ಬಾಗಲಕೋಟೆ: ನಾನು ಮುಖ್ಯಮಂತ್ರಿಯಾಗಬೇಕು ಎಂದರೆ ನೀವೆಲ್ಲ ಕಾಂಗ್ರೆಸ್‌ಗೆ ಮತ ಹಾಕಬೇಕು. ಬಾದಾಮಿ, ಕೋಲಾರ ಹಾಗೂ ವರುಣ ಕ್ಷೇತ್ರಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದೇನೆ. ಈ ಮೂರರ ಪೈಕಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೈಕಮಾಂಡ್ ಸೂಚಿಸುವುದೋ ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ನಾನು ಇರುವವರೆಗೆ ರಾಜಕೀಯ ನಿವೃತ್ತಿ ಹೊಂದಲ್ಲ. ನಾನು ಎಲ್ಲಿಯೇ ಸ್ಪರ್ಧೆ ಮಾಡಿದರೂ ನಾನು ನಿಮ್ಮವನು, ನೀವು ನಮ್ಮವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಭಾವುಕರಾಗಿ ಹೇಳಿದರು.
ಬಾದಾಮಿ ಪಟ್ಟಣದ ಎಪಿಎಂಸಿ ಆವರಣದಲ್ಲಿ 500 ಕೋಟಿ ರೂಪಾಯಿ ವೆಚ್ಚದ 17 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, 5 ಬಾರಿ ನಾನು ಗೆದಿದ್ದರೂ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಕೈಬಿಟ್ಟರು. ಆ ನೋವಿನಲ್ಲಿ ಬಾದಾಮಿ ಕ್ಷೇತ್ರದ ಜನ ನನ್ನ ಕೈ ಹಿಡಿದು ರಾಜಕೀಯವಾಗಿ ಶಕ್ತಿ ತುಂಬಿದರು. ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದ ನನಗೆ ಬೆಂಬಲವಾಗಿ ನಿಂತ ಕ್ಷೇತ್ರದ ಜನತೆಗೆ ಕೋಟಿ ಕೋಟಿ ನಮಸ್ಕಾರ ಹೇಳಿದರೂ ಕಡಿಮೆಯೇ. ನಿಮ್ಮನ್ನು ಯಾವತ್ತೂ ಜೀವನದಲ್ಲಿ ಮರೆಯಲಿಕ್ಕೆ ಆಗಲ್ಲ. ಎಷ್ಟೇ ಕೆಲಸ ಮಾಡಿ ಕೊಟ್ಟರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಬಾದಾಮಿ ಕ್ಷೇತ್ರದ ಜನ ಯಾವತ್ತೂ ನನ್ನ ಮನದಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | SC-ST Reservation: ಪರಿಶಿಷ್ಟ ಜಾತಿ-ಪಂಗಡಕ್ಕೆ ಸರ್ಕಾರದಿಂದ ವಂಚನೆ; ಕಾಂಗ್ರೆಸ್ ನಾಯಕರ ಪ್ರತಿಭಟನೆ, ರಾಜ್ಯಪಾಲರಿಗೆ ದೂರು
ಬಾದಾಮಿ-ಕೆರೂರು ಪಟ್ಟಣ ಹಾಗೂ 18 ಗ್ರಾಮಗಳಿಗೆ ಶಾಶ್ವತ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೊಳಿಸಿದ್ದೇನೆ. 228 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇದಾಗಿದ್ದು, ನಾಲ್ಕು ಪ್ಯಾಕೇಜ್‌ಗಳಲ್ಲಿ ಈ ಯೋಜನೆ ಜಾರಿಗೊಳಿಸಿದ್ದೇನೆ. ಇದು ಮೈತ್ರಿ ಸರ್ಕಾರದ ಸಮಯದಲ್ಲಿ ಜಾರಿಯಾದ ಯೋಜನೆಯಾಗಿದ್ದು, ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುವುದರಿಂದ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಏನೆಲ್ಲ ಮಾಡಬೇಕು ಅದನ್ನೆಲ್ಲ ಮಾಡಿದ್ದೇನೆ. ಬಾದಾಮಿ ಕ್ಷೇತ್ರದಲ್ಲಿ 4 ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ನಾನು ಇಲ್ಲಿಗೆ ಬಂದ ಮೇಲೆ ಮಲಪ್ರಭಾ ನದಿ ಎಂದೂ ಬತ್ತಿ ಹೋಗಿಲ್ಲ. ಮೈತ್ರಿ ಸರ್ಕಾರದಲ್ಲಿ 650 ಕೋಟಿ ರೂಪಾಯಿ ಕೆರೂರು ಏತ ನೀರಾವರಿ ಯೋಜನೆ ಕೆಲಸ ಮಾಡಿದೆ. ಇದರಿಂದ ಅನೇಕ ಕೆರೆಗಳಿಗೆ ಜೀವ ತುಂಬುವ ಕೆಲಸ ಮಾಡಿದೆವು. ಹಿಂದುಳಿದ ವರ್ಗಗಳ ಜನಾಂಗದ ಬಡಾವಣೆಗಳ ಅಭಿವೃದ್ಧಿ ಮಾಡಿದ್ದೇನೆ. 5 ವರ್ಷಗಳಲ್ಲಿ ನಾನು ಮಾಡಿದ ಕೆಲಸಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದೇನೆ ಎಂದರು.
