ ಸಮಿತಿ ರಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್