ಬೆಂಗಳೂರು: ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು ಕಾಂಗ್ರೆಸ್ ಸರ್ಕಾರ. ಅದನ್ನು ತಮ್ಮ ಸಾಧನೆಯೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕೊರೊನಾ ತುರ್ತು ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ ಪೂರೈಸಲಿಲ್ಲ, ಪ್ರವಾಹ ಬಂದಾಗ ಪರಿಹಾರ ನೀಡಲಿಲ್ಲ. ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯ ಮಾಡಿ ಈಗ ಮೈಸೂರಿನಲ್ಲಿ ಯೋಗ ಮಾಡಲು ಪ್ರಧಾನಿ ಮೋದಿ ಆಗಮಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ. ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ಸಂದರ್ಭದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿತ್ತು. ಜಾಗ, ಅನುದಾನ ನೀಡಿತು. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಾನೇ ಮಾಡಿಸಿದ್ದು ಎಂದು ಪ್ರತಾಪ್ ಸಿಂಹ ಬಹಳ ಸಲ ಹೇಳಿದ್ದಾರೆ. ಆದರೆ ವಾಸ್ತವವೆಂದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಮಹದೇವಪ್ಪ ಸಚಿವರಾಗಿದ್ದರು, ಆಗ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಭೂಸಾರಿಗೆ ಸಚಿವರಾಗಿದ್ದರು. ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು- ಬೆಂಗಳೂರು ಹೆದ್ದಾರಿಯನ್ನು 10 ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆಯನ್ನು ಆಗ ನೀಡಲಾಯಿತು ಎಂದರು.
1913ರಲ್ಲಿ ಮೈಸೂರು ಬ್ಯಾಂಕ್ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದರು. ಇಂದು ಆ ಹೆಸರನ್ನೇ ಮೋದಿ ಅವರು ಅಳಿಸಿ ಹಾಕಿದ್ದಾರೆ. ಇದರ ಜತೆಗೆ ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಸೇರಿ 4 ಬ್ಯಾಂಕುಗಳನ್ನು ಬೇರೆ ಬ್ಯಾಂಕ್‌ಗಳ ಜತೆ ವಿಲೀನ ಮಾಡಿದ್ದು ಯಾರು? ಇವು ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದವು. ಈ ಬ್ಯಾಂಕುಗಳು ದಿವಾಳಿಯಾಗಿವೆ ಎಂದು ವಿಲೀನ ಮಾಡಿದ್ದರಿಂದ ಕನ್ನಡಿಗರಿಗೆ ಕೆಲಸ ಸಿಗದಂತಾಗಿದೆ. ಇದು ನಮ್ಮ ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ ಎಂದರು.
ಇದನ್ನೂ ಓದಿ | Modi in Karnataka | ʼಬೇಸ್ʼ ರೆಡಿ ಮಾಡಿದ್ದು ನಾನೇ ಎಂದು ಬೀಗುತ್ತಿದ್ದಾರೆ ಸಿದ್ದರಾಮಯ್ಯ
ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಮರ್ಪಕವಾಗಿ ಆಮ್ಲಜನಕ ಪೂರೈಸಲಿಲ್ಲ. ಆಮ್ಲಜನಕ ಸಿಗದೆ ರಾಜ್ಯದಲ್ಲಿ ಬಹಳ ಮಂದಿ ಸತ್ತು ಹೋದರು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಒಂದು ಉದಾಹರಣೆ. ಕೇಂದ್ರ ಸಚಿವರು ಸಂಸತ್ತಿಗೆ ಉತ್ತರ ನೀಡುವಾಗ ಆಮ್ಲಜನಕ ಸಿಗದೆ ದೇಶದಲ್ಲಿ ಒಬ್ಬರು ಸತ್ತಿಲ್ಲ ಎಂದು ಸುಳ್ಳು ಹೇಳಿದರು. ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ, ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ ಎಂದು ಅಸಮಾಧಾನ ಹೊರಹಾಕಿದರು.
ಮೋದಿ ಅವರು ಪ್ರಧಾನಿಯಾದ ಮೇಲೆ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11 ಲಕ್ಷ ಕೋಟಿ ರೂ., ಉಳಿದಿದ್ದು, ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹಿರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಗುತ್ತಿಗೆ ಕೆಲಸಗಳಲ್ಲಿ ಶೇ.40 ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದಿತ್ತು. ಅದಕ್ಕೆ ಮೋದಿ ಅವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಎಂದ ಅವರು, ಸಬ್ ಅರ್ಬನ್ ರೈಲು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನಂತ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದರು. ಅಂದಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ, ಆದರೆ ಕೆಲಸ ಆರಂಭ ಆಗಿಲ್ಲ. ಈಗ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಅಗ್ನಿಪಥ್ ಯೋಜನೆಯಡಿ ಯುವಕರನ್ನು ಕೇವಲ 4 ವರ್ಷಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. 4 ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ. ಅಗ್ನಿಪಥ್ ವಿರುದ್ಧದ ಯುವಕರ ಹೋರಾಟ ನ್ಯಾಯಯುತವಾಗಿದೆ ಎಂದು ನಾವು ಬೆಂಬಲ ನೀಡಿದ್ದೇವೆ. ಆದರೆ ಈ ಹೋರಾಟವನ್ನು ಹಿಂಸಾತ್ಮಕವಾಗಿ ನಡೆಸಬಾರದು. ಶಾಂತಿಯಿಂದ ಹೋರಾಟ ಮಾಡಬೇಕು ಎಂದರು.
ಬಿಜೆಪಿ ವಿರುದ್ಧ ಜನಾಭಿಪ್ರಾಯವಿದೆ
ಇತ್ತೀಚೆಗೆ ವಿಧಾನ ಪರಷತ್ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಇಲ್ಲಿಯವರೆಗೆ ಕ್ಷೇತ್ರದಲ್ಲಿ ಪಕ್ಷದಿಂದ ಯಾರು ಗೆದ್ದಿರಲಿಲ್ಲ. ಎರಡು ಬಾರಿ ಜೆಡಿಎಸ್ ಶ್ರೀಕಂಠೇಗೌಡ ಗೆದ್ದಿದ್ದರು. ಜೆಡಿಎಎಸ್‌ನವರು ಇದನ್ನು ತಮ್ಮ ಭದ್ರಕೋಟೆ ಅಂದುಕೊಂಡಿದ್ದರು. ಆದರೆ ಈ ಬಾರಿ ಅವರ ಅಭ್ಯರ್ಥಿಯೇ ಸೋತಿದ್ದಾರೆ. ಈ ಗೆಲುವು ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ. ಈ ಫಲಿತಾಂಶದಿಂದ ಜನಾಭಿಪ್ರಾಯ ಬಿಜೆಪಿಗೆ ವಿರುದ್ಧವಾಗಿದೆ ಎಂದು ತಿಳಿಯುತ್ತದೆ. ಬಿಬಿಎಂಪಿ ಚುನಾವಣೆ, ವಿಧಾನ ಸಭೆ ಚುನಾವಣೆಯಲ್ಲೂ ಮೊದಲೇ ಅಭ್ಯರ್ಥಿಗಳನ್ನು ಹಾಕುತ್ತೇವೆ. ಈ ಬಗ್ಗೆ ಚಿಂತನೆ ನಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ | Modi In Karnataka | 40 ವರ್ಷ ಆಗದ ಕೆಲಸವನ್ನು 40 ತಿಂಗಳಲ್ಲಿ ಮಾಡುವೆ ಎಂದ ಮೋದಿ