Site icon Vistara News

Basavaraj Bommai: ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ: ಬೊಮ್ಮಾಯಿ

Basavaraj Bommai

ಹುಬ್ಬಳ್ಳಿ: ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಎಂದು ಅನಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟಿದ್ದಾರೆ.‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬಂದು 6 ತಿಂಗಳು ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಭರವಸೆ ಈಡೇರಿಸಿಲ್ಲ. ಅವರೇ ಮಧ್ಯಂತರ ಆರ್ಥಿಕ ಸ್ಥಿತಿಗತಿ ಕುರಿತು ವರದಿ ಮಂಡನೆ ಮಾಡಿದರು. ಆದರೆ, ಅದರಿಂದ ಏನು ಸುಧಾರಣೆ ಆಗಿಲ್ಲ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.

ಪ್ರತಿ ವರ್ಷ ಬಂಡವಾಳ ವೆಚ್ಚ ಹೆಚ್ಚಾಗುತ್ತಾ ಹೋಗಬೇಕು. ಆದರೆ, ಈ ವರ್ಷ ಕಡಿಮೆಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಿ, ಅದಕ್ಕೆ ತಕ್ಕಂತೆ ಆದಾಯ ಸಂಗ್ರಹ ಮಾಡಬೇಕು. ಗ್ಯಾರಂಟಿ ಹೆಸರಲ್ಲಿ ಜನರ ಮೇಲೆ ಹೊರೆ ಹಾಕಿರುವುದನ್ನು ಕಡಿಮೆ ಮಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Hindu Rashtra : ನಮ್ಮದು ಹಿಂದು ರಾಷ್ಟ್ರ, ತಪ್ಪೇನು?; ಚರ್ಚೆ ಹುಟ್ಟುಹಾಕಿದ ಪೇಜಾವರ ಶ್ರೀ

ನೀರಾವರಿಗೆ ಅನುದಾನ ಕೊರತೆ

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ನಾವು 52 ಸಾವಿರ ಕೋಟಿ ರೂ. ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಭೂಪರಿಹಾರ ಮತ್ತು ಆರ್ ಆ್ಯಂಡ್ ಆರ್‌ಗೆ ಹಣ ಬಿಡುಗಡೆ ಮಾಡಬೇಕು. ಸುಮ್ಮನೆ ಕೋರ್ಟ್ ನೆಪ ಹೇಳುತ್ತಾರೆ. ಕೋರ್ಟ್‌ಗೂ ಹಣ ಬಿಡುಗಡೆಗೂ ಸಂಬಂಧ ಇಲ್ಲ. ಯಾವುದೇ ನೀರಾವರಿ ಯೋಜನೆ ಒಂದೇ ವರ್ಷದಲ್ಲಿ ಪೂರ್ಣಗೊಳ್ಳುವುದಿಲ್ಲ. ಮಲಪ್ರಭಾ ಯೋಜನೆ ನಲವತ್ತು ವರ್ಷದಿಂದ ನಡೆಯುತ್ತಿದೆ. ಇನ್ನೂ ರೋಣ ಭಾಗದಲ್ಲಿ ಮುಂದುವರಿಯುತ್ತಿದೆ. ಅವರ ಕಾಲದಲ್ಲಿ ತುಂಗಭದ್ರಾ ಯೋಜನೆ ಆರಂಭವಾಗಿತ್ತು. ಅದನ್ನು ನಾವು ಪೂರ್ಣಗೊಳಿಸಿದ್ದೇವೆ. ಈ ಸರ್ಕಾರ ಬಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಬಂದ ಮೇಲೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕೇವಲ ರಾಜಕೀಯ, ನಾವು ರಾಜ್ಯಕ್ಕೆ ಏನು ಅನುದಾನ ಕೊಡಬೇಕು ಅದನ್ನು ಕೊಟ್ಟಾಗಿದೆ. ಆದರೆ, ಇವರು ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಕೇಂದ್ರ ಸರ್ಕಾರದಿಂದ ನೇರವಾಗಿ ಆಯಾ ಇಲಾಖೆಗೆ ಅನುದಾನ ಹೋಗುತ್ತಿದೆ. ಇನ್ನು ಬರಗಾಲ ಕಾಮಗಾರಿ ಸೇರಿದಂತೆ ಯಾವುದೇ ಪರಿಹಾರಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಅಂತ ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಅವರು ದಾಖಲೆ ಬಿಡುಗಡೆ ಮಾಡಲಿ, ನಾವು ದಾಖಲೆ ಬಿಡುಗಡೆ ಮಾಡುತ್ತೇವೆ. ಕೇಂದ್ರದ ನಿಯಮಗಳು ಈಗ ಬದಲಾಗಿವೆ. ನೇರವಾಗಿ ಜಿಲ್ಲೆಗಳಿಗೆ ಹಣ ಹೋಗುತ್ತದೆ. ಸರ್ಕಾರಕ್ಕೆ ಹಣ ಕಳುಹಿಸಿದರೆ ಖರ್ಚು ಮಾಡುತ್ತಿಲ್ಲ ಎಂದು ಜಿಲ್ಲೆಗಳಿಗೆ ಆಯಾ ಯೋಜನೆಗಳಿಗೆ ಹೋಗುತ್ತಿದೆ‌. ರಾಜ್ಯ ಸರ್ಕಾರ ಅದನ್ನು ಹೇಳುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹಲಕ್ಷ್ಮೀ ಯೋಜನೆ ಶೇ. 35 ರಷ್ಟು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಸುಮ್ಮನೆ ತಂತ್ರಾಂಶದ ನೆಪ ಹೇಳುತ್ತಾರೆ. ಬರ ಪರಿಹಾರದ ವಿಚಾರದಲ್ಲಿಯೂ ರೈತರು ಫ್ರೂಟ್ಸ್‌ನಲ್ಲಿ ದಾಖಲೆ ಸಲ್ಲಿಸದಿದ್ದರೆ ಡಿಸಿಗಳು ಹೊಣೆ ಎಂದು ಹೇಳುತ್ತಾರೆ. ಅದು ಕೃಷಿ ಇಲಾಖೆಯವರ ಜವಾಬ್ದಾರಿ ಎಂದರು.

