ಬೆಳಗಾವಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು (EWS Reservation) ಎಂದು ಸಂವಿಧಾನ ತಿಳಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಸುಪ್ರೀಂಕೋರ್ಟ್ ತೀರ್ಪನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ.
ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವುದನ್ನು ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪು ನೀಡಿರುವುದು 5 ಜನರ ನ್ಯಾಯಮೂರ್ತಿಗಳ ಪೀಠ, ಇದರಲ್ಲಿ 3 ಜನರ ಅಭಿಪ್ರಾಯ ಒಂದು ರೀತಿ ಇದೆ, ಇನ್ನುಳಿದ ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಬೇರೆ ರೀತಿ ಇದೆ.
ನಾನು ಸುಪ್ರೀಂ ಕೋರ್ಟ್ ನಿರ್ಣಯದ (EWS Reservation) ಬಗ್ಗೆ ಮಾತನಾಡಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನದ 15 ಮತ್ತು 16ನೇ ವಿಧಿ ಹೇಳುವುದಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಈಗ ಕೋರ್ಟ್ ತೀರ್ಪು ಬಂದಿದೆ, ಈ ತೀರ್ಪಿನ ಪೂರ್ಣ ಪ್ರತಿ ಸಿಕ್ಕಮೇಲೆ ಮುಂದೆ ನೋಡೋಣ ಎಂದರು.
ಜನಾರ್ದನ ರೆಡ್ಡಿಯ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಸೇರುವ ಬಗ್ಗೆ ನಮ್ಮ ಜತೆ ಮಾತನಾಡಿಲ್ಲ. ಈ ಬಗ್ಗೆ ಮಾತುಕತೆ ನಡೆಸದೆ ಸುಮ್ಮನೆ ಏನೋ ಉತ್ತರ ಕೊಡಲು ಆಗುವುದಿಲ್ಲ ಎಂದರು.
ಡಿ.ಕೆ ಶಿವಕುಮಾರ್ ಮತ್ತು ತಾವು ಜತೆಗೆ ಓಡಾಡಿದರೂ ತಮ್ಮ ನಡುವಿನ ಸಂಬಂಧ ಸರಿಯಿಲ್ಲ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನಡುವಿನ ಸಂಬಂಧ ಹಳಸಿಹೋಗಿದೆ. ಆದರೆ ನನ್ನ ಮತ್ತು ಶಿವಕುಮಾರ್ ಅವರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ ಎಂದರು.
ಸ್ವಾಗತಿಸಿದ ಖರ್ಗೆ
EWS ಮೀಸಲಾತಿಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ. ಆ ಮಸೂದೆಯನ್ನು ನಾವು ಎಲ್ಲರೂ ಪಾರ್ಲಿಮೆಂಟ್‌ನಲ್ಲಿ ಒಮ್ಮತದಿಂದ ಪಾಸ್ ಮಾಡಿದ್ದೇವೆ. ಅದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದೆ. ಕೋರ್ಟ್ ತೀರ್ಪನ್ನು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ | ನಿಜವಾಗಿ ಜಾತಿ ವ್ಯವಸ್ಥೆ ತಂದವರು ಸಿದ್ದರಾಮಯ್ಯ: ಬ್ರಾಹ್ಮಣರ ಸಂಘ ಆರೋಪ