ಬೆಂಗಳೂರು: ಸಂಸದ ಪ್ರತಾಪ ಸಿಂಹ ಹೆಂಡತಿಯನ್ನು ತನ್ನ ಸ್ವಂತ ತಂಗಿ ಎಂದು ಮೂಡಾದಲ್ಲಿ ಸೈಟ್ ತೆಗೆದುಕೊಂಡಿದ್ದ. ಕ್ರಿಮಿನಲ್ ಕೇಸ್ ಆಗಿರುವುದು ಗೊತ್ತಲ್ಲವೇ? ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಹಾಗೂ ಮೊಮ್ಮಗ ಚುನಾವಣೆಯಲ್ಲಿ (Karnataka Election) ಮತ ಕೇಳಲು ಅರ್ಹರಲ್ಲವಾ? ಅವರು ದೇಶದ ಪ್ರಜೆಗಳಲ್ಲವಾ? ಅದರಲ್ಲಿ ತಪ್ಪೇನಿದೆ? ಎಂದು ಶಾಸಕ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಸೊಸೆ, ಮೊಮ್ಮಗನನ್ನು ಕರೆದುಕೊಂಡು ಹೋಗಿ ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗ ಚುನಾವಣೆಯಲ್ಲಿ ತಂದೆ, ಮಕ್ಕಳು ಬಂದು ಮತ ಕೇಳುತ್ತಾರೆ. ನನ್ನ ಪತ್ನಿ, ಪುತ್ರ ಸಹ ಜನರ ಬಳಿಗೆ ತೆರಳಿ ಮತಗಳನ್ನು ಕೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಂಬದವರು ಮತ ಕೇಳಲು ಬರಿಗಾಲಿನಲ್ಲಿ ಹೋಗಿದ್ದರು. ಈಗ ರಾಕೇಶ್ ಪತ್ನಿ ಮಾವನ ಪರವಾಗಿ ಮತ ಕೇಳಲು ಹಕ್ಕಿಲ್ಲವಾ? ತಾತನ ಪರವಾಗಿ ಮತ ಕೇಳಲು ಧವನ್ ರಾಕೇಶ್‌ಗೆ ಹಕ್ಕಿಲ್ಲವಾ? ಎಂದು ಪ್ರತಾಪ್ ಸಿಂಹ ವಿರುದ್ಧ ಬೈರತಿ ಸುರೇಶ್ ವಾಗ್ದಾಳಿ ನಡೆಸಿದರು.
ಸೋಮಣ್ಣರನ್ನು ಸಿಎಂ ಮಾಡ್ತಾರಾ?
ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂಬ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೈರತಿ ಸುರೇಶ್, ಹಾಗಾದರೆ ಸೋಮಣ್ಣ ಅವರನ್ನು ಸಿಎಂ ಮಾಡ್ತಾರಾ? ಜಗದೀಶ್ ಶೆಟ್ಟರ್ ಅವರ ಹಿನ್ನೆಲೆ ಒಳ್ಳೆಯದಿದೆ. ಅವರು ಕಾಂಗ್ರೆಸ್ ಸೇರಿದ್ದು ಖುಷಿ ವಿಚಾರ. ಅವರ ಏಳಿಗೆ ಸಹಿಸದೆ ಬಿಜೆಪಿ ಅವರು ಟಿಕೆಟ್ ನಿರಾಕರಣೆ ಮಾಡಿದ್ದಾರೆ. ನಾವು ಸೂಕ್ತ ಗೌರವ, ಸ್ಥಾನಮಾನ ಕೊಡುತ್ತೇವೆ. ಎಲ್ಲವನ್ನೂ ಹೈಕಮಾಂಡ್‌ನವರು ನಿರ್ಧಾರ ಮಾಡುತ್ತಾರೆ. ಸೋಮಣ್ಣ ಅವರ ಬಳಿ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಮೊಮ್ಮಗನನ್ನು ಪ್ರಚಾರಕ್ಕೆ ಕರೆ ತಂದ ಸಿದ್ದರಾಮಯ್ಯಗೆ ಪುಕ್ಕಲುತನ ಕಾಡುತ್ತಿದೆ: ಪ್ರತಾಪ್ ಸಿಂಹ
ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಅವರು ನನ್ನ ಪೋನ್ ಅನ್ನು ಟ್ಯಾಪ್ ಮಾಡಿಸುತ್ತಿದ್ದಾರೆ. ಇದರ ಬಗ್ಗೆ ನಾನು ಶುಕ್ರವಾರ ಬೆಳಗ್ಗೆ ದೂರು ಕೊಡುತ್ತಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ಬರುತ್ತಿದೆ. ನನ್ನ ಪ್ರಕಾರ ಅವರು ಜೈಲಿಂದಲೇ ಚುನಾವಣೆ ಎದುರಿಸಬೇಕಾಗುತ್ತದೆ. ಬಿಜೆಪಿ ನಾಯಕರ ಸಪೋರ್ಟ್ ಇಲ್ಲ. ಜನರ ವಿಶ್ವಾಸ ಗಳಿಸಲು ಆಗದವರು ಇಂತಹ ಅಡ್ಡ ದಾರಿ ಹಿಡಿಯುತ್ತಾರೆ. ಜೈಲು-ಬೇಲು ಎನ್ನುವುದು ಕಟ್ಟಾ ಸುಬ್ರಹ್ಮಣ್ಯ ಹಾಗೂ ಅವರ ಮಗನಿಗೆ ಹೊಸದಲ್ಲ. ಅಟ್ರಾಸಿಟಿ ಕೇಸ್ ಹಾಕಿದ್ದಾರೆ, ಮತದಾರ ಮೇಲೆ ಹಲ್ಲೆ ಮಾಡಿದ್ದಾರೆ. ಈಗ ಬೇಲ್ ಮೇಲೆ ಹೊರಗಡೆ ಇದ್ದಾರೆ. ಎಂಎಲ್ಎ ಆಗುವವರು ಮತದಾರರ ಮೇಲೆ ಹಲ್ಲೆ ಮಾಡ್ತಾರಾ? ಎಂದು ಬೈರತಿ ಸುರೇಶ್ ಪ್ರಶ್ನೆ ಮಾಡಿದರು.
