Site icon Vistara News

Siddaramaiah | ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದಕ್ಕೆ ಬೇಸರವಿಲ್ಲ, ಜಾತ್ಯತೀತ ನಂಬಿಕೆಗೆ ಸಿಕ್ಕ ಪುರಸ್ಕಾರ ಎಂದು ಭಾವಿಸುವೆ ಎಂದ ಸಿದ್ದರಾಮಯ್ಯ

decision to celebrate tipu sultan jayanti from govt will be taken in cabinet says siddaramaiah

ಬೆಂಗಳೂರು: ʻʻಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಮ್‌ ಹೆಸರು ಸೇರಿಸಿ ನಡೆಸುತ್ತಿರುವ ಅಪಪ್ರಚಾರದಲ್ಲಿ ಅಚ್ಚರಿಪಡುವಂತದ್ದು ಏನೂ ಇಲ್ಲ. ಹಾಗಂತ ನಾನು ಇದಕ್ಕೆ ಬೇಸರಪಟ್ಟುಕೊಳ್ಳುವುದೂ ಇಲ್ಲ. ಯಾಕೆಂದರೆ, ಇದು ನನ್ನ ಜಾತ್ಯತೀತ ನಂಬಿಕೆಗೆ ಸಿಕ್ಕಿದ ಪುರಸ್ಕಾರ ಎಂದೇ ಭಾವಿಸುವೆʼʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ʻಸಿದ್ರಾಮುಲ್ಲಾಖಾನ್‌ʼ ಎಂದು ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಸ್ವತಃ ಬಿಜೆಪಿ ಅಧಿಕೃತವಾಗಿಯೇ ರವಿ ಅವರನ್ನು ಬೆಂಬಲಿಸಿತು. ಬಿಜೆಪಿಯೇ ಅಧಿಕೃತವಾಗಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್‌ ಎಂದು ನಾಮಕರಣ ಮಾಡಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡಾ ಹೆಸರಿನ ಆಟ ಶುರು ಮಾಡಿತು. ಬೊಮ್ಮಾಯುಲ್ಲಾ ಖಾನ್‌, ಗಡ್ಕರಿ ಶೇಖ್‌ ಎಂದು ಕರೆದು ಅವರು ಮುಸ್ಲಿಂ ವೇಷಭೂಷಣ ತೊಟ್ಟಿರುವ ಚಿತ್ರಗಳನ್ನು ಪ್ರಕಟಿಸಿತ್ತು. ಈಗ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಹೇಳಿಕೆಗೆ, ಪ್ರಚಾರಕ್ಕೆ ದೀರ್ಘವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದರ ಮೂಲಕ ಬಿಜೆಪಿಯ ನಿಲುವುಗಳನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
ʻʻಬಿಜೆಪಿ ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯಹನನವನ್ನೇ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದೆ. ಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಇಂತಹ ಅಪ ಪ್ರಚಾರವಲ್ಲದೆ ಅವರಾದರೂ ಬೇರೆ ಏನು ಮಾಡಲು ಸಾಧ್ಯ? ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳ ಮಸಿ ಬಳಿದುಕೊಂಡ ಮುಖವನ್ನು ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ? ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿ ಬಟ್ಟೆ ನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ. ಇದು ಅವರ ಸೋಲು, ಹತಾಶೆ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆʼʼ ಎಂದಿದ್ದಾರೆ ಸಿದ್ದರಾಮಯ್ಯ.

ನೈತಿಕ ಅಧಃಪತನಕ್ಕೆ ಸಾಮೂಹಿಕ ಸಂತಾಪ!
ಒಂದು ಕಾಲದಲ್ಲಿ ಒಂದಷ್ಟು ಸಭ್ಯಸ್ಥರು ಇದ್ದ ಪಕ್ಷ ಇಂತಹ ನೈತಿಕ ಅಧ:ಪತನಕ್ಕೆ ಬಿದ್ದಿರುವುದರ ಬಗ್ಗೆ ನಾವೆಲ್ಲ ಸಾಮೂಹಿಕವಾಗಿ ಸಂತಾಪ ಸೂಚಿಸೋಣ. ಸಿದ್ರಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

ನಮ್ಮದು ಷರೀಫರು, ಕಬೀರರ ಪರಂಪರೆ
ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಪರ ಪರಂಪರೆ ನಮ್ಮದು. ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವವನ್ನು ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರನೂ ನಮ್ಮದೇ ಪರಂಪರೆಯವರು. ಆದ್ದರಿಂದ ಮುಸ್ಲಿಮ್ ಹೆಸರನ್ನು ನನ್ನ ಹೆಸರಿಗೆ ಜೋಡಿಸುವ ಮೂಲಕ ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು ಅವರು ಪುರಸ್ಕರಿಸಿದ್ದಾರೆಂದು ಎಂದು ತಿಳಿದುಕೊಳ್ಳುವೆ.

