ಮೈಸೂರು: ʻʻಈ ಬಾರಿಯೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಸಾಧ್ಯತೆ ಇದೆ. ಏನೇ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ 11 ಜನ ಅರ್ಜಿ ಹಾಕಿದ್ದಾರೆ. ಗೆಲುವು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುತ್ತದೆ. ಶಿಳ್ಳೆ, ಹಾರ ಹಾಕೋದು ಗೌರವ ಅಲ್ಲ, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದೇ ನನಗೆ ನೀವು ಕೊಡುವ ಗೌರವ. ಇದು ಸೇಡಿನ ರಾಜಕಾರಣ ಅಲ್ಲʼʼ ಎಂದು ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 1999ರಲ್ಲಿ ಜೆಡಿಎಸ್ ಪಕ್ಷ ಸ್ಥಾಪನೆಯಾಯಿತು. ಅದಕ್ಕೆ ನಾನೇ ಸಂಸ್ಥಾಪಕ ಅಧ್ಯಕ್ಷ. ಅವರು ಯಾವತ್ತೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಆಗಲ್ಲ. 1999ರಿಂದ 2018ರವರೆಗೆ ಎಷ್ಟು ಸೀಟು ಗೆದ್ದಿದ್ದಾರೆ? ಈ ಬಾರಿ 20 ಅಥವಾ 22 ಗೆದ್ದರೆ ಅದೇ ಹೆಚ್ಚು ಎಂದರು.
ಗೆದ್ದವರ ಬಾಲ ಹಿಡಿಯುವ ಜೆಡಿಎಸ್
ಬಿಜೆಪಿ ಗೆದ್ದರೆ ಬಿಜೆಪಿ ಬಾಲ, ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಬಾಲವನ್ನು ಜೆಡಿಎಸ್‌ನವರು ಹಿಡಿಯುತ್ತಾರೆ. ಸಿಎಂ ಮಾಡಿದರೆ ನಿಮ್ಮ ಜತೆ ಬರುತ್ತೇವೆ ಎನ್ನುತ್ತಾರೆ. ಅವರಿಗೆ ಯಾವುದೇ ಸಿದ್ದಾಂತ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ 120 ಸ್ಥಾನ ಗೆಲ್ಲುತ್ತಾರೆ ಎನ್ನುತ್ತಾರೆ. ಆದರೆ ಅವರು 120 ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ʻʻನಾನು 8 ಚುನಾವಣೆಯಲ್ಲಿ ಗೆದ್ದಿದ್ದೇನೆ. ರಾಜಕೀಯವಾಗಿ ನನಗೆ ಶಕ್ತಿ ಕೊಟ್ಟಿದ್ದು ಚಾಮುಂಡೇಶ್ವರಿ ಕ್ಷೇತ್ರ. ನಾನು ಸಿಎಂ, ವಿರೋಧ ಪಕ್ಷದ ನಾಯಕನಾಗಲು ಕಾರಣ ಚಾಮುಂಡೇಶ್ವರಿ ಜನರು. ನಾನು ಕಳೆದ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ. ಅದರ ಅವಶ್ಯಕತೆ ಸಹ ಇಲ್ಲ. ಹಲವು ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಕಾಂಗ್ರೆಸ್ಸೇ ಸೋಲಿಸಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆʼʼ ಎಂದು ತಿಳಿಸಿದರು.
ʻʻರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ನಾನು 13 ಚುನಾವಣೆ ಮಾಡಿದ್ದೇನೆ. ಸೋಲು ಗೆಲುವು ಎರಡೂ ನೋಡಿದ್ದೇನೆ. 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ಇದಕ್ಕೆ ಕಾರಣ ದೇವೇಗೌಡರು ನನ್ನನ್ನು ಪಕ್ಷದಿಂದ ಹೊರಗೆ ಹಾಕಿದ್ದು. ಧರ್ಮಸಿಂಗ್ ಅವರಿಗೆ ಹೇಳಿ ಡಿಸಿಎಂ ಸ್ಥಾನದಿಂದ ತೆಗೆಸಿದರು. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಬೇಡಿ ಎಂದಿರಲಿಲ್ಲ. ನಮ್ಮ ಊರಿನೊಂದಿಗೆ ಬಾಂಧವ್ಯ ಇದ್ದಿದ್ದರಿಂದ ವರುಣಾ ಕ್ಷೇತ್ರದಲ್ಲಿ ನಿಂತೆ. 10 ವರ್ಷದ ಗ್ಯಾಪ್‌ನಿಂದಾಗಿ ಬಿಜೆಪಿ-ಜೆಡಿಎಸ್ ಒಂದಾದರು. ಬಿಜೆಪಿ ವೀಕ್ ಅಭ್ಯರ್ಥಿ ಹಾಕಿದರು. ಬಿಜೆಪಿ ಮತವೆಲ್ಲ ಜೆಡಿಎಸ್‌ಗೆ ಹಾಕಿದರು. ಆದರೆ ಈ ಬಾರಿ ಆ ರೀತಿ ಆಗಲ್ಲʼʼ ಎಂದರು.
