Site icon Vistara News

Sand Mafia: ನೆರೆಮನೆಯವರ ಕಿರುಕುಳ, ಮರಳು ಮಾಫಿಯಾ: ಕೆನಡಾದಲ್ಲಿರುವ NRI ಸಹಾಯಕ್ಕೆ ಧಾವಿಸಿದ ಸಿದ್ದರಾಮಯ್ಯ

Siddaramaiah reaction to sand mafia

ಬೆಂಗಳೂರು: ನೆರೆಮನೆಯವರು ಮರಳು ಮಾಫಿಯಾ (Sand Mafia) ಜತೆಗೆ ಶಾಮೀಲಾಗಿ ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಿದ್ದು, ಸಹಾಯ ಮಾಡಬೇಕೆಂಬ ಕೆನಡಾದಲ್ಲಿರುವ ಶಿವಮೊಗ್ಗ ಮೂಲದ ಎನ್‌ಆರ್‌ಐ ಸಹಾಯಕ್ಕೆ ಸಿಎಂ ಸಿದ್ದರಾಮಯ್ಯ ಧಾವಿಸಿದ್ದಾರೆ.

ಮಂಜು( @mmanju2) ಎನ್ನುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಜುಲೈ 9ರಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ತಾನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಊರಿನ ಹತ್ತಿರದಲ್ಲಿರುವ ಲಕ್ಕವಳ್ಳಿಯವರು. ಈಗ ಕೆನಡಾದಲ್ಲಿದ್ದು, ಗ್ರಾಮದಲ್ಲಿ ಅಂಗವಿಕಲ ತಂದೆ ಹಾಗೂ ಅನಾರೋಗ್ಯಪೀಡಿತ ತಾಯಿ ವಾಸವಿದ್ದಾರೆ.

ನಮ್ಮ ನೆರೆಮನೆಯವರು ಅನ್ಯೋನ್ಯವಾಗಿದ್ದರು. 2018ರಲ್ಲಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂತರದಲ್ಲಿ ಮರಳು ಮಾಫಿಯಾ ಜತೆಗೆ ಶಾಮೀಲಾಗಿದ್ದಾರೆ. ಅನಧಿಕೃತ ಮರಳನ್ನು ನಮ್ಮ ಮನೆಯ ಬಳಿ ಸಂಗ್ರಹಿಸಿದ್ದಾರೆ. ಚರಂಡಿಯನ್ನು ಮುಚ್ಚಿ ಹಾಕಿದ್ದಾರೆ. ಮರಳು ಟ್ರಕ್‌ಗಳು ಬಂದು ನಿಲ್ಲುತ್ತಿವೆ. ಇದರಿಂದಾಗಿ ತಾಯಿಯ ಆರೋಗ್ಯ ಹದಗೆಟ್ಟಿದೆ. ಗ್ರಾಮಪಂಚಾಯಿತಿಯಿಂದ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ, ಹೊಡೆದಿದ್ದಾರೆ ಹಾಗೂ ಜೀವಭಯದ ಎಚ್ಚರಿಕೆ ನೀಡಿದ್ದಾರೆ.

ಇದರ ಕುರಿತು ಅರವಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪೋಷಕರು ಜೀವಭಯ ಎದುರಿಸುತ್ತಿದ್ದಾರೆ.ನೀವು ಈ ಕುರಿತು ನ್ಯಾಯ ಒದಗಿಸಿಕೊಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದರ ಕುರಿತು ಎರಡು ವಿಡಿಯೊಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: BJP Karnataka: ನಾನೇ ವಿಪಕ್ಷ ನಾಯಕನಾಗುವೆ ಎಂದ ಯತ್ನಾಳ್‌:‌ ಅಸಾಧ್ಯ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ ಪ್ರತಿಕ್ರಿಯೆ
ಮಂಜು ಅವರ ಟ್ವೀಟ್‌ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರ ಟ್ವಿಟರ್‌ ಖಾತೆ, ಸಿದ್ದರಾಮಯ್ಯ ಅವರು ಈ ವಿಷಯವನ್ನು ಗಮನಿಸಿದ್ದಾರೆ. ದೂರಿನ ಆಧಾರದಲ್ಲಿ ತನಿಖೆಯನ್ನು ಕೂಡಲೆ ಆರಂಭಿಸುವುದಕ್ಕೆ ಹಾಗೂ ನ್ಯಾಯ ಕೊಡಿಸಲು ಮುಂದಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮನೆ ಬಳಿಗೆ ಆಗಮಿಸಿದ ಸಿಬ್ಬಂದಿ
ಸಿದ್ದರಾಮಯ್ಯ ಅವರಿಗೆ ಟ್ವೀಟ್‌ ಮಾಡಿದ ನಂತರ ಗ್ರಾಮಪಂಚಾಯಿತಿಯಿಂದ ಸಿಬ್ಬಂದಿ ಆಗಮಿಸಿ ಚರಂಡಿ ಮುಚ್ಚಿದ್ದನ್ನು ತೆರವುಗೊಳಿಸುತ್ತಿದ್ದಾರೆ ಎಂದು ಮಂಜು ಹೇಳಿದ್ದಾರೆ. ಆದರೆ ಮರಳು ತುಂಬಿದ ಲಾರಿಯ ವಿಡಿಯೋ ಹಾಕಿದ್ದರೂ ಪೊಲೀಸರು ಯಾವುದೇ ಮರಳು ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ಈ ಕಾನೂನುಬಾಹಿರ ಚಟುವಟಿಕೆಗೆ ತಡೆ ನೀಡಲು ಸಹಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದಾರೆ.

Exit mobile version