ಜೈಲಿಗೆ ಹೋಗಿ ಬಂದಿರುವ ಕಟ್ಟಾ ಜಗದೀಶ್
ಹೆಬ್ಬಾಳದ ಸಹೋದರ- ಸಹೋದರಿಯರ ಜತೆ ಬಂದು ನಾಮಪತ್ರ ಸಲ್ಲಿಸಿದ್ದೇನೆ. 20 ಸಾವಿರ ಜನ ಬಂದಿದ್ದರು. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲ್ಲ ಎಂದು ಹೇಳುತ್ತಿದ್ದಾರೆ. ಅದೇ ಕಾರಣಕ್ಕೆ ಅನೇಕ ಜನರಿಗೆ ಟಿಕೆಟ್ ತಪ್ಪಿದೆ. ಕಟ್ಟಾ ಜಗದೀಶ್ ತಮ್ಮ ತಂದೆಯ ನಾಮಬಲದಿಂದ ಬಂದಿದ್ದಾರೆ. ಬಹಳ ಚಿಕ್ಕವಯಸ್ಸಿನಲ್ಲೇ ಜೈಲಿಗೆ ಹೋಗಿ ಬಂದಿದ್ದಾರೆ. 30-45 ಕ್ರಿಮಿನಲ್ ಕೇಸ್‌ಗಳಿವೆ. ಇವರ ಬಳಿ ಹಣ ಇದೆ ಎಂದು ಟಿಕೆಟ್ ಕೊಟ್ಟಿರಬೇಕು. ಇವರಿಗೆ ಟಿಕೆಟ್ ತಪ್ಪಿಸಬೇಕೆಂದು ಬಿಜೆಪಿಯವರೇ ಸಿಡಿ ಬಿಡುಗಡೆ ಮಾಡಿದರು. ಅವರಿಗೆ ಠೇವಣಿ ಪಡೆಯುವುದೂ ಕಷ್ಟವಿದೆ. ಕಟ್ಟಾ ಜಗದೀಶ್ ನಾಯ್ಡು ಮೇಲೆ ಇಡಿ, ಸಿಬಿಐ ತನಿಖೆ ನಡೆಯುತ್ತಿದೆ. ಇದೆಲ್ಲವನ್ನೂ ಜನ ತೀರ್ಮಾನ ಮಾಡುತ್ತಾರೆ ಎಂದು ಬೈರತಿ ಹೇಳಿದರು.
ಇದನ್ನೂ ಓದಿ: Karnataka Election 2023: ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಕಾಂಗ್ರೆಸ್ ಘೋಷಿಸಲಿ: ವಿ. ಸೋಮಣ್ಣ ಸವಾಲು
ಡಿಕೆಶಿ, ಸಿದ್ದರಾಮಯ್ಯಗೆ ಸೋಲಿನ ಭಯ: ಛಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್‍ನ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯವೆಲ್ಲ ಸುತ್ತಿ ಮತ್ತೆ ವರುಣಕ್ಕೆ ಬಂದಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣ ಗೆಲ್ಲುತ್ತಾರೆ. ಸಿದ್ದರಾಮಯ್ಯರಿಗೆ ಸೊಸೆ, ಮೊಮ್ಮಕ್ಕಳನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಎಲ್ಲರನ್ನೂ ಗೆಲ್ಲಿಸುವ ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಲು ಸೊಸೆ, ಮೊಮ್ಮಕ್ಕಳನ್ನು ಕರೆದುಕೊಂಡು ಬರಬೇಕಾದುದು ಎಂಥ ವಿಪರ್ಯಾಸ ಎಂದು ಟೀಕಿಸಿದರು.