ʻʻಕುಮಾರಸ್ವಾಮಿ ಸಿಎಂ ಆಗಿ ನಮ್ಮನ್ನು ಕಸಕ್ಕಿಂತ ಕಡಿಮೆಯಾಗಿ ನೋಡಿದರು. ನಮ್ಮನ್ನು ಯಾವುದಕ್ಕೂ ಕೇಳಲಿಲ್ಲ.
ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ. ಸುಮ್ಮನೆ ಸಿದ್ದರಾಮಯ್ಯ ಕಳುಹಿಸಿಬಿಟ್ಟ ಎನ್ನುತ್ತಾರೆʼʼ ಎಂದ ಅವರು, ʻʻಯಡಿಯೂರಪ್ಪ ಆಪರೇಷನ್ ಕಮಲ ಮಾಡುವಾಗ ಕುಮಾರಸ್ವಾಮಿ ಅಮೆರಿಕಕ್ಕೆ ಹೋದರು. ಅಮೆರಿಕಗೆ ಹೋಗದೆ ಇಲ್ಲೇ ಇದ್ದಿದ್ದರೆ ಇನ್ನೂ ಒಂದು ಸಿಎಂ ಆಗಿ ಇರಬಹುದಿತ್ತು. ಕೊಟ್ಟ ಕುದುರೆ ಏರಲಾರದವನು ಶೂರನೂ ಅಲ್ಲ, ವೀರನೂ ಅಲ್ಲ ಧೀರನೂ ಅಲ್ಲʼʼ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.
ʻʻಈ ಬಾರಿ ಜನ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತಾರೆʼʼ ಎಂದ ಅವರು, ʻʻಸಿದ್ದರಾಮಯ್ಯ ಒಕ್ಕಲಿಗ, ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಎಲ್ಲಾ ಜಾತಿಯ ಪರವಾಗಿ ಇರುವವನುʼʼ ಎಂದರು.
ಕೆಲ ಮುಖಂಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ನನ್ನ ಬಳಿ ಹೇಳಿದ್ದರು. ಕಾಂಗ್ರೆಸ್ ಸಮುದ್ರ ಇದ್ದಂತೆ, ಸಿದ್ದಾಂತ, ಕಾರ್ಯಕ್ರಮಗಳನ್ನು ಒಪ್ಪಿ ಬನ್ನಿ ಎಂದು ತಿಳಿಸಿದ್ದೆ. ನಮ್ಮ ಪಕ್ಷಕ್ಕೆ ಸೇರಲು ಯಾವುದೇ ಅಡೆ ತಡೆಗಳಿಲ್ಲ, ಷರತ್ತುಗಳಿಲ್ಲದೆ ಸೇರಿಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಧರ್ಮಾಧಾರಿತ ರಾಜಕಾರಣ ಮಾಡುವುದಿಲ್ಲ. ಮೇಲ್ಜಾತಿ, ಕೆಳಜಾತಿ ಬಡವರು, ಶ್ರೀಮಂತರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಸೇರಿದ ಜೆಡಿಎಸ್ ಮುಖಂಡರು
ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದ ಅಖಾಡ ಸಜ್ಜುಗೊಳಿಸುತ್ತಿದ್ದಾರೆ. ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ʼಸ್ವಾಭಿಮಾನಿ ಪಡೆʼ ಎಂದು ಗುರುತಿಸಿಕೊಂಡಿದ್ದ ಜೆಡಿಎಸ್‌ನ ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಯರಗನಹಳ್ಳಿ ಮಹದೇವ, ಕೆಂಪನಾಯಕ, ರುಕ್ಮಿಣಿ ಮಹದೇವ, ಚನ್ನವೀರಪ್ಪ ಮತ್ತವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬರಮಾಡಿಕೊಂಡರು.
ಜ.26ಕ್ಕೆ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಾವೇಶ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ | Karnataka Election | ಅಭ್ಯರ್ಥಿ ಆಯ್ಕೆಗೆ ಸರ್ವೆ; ಹೆಚ್ಚು ಒಲವಿರುವವರಿಗೆ ಟಿಕೆಟ್ ಎಂದ ಮಾಜಿ ಸಿಎಂ ಯಡಿಯೂರಪ್ಪ