ಮೈಸೂರು: ಬಿಜೆಪಿ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯವಲ್ಲ, ಇದರಲ್ಲಿ ಯಾವ ವಿಶೇಷವೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಮಾತನಾಡಿದ ಅವರು “”ದ್ರೌಪದಿ ಮುರ್ಮು ಅವರು ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲ ಸೇರಿ ಹಲವಾರು ಹುದ್ದೆ ಅಲಂಕರಿಸಿದ್ದಾರೆ. ಬಿಜೆಪಿ ಮಹಿಳೆಯರನ್ನು ಯಾವಾಗಲೂ ಸಮನಾಗಿ ನೋಡಿಲ್ಲ. ಆ ರೀತಿ ಇದ್ದರೆ ಆರ್‌ಎಸ್‌ಎಸ್ ಮುಖ್ಯ ಸರಸಂಚಾಲಕರನ್ನಾಗಿ ಆಯ್ಕೆ ಮಾಡಲಿ. ಮೋಹನ್ ಭಾಗವತ್ ಅವರ ಸ್ಥಾನಕ್ಕೆ ಮಹಿಳೆಯನ್ನು ತರಲಿʼʼ ಎಂದು ನುಡಿದರು.
“”ರಾಷ್ಟ್ರಪತಿಗಳಿಗೆ ಕೆಲಸ ಮಾಡಲು ಬಿಜೆಪಿಯವರು ಬಿಡುವುದಿಲ್ಲ. ರಾಮನಾಥ ಕೋವಿಂದ್ ಆರು ವರ್ಷ ರಾಷ್ಟ್ರಪತಿ ಆಗಿದ್ದರು. ಅವರು ಏನು ಮಾಡಿದರು? ಈಗಲೂ ನಾಮ್ ಕೇ ವಾಸ್ತೆಗೆ ರಾಷ್ಟ್ರಪತಿ ಆಯ್ಕೆ ಮಾಡುತ್ತಿದ್ದಾರೆ. ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದ ರೀತಿ ಕೆಲಸ ಮಾಡಲು ಆಗುತ್ತದೆಯಾʼʼ ಎಂದು ಪ್ರಶ್ನಿಸಿದರು.
ರಸ್ತೆ ಆಗಿದ್ದಷ್ಟೇ ಲಾಭ: “”ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಏನೂ ಪ್ರಯೋಜನ ಆಗಿಲ್ಲ. ಮೋದಿ ಸುಮ್ಮನೆ ಸುಳ್ಳು ಹೇಳಿ ಹೋಗಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ? ಅದು ಮಾಡಿರುವ ಅಭಿವೃದ್ಧಿ ಕಾರ್ಯದ ಪಟ್ಟಿ ಕೊಡಲಿ. ರಾಜ್ಯಕ್ಕೆ ಮೋದಿ ಏನೂ ಮಾಡುವುದಿಲ್ಲ ಅನ್ನೋದು ರಾಜ್ಯ ನಾಯಕರಿಗೆ ಗೊತ್ತಿದೆ. ಆದ್ದರಿಂದಲೇ ಇವರು ಯಾವುದೇ ಮನವಿ ನೀಡಿಲ್ಲ. ಮೈಸೂರು ಪ್ರವಾಸಕ್ಕೆ 25 ಕೋಟಿ ರೂ.ಗಳಿಗಿಂತ ಹೆಚ್ಚು ಖರ್ಚಾಗಿದೆ. ರಸ್ತೆ ರಿಪೇರಿ ಆಗಿದಷ್ಟೇ ಜನರಿಗೆ ಆದ ಲಾಭʼʼ ಎಂದರು.
ಜಿ.ಟಿ.ದೇವೇಗೌಡರ ರಾಜಕೀಯ ನಡೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ “”ಬೇರೆ ಪಕ್ಷದ ಶಾಸಕನ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಅವರು ಮೈಸೂರಿನಲ್ಲೇ ಇದ್ದಾರೆ. ಹೋಗಿ ಅವರನ್ನೇ ಕೇಳಿ, ನನ್ನನ್ನು ಯಾಕೆ ಕೇಳುತ್ತೀರಿʼʼ ಎಂದು ಸಿಟ್ಟಾದರು.
ಇದನ್ನೂ ಓದಿ | NDRF ನಿಯಮ ಪರಿಷ್ಕರಿಸಿ ಬಾಕಿ ಪರಿಹಾರ ಬಿಡುಗಡೆ ಮಾಡಿ: ಸಿದ್ದರಾಮಯ್ಯ ಒತ್ತಾಯ