ನಾನು ಅನ್ನರಾಮಯ್ಯ, ರೈತ ರಾಮಯ್ಯ, ದಲಿತ ರಾಮಯ್ಯ
ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ.

ಕೋಮುವಾದ ಯಾರೇ ಮಾಡಿದರೂ ವಿರೋಧಿಸುವೆ
ಹಿಂದೂ ಕೋಮುವಾದದಷ್ಟೇ ಸ್ಪಷ್ಟತೆ ಮತ್ತು ಬದ್ಧತೆಯಿಂದ ನಾನು ಮುಸ್ಲಿಮ್ ಮತ್ತಿತರ ಧರ್ಮಗಳ ಕೋಮುವಾದವನ್ನೂ ವಿರೋಧಿಸುತ್ತಾ ಬಂದಿದ್ದೇನೆ. ಭಾರತೀಯ ಜನತಾ ಪಕ್ಷದ ರೀತಿಯಲ್ಲಿ ರಾಜಕೀಯ ಕಾರಣಕ್ಕಾಗಿ ಒಳ್ಳೆಯವರು-ಕೆಟ್ಟವರು ಎಂಬ ಭೇದವಿಲ್ಲದೆ ಸಾರಾಸಗಟಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡ ಕೋಮುವಾದದ ರಾಜಕೀಯವನ್ನು ನಾನು ಮಾಡಿದವನಲ್ಲ. ಮುಸ್ಲಿಮ್ ಬಂಧುಗಳ ಮೂಲಭೂತ ಅವಶ್ಯಕತೆಗಳಾದ ಭದ್ರತೆ, ಶಿಕ್ಷಣ,ಆರೋಗ್ಯ, ಉದ್ಯೋಗಳನ್ನು ಒದಗಿಸಲು ಮುಂಗಡಪತ್ರದಲ್ಲಿ ನ್ಯಾಯಬದ್ಧವಾದ ಪಾಲನ್ನು ಎತ್ತಿಟ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯೂ ಇದೆ, ಅಭಿಮಾನವೂ ಇದೆ.

ರಾಜಕೀಯ ಪ್ರೇರಿತ ಗಲಭೆ ಹುಟ್ಟು ಹಾಕಿದ್ದು ಬಿಜೆಪಿ
ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನೇ ನೆಪವಾಗಿಟ್ಟುಕೊಂಡು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ಹುಟ್ಟುಹಾಕಿದ ವಿವಾದ ಮತ್ತು ಗಲಭೆಗಳು ರಾಜಕೀಯ ಪ್ರೇರಿತವಾದುದು ಎಂದು ರಾಜ್ಯದ ಜನರಿಗೆ ಈಗ ಮನದಟ್ಟಾಗಿದೆ.

ಬಿಜೆಪಿಯವರು ಬಗೆ ಬಗೆಯ ವೇಷ ತೊಟ್ಟಿದ್ದರು
ಬಿಜೆಪಿಯ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವ-ಶಾಸಕರವರೆಗೆ ಎಲ್ಲರೂ ಬಗೆಬಗೆಯ ವೇಷಧರಿಸಿ ಟಿಪ್ಪು ಜಯಂತಿ ಆಚರಿಸಿರುವುದು ಮಾತ್ರವಲ್ಲ ಟಿಪ್ಪುವನ್ನು ಹಾಡಿ ಹೊಗಳಿದ್ದಕ್ಕೆ ಸಾಕ್ಷಿಗಳಿವೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಟಿಪ್ಪುವಿನ ಬಗ್ಗೆ 400 ಪುಟಗಳ ಪುಸ್ತಕ ಬರೆಸಿದ್ದು ಮಾತ್ರವಲ್ಲ ಟಿಪ್ಪುವನ್ನು ಕೊಂಡಾಡಿ ಮುನ್ನುಡಿಯನ್ನೂ ಬರೆದಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನನ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದರು.

