Site icon Vistara News

Siddaramaiah | ನಾನು ಹಿಂದು ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah

ಹುಬ್ಬಳ್ಳಿ: ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಲ್ಲಿ ರಾಜಕೀಯ ಮಾಡಿವುದು ತಪ್ಪು. ಸಮಾಜದಲ್ಲಿ ಹಿಂದು, ಮುಸ್ಲಿ‌ಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾನ. ನಾನು ಹಿಂದು ವಿರೋಧಿಯಲ್ಲ, ಹಿಂದುತ್ವದ ವಿರೋಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಆದರೆ, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಪ್ರತಿ ಹಳ್ಳಿಯಲ್ಲೂ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವೂ ಕಟ್ಟಿಲ್ಲವೇ? ಆದರೆ, ಇದರಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್‌ಎಸ್ಎಸ್ ಹಾಗೂ ಹಿಂದು ಮಹಾಸಭಾ ನಾಯಕನೂ ಭಾಗವಹಿಸಿಲ್ಲ. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಗಂಭೀರ ಸ್ವರೂಪದಲ್ಲಿತ್ತು. ಆರ್‌ಎಸ್ಎಸ್ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದರೇ? ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅವಹೇಳನ ಮಾಡಲೆಂದು ನಾಯಿ ಮರಿ ಎಂದು ಹೇಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಅನುದಾನ‌ ಧೈರ್ಯವಾಗಿ ಕೇಳಿ ಎಂದು ಹಳ್ಳಿಯ ಭಾಷೆಯಲ್ಲಿ ಹೇಳಿದ್ದೇನೆ. ಹಾಗಾದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜಾಹುಲಿ ಎನ್ನುತ್ತಾರೆ, ನನಗೆ ಟಗರು ಮತ್ತು ಹೌದು ಹುಲಿಯಾ ಎನ್ನುತ್ತಾರೆ. ಅದನ್ನು ತಪ್ಪಾಗಿ ಅರ್ಥೈಸಿ ಕೊಂಡರೆ ಹೇಗೆ ಎಂದರು.

ಇದನ್ನೂ ಓದಿ | Karnataka Election : ಈ ಸಂಕ್ರಾಂತಿ ನಂತರ ಜೆಡಿಎಸ್‌ ಮೇಲೆ ಆಪರೇಷನ್‌ ಕಾಂಗ್ರೆಸ್‌; ಯಾರು ಎಂದೂ ಗೊತ್ತು: ಎಚ್‌ಡಿಕೆ