ಕೇಂದ್ರದಿಂದ ಅನುದಾನ ತರಲು ಪ್ರಯತ್ನ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಪಡೆಯಲು ನಾವೂ ಪ್ರಯತ್ನ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಮುಕ್ತವಾಗಿದ್ದಾರೆ ಎಂದರು.

ಯಾರಿಗೂ ಭಯ ಇಲ್ಲ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾರಂತ ಮಾಡಿದ್ದಾರೆ. ಎಲ್ಲ ಭಾರ ಅದರ ಮೇಲೆ ಹಾಕಿದರೆ ಏನು ಉಪಯೋಗ. ಸಿಐಡಿಗೆ ಕೊಟ್ಟರೆ ಯಾರಿಗೆ ಭಯ ಇದೆ, ಇವತ್ತಿಗೂ ಭ್ರೂಣ ಹತ್ಯೆ ನಡೆಯುತ್ತಿದೆ.

ಕೋಲಾರದಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿರುವ ಘಟನೆ ಅತ್ಯಂತ ಅಮಾನವೀಯ. ಈ ಭಾಗದಲ್ಲಿ ಪದೇ ಪದೇ ಈ ರೀತಿ ಘಟನೆ ಆಗತ್ತಿವೆ. ಘಟನೆ ಆದ ಮೇಲೆ ಅಮಾನತು ಮಾಡಿದರೆ ಏನು ಉಪಯೋಗ. ಎಲ್ಲ ಮುಗಿಸಿ ಅಮಾನತು ಮಾಡುವುದರಲ್ಲಿ ಏನೂ ಶೂರತ್ವ ಇಲ್ಲ. ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪನವರೇ ನಿಮ್ಮ ಪೌರುಷ ಅಮಾನತು ಮಾಡುವುದರಲ್ಲಿ ಅಲ್ಲ. ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದು ಮುಖ್ಯ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Sharavathi victims: ಶರಾವತಿ ಸಂತ್ರಸ್ತರ ಬಾಕಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಈಶ್ವರ ಖಂಡ್ರೆ ಸೂಚನೆ

ಬೆಳಗಾವಿಯಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯವೂ ಅಮಾನವೀಯ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ಈ ರೀತಿ ಘಟನೆ ನಡೆದಿದೆ. ಈ ಸರ್ಕಾರದಲ್ಲಿ ಕಳ್ಳರು ಕಾಕರಿಗೆ ಭಯ ಇಲ್ಲ ಅನಸುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಅಧಿಕಾರಿಗಳಿಗೆ ಯಾವುದೇ ಭಯ ಇಲ್ಲ. ಇದಕ್ಕೆ ದುಡ್ಡು ತಿಂದು ವರ್ಗಾವಣೆ ಮಾಡಿರುವುದೇ ಕಾರಣ ಎಂದು ಆರೋಪಿಸಿದರು.

Exit mobile version