ತುಮಕೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಲವು ಬಡಜನರ ಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ. ಮುಸ್ಲಿಮರಿಗಿದ್ದ ಶೇ. 4 ಮೀಸಲಾತಿ ರದ್ದು ಮಾಡಿದ್ದು, ಶಾದಿ ಭಾಗ್ಯ, ಪಶು ಭಾಗ್ಯ ಇಂತಹ ಅನೇಕ ಯೋಜನೆಗಳನ್ನು ಬಿಜೆಪಿತೆ ಗೆದುಹಾಕಿದೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ 224 ಕ್ಷೇತ್ರಗಳಲ್ಲಿ ಒಂದು ಟಿಕಟ್ ಕೂಡ ನೀಡಿಲ್ಲ. ಹೀಗಾಗಿ ಸ್ವಾಭಿಮಾನ ಇದ್ದರೆ ಮುಸ್ಲಿಮರು ಈ ಬಾರಿ ಒಬ್ಬರೂ ಬಿಜೆಪಿಗೆ ಮತ ಹಾಕಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಜಿಲ್ಲೆಯ ಪಾವಗಡದ ಚಳ್ಳಕೆರೆ ಕ್ರಾಸ್ ಬಳಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್‌ಗೆ ಮತಹಾಕಿ, ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಅವರನ್ನು ಗೆಲ್ಲಿಸಬೇಕು. ಶಾಸಕ ವೆಂಕಟರಮಣಪ್ಪ ಬಹಳ ಸಜ್ಜನ ಸ್ವಾಭಿಮಾನಿ ರಾಜಕಾರಣಿ. ಪಾವಗಡಕ್ಕೆ ಕುಡಿಯುವ ನೀರು ಇರಲಿಲ್ಲ. ವೆಂಕಟರಮಣಪ್ಪ ಹೇಳಿದ್ದರಿಂದ ನಾನು ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಕೂಡ್ಲಿಗಿ, ಚಳ್ಳಕೆರೆ, ಪಾವಗಡಕ್ಕೆ ನೀರು ಕೊಡುವ ಯೋಜನೆ ಮಾಡಿದೆ ಎಂದು ಹೇಳಿದರು.
2200 ಕೋಟಿ ರೂ.ಗಳ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಜೆಡಿಎಸ್ ತಿಮ್ಮರಾಯಪ್ಪ, ಕುಮಾರಸ್ವಾಮಿ ಈ ಭಾಗದಲ್ಲಿ ಏನೂ ಮಾಡಲಿಲ್ಲ. ಇಡೀ ಏಷ್ಯಾದಲ್ಲೇ 2000 ಮೆಗಾವ್ಯಾಟ್ ಸೋಲಾರ್ ಪಾರ್ಕ್ ಮಾಡಿದ್ದು ನಮ್ಮ ಸರ್ಕಾರ. ಡಿ.ಕೆ. ಶಿವಕುಮಾರ್ ಪವರ್ ಮಿನಿಸ್ಟರ್ ಆಗಿದ್ದಾಗ ನಾನೇ ಬಂದು ಸೋಲಾರ್ ಪಾರ್ಕ್ ಉದ್ಘಾಟನೆ ಮಾಡಿದ್ದೆ. ಪಾವಗಡ ಭಾಗದಲ್ಲಿ ಆರ್ಥಿಕ ಚಟುವಟಿಕೆ ಜಾಸ್ತಿಯಾಗಿ, ಉದ್ಯೋಗ ಸೃಷ್ಟಿ, ಭೂಮಿ ಬೆಲೆ ಜಾಸ್ತಿಯಾಗುವುದಕ್ಕೆ ಸೋಲಾರ್ ಪಾರ್ಕ್ ಕಾರಣ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರಾತಿ ಮಾಡಿ ಚಾಲನೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಇಲ್ಲಿನ ಕೆರೆಗಳು ತುಂಬಿದರೆ ಇದು ಮಲೆನಾಡು ಆಗುತ್ತದೆ. ಎತ್ತಿನಹೊಳೆ ಪ್ರಾಜೆಕ್ಟ್‌ನ ಕುಮಾರಸ್ವಾಮಿ ವಿರೋಧಿಸಿದರು ಎಂದು ಆರೋಪಿಸಿದ ಅವರು, ಎತ್ತಿನಹೊಳೆ ಯೋಜನೆ ನಿಮಗೆ ಬೇಕಾ, ಬೇಡವಾ? ಬೇಕು ಎನ್ನುವುದಾರೆ ಜೆಡಿಎಸ್ ತಿರಸ್ಕಾರ ಮಾಡಿ ಎಂದು ಹೇಳಿದರು.
ಎಚ್.ವಿ.ವೆಂಕಟೇಶ್ ಅವರನ್ನು ಈ ಭಾಗದಿಂದ ಗೆಲ್ಲಿಸಿ ಕಳುಹಿಸಿದರೆ ನಿಮ್ಮ ತಾಲೂಕಿಗೆ ಏನು ಬೇಕಾದರೂ ಕೊಡುತ್ತೇವೆ. ಬಿಜೆಪಿ ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದರು. ಶಾಸಕರಿಗೆ ಕೋಟ್ಯಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬಂದರು. ಕಳೆದ ಬಾರಿ ನಾವು 80 ಶಾಸಕರು ಇದ್ದರೂ 37 ಸ್ಥಾನ ಇದ್ದ ಜೆಡಿಎಸ್‌ನ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ, ಕುಮಾರಸ್ವಾಮಿ ಬೇಜವಾಬ್ದಾರಿತನ, ಶಾಸಕರ ನಿರ್ಲಕ್ಷ್ಯತನ ಸರ್ಕಾರ ಬೀಳಲು ಕಾರಣವಾಯಿತು ಎಂದು ಆರೋಪಿಸಿದರು.
ಇದನ್ನೂ ಓದಿ | Karnataka Election: 2018ರಲ್ಲಿ ಮನೆಗೆ ಬಂದು ಅಧಿಕಾರ ಕೊಟ್ಟು ಕೈ ಕೊಟ್ಟ ಕಾಂಗ್ರೆಸ್ ಈಗ ದುಷ್ಪರಿಣಾಮ ಎದುರಿಸುತ್ತೆ: ಎಚ್.ಡಿ. ದೇವೇಗೌಡ
ಒಂದು ವರ್ಷ ತಾಜ್ ವೆಸ್ಟ್ ಎಂಡ್‌ನಲ್ಲಿ ಉಳಿದುಕೊಂಡ ಆ ಗಿರಾಕಿ, ಯಾರನ್ನೂ ಭೇಟಿ ಮಾಡದೆ ಮಜಾ ಮಾಡಿದರು. ಈಗ ಯಾವ ಪಾರ್ಟಿಯೂ ಮೆಜಾರಿಟಿ ಬರಬಾರದು ಅಂತ ಹೋಮ ಮಾಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
ಶಾಸಕ ವೆಂಕಟರಮಣಪ್ಪ, ಆಂಧ್ರ ಪ್ರದೇಶದ ಕಾಂಗ್ರೆಸ್ ನಾಯಕ ರಘುವೀರ ರೆಡ್ಡಿ ಹಾಗೂ ಸಾವಿರಾರು ಕಾರ್ಯಕರ್ತರು ಇದ್ದರು.