ವಿಧಾನಸೌಧಕ್ಕೆ ಎಂಜಿನಿಯರ್ ಏಕೆ ಹಣ ತಂದಿದ್ದರು? ಸಿಎಂ ಅಥವಾ ಯಾವುದಾದರೂ ಮಂತ್ರಿಗೆ ಲಂಚ ನೀಡಲು ಹೋದರೂ ಹೋಗಿರಬಹುದು. ಆ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಹೇಳಿದರು. ಈ ವೇಳೆ ಸಿದ್ದರಾಮಯ್ಯಗೆ ಹಣ ನೀಡಲು ಹೋಗಿಬಹುದು ಎಂಬ ಸಚಿವ ಸಿ.ಸಿ.ಪಾಟೀಲ ಹೇಳಿಕೆಗೆ ಉತ್ತರಿಸಿ, ನಾವು ಸರ್ಕಾರದಲ್ಲಿ ಇದ್ದೇವಾ? ಎಂಜಿನಿಯರ್ ನನಗೆ ತಂದು ಕೊಟ್ಟಿದ್ದಾನಾ? ಸಾಮಾನ್ಯವಾಗಿ ದುಡ್ಡು ಯಾರಿಗೆ ತಂದು ಕೊಡುತ್ತಾರೆ. ಸರ್ಕಾರದಲ್ಲಿ ಇರುವವರಿಗೆ ತಾನೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೂರು ತಿಂಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ
ಬಾಗಲಕೋಟೆ: ಬಸವ ವಸತಿ ಯೋಜನೆಗೆ ನರೇಗಾ ಹಣ ಸೇರಿಸಿ ಫಲಾನುಭವಿಗೆ ಒಟ್ಟು ೧,೮೦,೦೧೦ ರೂಪಾಯಿ ಕೊಡುತ್ತಿದ್ದೇವೆ. ೧೨೦೦ ಕುಟುಂಬಗಳಿಗೆ ಮನೆಗಳನ್ನು ಕೊಡಿಸುವ ಕೆಲಸ ಮಾಡಿದ್ದೇನೆ. ಈ ಸರ್ಕಾರ ಬಂದ ಮೇಲೆ ಇವರು ಒಂದು ಗ್ರಾಮ ಪಂಚಾಯತಿಗೆ ೨೦, ೩೦ ಮನೆ ಕೊಟ್ಟಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಂದಮೇಲೆ ಯಾರಿಗೆ ಮನೆ ಇಲ್ಲವೋ ಅವರಿಗೆಲ್ಲ ಮನೆ ಕೊಡುತ್ತೇವೆ. ಇನ್ನು ಮೂರು ತಿಂಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಮಾಜಿ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಬನಶಂಕರಿ ಬನಶಂಕರಿ ಜಾತ್ರೆಯ ಮಹಾರಥೋತ್ಸವದಲ್ಲಿ ಭಾಗಿಯಾಗಿ ಮಾತನಾಡಿ, ಕ್ಲಿನಿಕ್ ಎಂಬುವುದು ಇಂಗ್ಲಿಷ್ ಪದ. ನಮ್ಮ ಕ್ಲಿನಿಕ್ ಓಪನ್ ಮಾಡುತ್ತಿದ್ದಿಯಾ, ಇಲ್ಲಿನ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳಿಲ್ಲ, ಇಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಿ ಎಂದು ಹೆಲ್ತ್ ಮಿನಿಸ್ಟರ್‌ಗೆ ಹೇಳಿದೆ. ಆದರೆ ಅವರ ಸರ್ಕಾರವಿದ್ದರೂ ಕೇಳಿಲ್ಲ. ಚುನಾವಣೆಗಾಗಿ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದರು.

ಬಾದಾಮಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಬನಶಂಕರಿ ದೇವಿ ರಥೋತ್ಸವ ನೆರವೇರಿತು.

ಸ್ಪರ್ಧೆಯ ಗುಟ್ಟು ಬಿಟ್ಟುಕೊಡದ ಮಾಜಿ ಸಿಎಂ
ಸಿದ್ದರಾಮಯ್ಯಗೆ ಮತ್ತೊಮ್ಮೆ ಬಾದಾಮಿ ಕ್ಷೇತ್ರದಲ್ಲೇ ನಿಲ್ಲುವಂತೆ ಜನರು ಒತ್ತಾಯಿಸಿದ್ದು, ಆದರೆ ಮಾಜಿ ಸಿಎಂ ಸ್ಪರ್ಧೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ನನಗೆ ಕೋಲಾರದಲ್ಲಿ ನಿಲ್ಲಬೇಕು ಎಂಬ ಒತ್ತಡ ಇದೆ, ಬಾದಾಮಿಯಲ್ಲಿ ನೀವು ಒತ್ತಡ ಹಾಕುತ್ತಿದ್ದೀರಿ. ವರುಣಾದಲ್ಲಿ ಅಲ್ಲಿಯ ಜನ ಒತ್ತಡ ಹಾಕುತ್ತಿದ್ದಾರೆ. ಅದಕ್ಕೆ ಈ ವಿಷಯವನ್ನು ನಾನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಹೈಕಮಾಂಡ್ ಆಗಿದ್ದು, ಅವರು ನನಗೆ ಎಲ್ಲಿ ನಿಲ್ಲು ಎನ್ನುತ್ತಾರೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಜಾತ್ರೆಯಲ್ಲಿ ಅರ್ಚಕರ ಮನವಿ
ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂಗೆ ಅರ್ಚಕರು ಮನವಿ ಮಾಡಿದರು. ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದ ಅರ್ಚಕರ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.

ಇದನ್ನೂ ಓದಿ | Karnataka Election : ಕಾಂಗ್ರೆಸ್‌ನವರನ್ನು ಟೀಕಿಸಿ ಸಮಯ ಹಾಳು ಮಾಡಲಾರೆ; ನಮ್ಮಿಂದ ಬಡತನದ ಪ್ರಮಾಣ ತಗ್ಗಿದೆ: ಜೆ.ಪಿ. ನಡ್ಡಾ

Exit mobile version