ಕೆರೂರಿನಲ್ಲಿ ಫಸ್ಟ್ ಗ್ರೇಡ್ ಕಾಲೇಜು ಮಾಡಿದ್ದೇನೆ. ಸುಮಾರು 40 ಎಕರೆ ಜಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಅನುವು ಮಾಡಿಕೊಟ್ಟಿದೇನೆ. ಬಾದಾಮಿಯಲ್ಲಿ ಮಿನಿ ವಿಧಾನಸೌಧದ ಬೇಡಿಕೆ ಇತ್ತು. ಅದಕ್ಕೆ ಕ್ರಮ ಕೈಗೊಂಡಿದ್ದೇನೆ. ನೀರಾವರಿಗೆ ಸಂಬಂಧಿಸಿದ 3 ಎಕರೆ ಜಮೀನು ಕೊಡಿಸಿದೆ. ಪುಲಿಕೇಶಿ ಹಾಗೂ ಬಸವಣ್ಣ ಮೂರ್ತಿ ಕಾಮಗಾರಿ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಲ್ಲ. ಐದು ವರ್ಷಗಳ ಕಾಲ ನಾನು ಏನು ಮಾಡಿದ್ದೇನೆ ಎಂಬುವುದು ಮುಖ್ಯ. ಮೈತ್ರಿ ಸರ್ಕಾರದ ಸಮಯದಲ್ಲಿ ಬಾದಾಮಿ ಕ್ಷೇತ್ರದ ಸರ್ವರಿಗೂ ಮನೆ ಕಟ್ಟಿಸುವ ಯೋಚನೆ ಮಾಡಿದ್ದೆ. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮನೆಗಳನ್ನು ನೀಡಲಿಲ್ಲ. ನಾನು ಸಿಎಂ ಇದ್ದಾಗ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಆದರೆ ನಮ್ಮ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ ಎಂದು ಟೀಕಿಸಿದರು.
ಇದನ್ನೂ ಓದಿ | Karnataka Elections : ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಬಾದಾಮಿಯಿಂದಲೂ ಟಿಕೆಟ್ ಕೋರಿಕೆ?
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 4 ಗ್ಯಾರಂಟಿ
ಭಾಷಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದರು. 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಮಾಸಿಕ 2000 ರೂಪಾಯಿ, ಪಡಿತರ ಅಕ್ಕಿಯನ್ನು 7 ಕೆಜಿಯಿಂದ 10 ಕೆಜಿಗೆ ಏರಿಸುವುದು, ನಿರುದ್ಯೋಗಿ ಪದವೀಧರರಿಗೆ 2 ವರ್ಷದವರೆಗೆ ಒಬ್ಬರಿಗೆ 3000 ರೂ., ಡಿಪ್ಲೊಮಾ ಪಡೆದವರಿಗೆ ತಿಂಗಳಿಗೆ 15000 ರೂಪಾಯಿ ಕೊಡಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.