ಹಿಂದೂ ಯುವಕರ ಕೊಲೆ ವಿಚಾರದಲ್ಲಿ ಹೇಳಿದ್ದೆಲ್ಲ ಸುಳ್ಳೆ, ಬಿಜೆಪಿ ಕಚೇರಿಗೆ ದಾಖಲೆ ಕಳುಹಿಸುವೆ
ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಯುವಕರ ಕೊಲೆ ನಡೆದಿತ್ತು ಎಂಬ ಸುಳ್ಳು ಪ್ರಚಾರವನ್ನೂ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಶೋಭಾ ಕರಂದ್ಲಾಜೆಯವರು ರಾಜ್ಯದಲ್ಲಿ 24 ಹಿಂದೂಗಳ ಹತ್ಯೆಗಳು ನಡೆದಿವೆ ಎಂದು ಕೇಂದ್ರ ಗೃಹಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಜೀವಂತವಿದ್ದ ವ್ಯಕ್ತಿಯ ಹೆಸರನ್ನೂ ಸೇರಿಸಲಾಗಿತ್ತು. ಅದರಲ್ಲಿ ಹನ್ನೊಂದು ಹಿಂದೂಗಳ ಹತ್ಯೆಯಲ್ಲಿ ಆರೋಪಿಗಳಾಗಿದ್ದವರು ಎಸ್ ಡಿಪಿಐ ಮತ್ತು ಪಿಎಫ್ ಐ ಸದಸ್ಯರು. ಅವರ ವಿರುದ್ಧ ನಮ್ಮದೇ ಸರ್ಕಾರ ಪ್ರಕರಣ ದಾಖಲಿಸಿ ಆರೋಪಪಟ್ಟಿ ಸಲ್ಲಿಸಿತ್ತು. ಅವರಲ್ಲಿ ಪರೇಶ್ ಮೇಸ್ತಾ ಎಂಬ ಯುವಕನ ಸಾವು ಹತ್ಯೆಯಲ್ಲ ಎಂದು ಸಿಬಿಐ ಇತ್ತೀಚೆಗೆ ಹೇಳಿದೆ. ಉಳಿದ ಹತ್ಯೆಗಳು ನಡೆದಿದ್ದು ವೈಯಕ್ತಿಕ ದ್ವೇಷ-ಜಗಳಗಳಿಂದ ಎಂದು ತನಿಖೆಯಿಂದ ಗೊತ್ತಾಗಿದೆ. ಇದೇ ಅವಧಿಯಲ್ಲಿ 11 ಮುಸ್ಲಿಮ್ ಯುವಕರ ಹತ್ಯೆಯೂ ನಡೆದಿತ್ತು. ಈ ಹತ್ಯೆಗಳ ಎಲ್ಲ ಆರೋಪಿಗಳು ಬಜರಂಗದಳ ಮತ್ತಿತರ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಅವರ ವಿರುದ್ಧವೂ ನಮ್ಮ ಸರ್ಕಾರ ಪ್ರಕರಣಗಳನ್ನು ದಾಖಲಿಸಿತ್ತು.

ಈ ಪ್ರಕರಣಗಳ ಸಮಗ್ರ ಮಾಹಿತಿಯನ್ನು ನಮ್ಮ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ರಾಮಲಿಂಗ ರೆಡ್ಡಿಯವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಿಜೆಪಿ ಕಚೇರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ.

ಅಪಪ್ರಚಾರ ಮಾಡಿದಷ್ಟೂ ಅವರೇ ಬೆತ್ತಲಾಗುತ್ತಾರೆ
ಕರ್ನಾಟಕದ ಜನತೆ ಪ್ರಜ್ಞಾವಂತರಿದ್ದಾರೆ, ಸರಿ-ತಪ್ಪುಗಳನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕವುಳ್ಳವರಾಗಿದ್ದಾರೆ. ಆದ್ದರಿಂದ ಅಪಪ್ರಚಾರ ನಡೆಸಿದಷ್ಟು ಅಪಪ್ರಚಾರ ನಡೆಸಿದವರು ರಾಜ್ಯದ ಜನರ ಮುಂದೆ ಬತ್ತಲಾಗುತ್ತಾರೆ ಎನ್ನುವುದು ನನಗೆ ಗೊತ್ತು. ನನ್ನ ವಿರುದ್ದದ ಅಪಪ್ರಚಾರವನ್ನು ನಿಲ್ಲಿಸಬೇಕೆಂದು ನಾನೇನು ಮನವಿ ಮಾಡುವುದಿಲ್ಲ. ಆದರೆ ಇಂತಹ ಅಪಪ್ರಚಾರಗಳಿಗೆ ಹೆದರಿ ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದದ ರಾಜಕಾರಣದ ವಿರುದ್ದದ ನನ್ನ ಹೋರಾಟವನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ ಅಷ್ಟೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಇದನ್ನೂ ಓದಿ | CT Ravi | ನನ್ನನ್ನು ಮುಲ್ಲಾ ಅಂದ್ರೆ ಮುಲ್ಲಾಗಳೂ ಒಪ್ಪಲ್ಲ, ನಾನು ಏನಿದ್ದರೂ ಹಿಂದು ಹುಲಿ ಅಂದರು ಸಿ.ಟಿ. ರವಿ

Exit mobile version