ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರದ್ದು ಅವಕಾಶವಾದಿ ರಾಜಕಾರಣವಾಗಿದೆ. ಅವರಿಗೆ ಅಧಿಕಾರದ ದಾಹವಿದೆ. ಅವರು ಜೆಡಿಎಸ್ ಅನ್ನು ಏಕೆ ಬಿಟ್ಟು ಬಂದರು? ಅಲ್ಲಿ ವೈಫಲ್ಯ ಹೊಂದಿ ಕಾಂಗ್ರೆಸ್ ಸೇರಿದ್ದಾರೆ. ಸಿಎಂ, ವಿಪಕ್ಷ ನಾಯಕ ಸ್ಥಾನ ಇಲ್ಲ ಎಂದಾದರೆ ಕಾಂಗ್ರೆಸ್ಸಿಗೆ ಒದ್ದು ಬರುತ್ತಾರೆ. ಅವರದ್ದು ವಿಚಾರ, ಸಿದ್ಧಾಂತ ಅಲ್ಲ, ಅಧಿಕಾರಕ್ಕೋಸ್ಕರ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ರಾಜಕೀಯ ನಿವೃತ್ತಿ ಪಡೆದು ಪಕ್ಷ ಸಂಘಟನೆಯನ್ನು ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Ehwarappa) ಸವಾಲು ಹಾಕಿದ್ದಾರೆ.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಅಧಿಕಾರವೇ ಮುಖ್ಯ ಎಂದಾಗಿದ್ದರೆ, ಅವರಂತೆಯೇ ಮಾಡುತ್ತಿದ್ದೆ. ನಾನಾಗಿಯೇ ನಿವೃತ್ತಿಯಾಗಿದ್ದೇನೆ. ಈಗ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಸಿದ್ದರಾಮಯ್ಯಗೆ ಬಿಜೆಪಿ ಶಿಸ್ತಿನ ಬಗ್ಗೆ ಕಲ್ಪನೆಯೇ ಇಲ್ಲ. ನಮ್ಮ ನಾಯಕರು ಚುನಾವಣೆಗೆ ನಿಲ್ಲಬೇಡ, ನಿವೃತ್ತಿಯಾಗು ಅಂದಿದ್ದಕ್ಕೆ ನಿವೃತ್ತಿಯಾದೆ. ಪಕ್ಷದ ಮಾತು ಕೇಳಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಮೋದಿ, ಅಮಿತ್ ಶಾ ಬಂದ ಮೇಲೆ ರಾಜ್ಯ ಸಂಪೂರ್ಣ ಬಿಜೆಪಿಮಯ: ಸಿಎಂ ಬೊಮ್ಮಾಯಿ
ರಾಷ್ಟ್ರದ್ರೋಹಿ ಮುಸ್ಲಿಮರ ಮತ ಬೇಡ
ರಾಷ್ಟ್ರದ್ರೋಹಿ ಮುಸ್ಲಿಮರ ಮತ ನಮಗೆ ಬೇಡ ಎಂದು ನಿನ್ನೆ, ಇಂದು, ನಾಳೆಯೂ ಹೇಳುತ್ತೇನೆ. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿ ಜತೆಯೇ ಇದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯನ್ನು ಜಾತಿವಾದಿ ಎಂದು ಹೇಳುತ್ತಾರೆ. ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಸಿಎಂ ಆಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರೆ, ಸಿದ್ದರಾಮಯ್ಯ ಅವರೂ ಅದೇ ರೀತಿ ಹೇಳುತ್ತಾರೆ. ಅವರಿಬ್ಬರೂ ನೇರವಾಗಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಸಿ.ಟಿ.ರವಿ ಅವರನ್ನು ಪಡೆದಿರುವುದು ನಮ್ಮ ಪುಣ್ಯ
ಸಿ.ಟಿ.ರವಿ ಅವರನ್ನು ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರ ರಚನೆಗೆ ಅವರು ಓಡಾಡುತ್ತಿದ್ದಾರೆ. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ನಮ್ಮ ಹೆಮ್ಮೆ. ಅವರು ಹಿಂದು ಹುಲಿ ಎಂದೇ ಖ್ಯಾತಿಯಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Election : ಹಾಸನದ ಜನರಿಗೆ ಬುದ್ಧಿ ಇಲ್ಲ ಅಂದ್ರಾ ಪ್ರೀತಂ ಗೌಡ; ಜೆಡಿಎಸ್ ವೈರಲ್ ಮಾಡಿದ ವಿಡಿಯೊದಲ್ಲೇನಿದೆ?
ಮುಸ್ಲಿಂ ಮೀಸಲಾತಿ ತಡೆಯಷ್ಟೇ, ರದ್ದಾಗಿಲ್ಲ- ಈಶ್ವರಪ್ಪ
ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದು ಮಾಡಿ ರಾಜ್ಯ ಸರ್ಕಾರ ನೀಡಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ಅವರು, ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆಯಷ್ಟೇ. ರದ್ದು ಮಾಡಿಲ್ಲ. ಸರ್ಕಾರ ಈ ಬಗ್ಗೆ ವಾದ ಮಾಡಿ ತಡೆಯನ್ನು ತೆರವು ಮಾಡಿಸುತ್ತದೆ. ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದ್ದೇವೆ. ಸಾಮಾನ್ಯ ವ್ಯವಸ್ಥೆಯಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ಕೊಟ್ಟಿದ್ದೇವೆ. ಎಲ್ಲ ಅಂಶಗಳನ್ನು ಸುಪ್ರೀಂ ಕೋರ್ಟಿಗೆ ತಿಳಿಸಿ ತಡೆಯನ್ನು ತೆರವುಗೊಳಿಸಲಾಗುವುದು. ಈ ವಿಷಯ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ, ಬೀರುವುದಿಲ್ಲ ಎಂಬುದಲ್ಲ. ನ್ಯಾಯಬದ್ಧವಾಗಿ ಯಾವ್ಯಾವ ಜನಾಂಗಕ್ಕೆ ಎಷ್ಟೆಷ್ಟು ಜನಸಂಖ್ಯೆ ಇದೆಯೋ ಅದಕ್ಕೆ ತಕ್ಕಂತೆ ಮೀಸಲಾತಿಯನ್ನು ನೀಡಬೇಕು ಎಂಬುವುದು ನಮ್ಮ ನಿಲುವು ಎಂದು ಈಶ್ವರಪ್ಪ ಹೇಳಿದರು.