Site icon Vistara News

Karnataka Election 2023: ಕರ್ನಾಟಕದ ಬ್ಯಾಂಕ್‌ಗಳ ನುಂಗಿದ ಕೇಂದ್ರವೀಗ ನಂದಿನಿ ನುಂಗಲು ಹೊರಟಿದೆ: ಸಿದ್ದರಾಮಯ್ಯ

Siddaramaiah slams center and state BJP governments Siddaramaiah Karnataka Election 2023 updates

ಕೋಲಾರ: ವಿಧಾನಸಭಾ ಚುನಾವಣೆ (Karnataka Election 2023) ಬಂದಿದ್ದು, ಕರ್ನಾಟಕದ ಜನರು ಈಗ ತೀರ್ಮಾನ ಮಾಡುವ ಸಮಯ ಬಂದಿದೆ. ಕೇಂದ್ರ ಸರ್ಕಾರದ ಹುನ್ನಾರವನ್ನು ಬಯಲಿಗೆ ಎಳೆಯಬೇಕು. ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಕಿತ್ತೆಸೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು. ಕೇಂದ್ರ ಸರ್ಕಾರದವರು ಕರ್ನಾಟಕದ ಬ್ಯಾಂಕ್‌ಗಳನ್ನು ನುಂಗಿದ್ದು ಆಯ್ತು. ಈಗ ಕೆಎಂಎಫ್‌ನ ನಂದಿನಿ‌ಯನ್ನು ನುಂಗಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಕೋಲಾರದಲ್ಲಿ ಭಾನುವಾರ (ಏ. 16) ಏರ್ಪಡಿಸಲಾಗಿದ್ದ ಜೈ ಭಾರತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಾಲಿನ ಒಕ್ಕೂಟಗಳನ್ನು ಸಂಘಟನೆ ಮಾಡಿ ಇಂದು ಒಂದು ದಿನಕ್ಕೆ 99 ಲಕ್ಷ ಲೀಟರ್‌ ಹಾಲನ್ನು ಉತ್ಪಾದನೆ ಮಾಡಲಾಗುತ್ತಿದೆ. ಇವು ಬೆಂಗಳೂರು ಮತ್ತು ಬೇರೆ ಬೇರೆ ಪಟ್ಟಣದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕೆಎಂಎಫ್‌ ಮೂಲಕ ಮಾಡಲಾಗುತ್ತಿದೆ. ಲಕ್ಷಾಂತರ ರೈತರು ಹಾಲು ಉತ್ಪಾದನೆ ಮಾಡಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸಹಕಾರ ಸಚಿವರಾಗಿರುವ ಅಮಿತ್‌ ಶಾ ಅವರು ಕೆಎಂಎಫ್‌ ಅನ್ನು ಅಮುಲ್‌ ಜತೆ ವಿಲೀನ ಮಾಡಲು ಪ್ಲ್ಯಾನ್‌ ಮಾಡಿದರು. ಅಲ್ಲದೆ, ಈಗ ಅಮುಲ್‌ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಗೆ ತಂದು ನಂದಿನಿ ಉತ್ಪನ್ನಗಳಿಗೆ ಪೈಪೋಟಿ ನೀಡುವ ಹುನ್ನಾರ ಮಾಡಲಾಗಿದೆ. ಇದಕ್ಕಾಗಿ ನಂದಿನಿ ಉತ್ಪನ್ನಗಳ ಕೃತಕ ಕೊರತೆಯನ್ನೂ ನಿರ್ಮಾಣ ಮಾಡಿದ್ದಾರೆ. ಈ ಕಾರಣದಿಂದ ಹಾಲು ಉತ್ಪಾದನೆ 99 ಲಕ್ಷ ಲೀಟರ್‌ನಿಂದ 81 ಲಕ್ಷ ಲೀಟರ್‌ಗೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾವು 4 ಗ್ಯಾರಂಟಿಯನ್ನು ಕೊಟ್ಟಿದ್ದೇವೆ. 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ, 10 ಕೆಜಿ ಉಚಿತ ಅಕ್ಕಿ‌‌, ಉದ್ಯೋಗ ಇಲ್ಲದ ಯುವ ಜನತೆಗೆ 2000 ಹಾಗೂ 1,500 ರೂಪಾಯಿ ಮಾಸಿಕ ನಿರುದ್ಯೋಗಿ ಭತ್ಯೆ ನೀಡುವ ಘೋಷಣೆಯನ್ನು ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಂದು ವರ್ಷ ಎರಡು ತಿಂಗಳು ಇತ್ತು. ಹಾಗಾಗಿ ಸುಮಾರು ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಆಡಳಿತವನ್ನು ನಡೆಸುತ್ತಿದೆ. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನೆಲ, ಜಲ, ಭಾಷೆಯನ್ನು ರಕ್ಷಣೆ ಮಾಡುವ ಪಕ್ಷಕ್ಕೆ ನೀವು ಮತ ನೀಡಬೇಕು. ಈ ಬಗ್ಗೆ ವಿಚಾರ ಮಾಡಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ಗೆ ಮಾನ, ಮರ್ಯಾದೆ ಇಲ್ಲವೆಂದ ಸಿದ್ದರಾಮಯ್ಯ

ರಾಜ್ಯಕ್ಕೆ ಕೆಟ್ಟ ಹೆಸರು

ಕೇಂದ್ರದಲ್ಲಿ ಬಿಜೆಪಿಯು 9 ವರ್ಷಗಳಿಂದ ಸರ್ಕಾರವನ್ನು ನಡೆಸುತ್ತಾ ಬಂದಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ಐದು ವರ್ಷದಲ್ಲಿ 3 ಜನ ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. 1 ವರ್ಷ 2 ತಿಂಗಳು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. 2 ವರ್ಷ ಬಿ.ಎಸ್.‌ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಬಳಿಕ ಸುಮಾರು 2 ವರ್ಷಗಳ ಕಾಲ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರು ತಮ್ಮದು ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗುತ್ತದೆ ಎಂದು ಹೇಳಿದ್ದರು. ಆದರೆ, ರಾಜ್ಯ ಹಿಂದೆಂದೂ ಇಷ್ಟೊಂದು ಕೆಟ್ಟ ಹೆಸರನ್ನು ತೆಗೆದುಕೊಂಡಿರಲಿಲ್ಲ. ಈ ಡಬಲ್‌ ಎಂಜಿನ್‌ ಸರ್ಕಾರ ಬಂದ ಮೇಲೆ ಹೀಗಾಗಿದೆ. ರಾಜ್ಯದ ಮಾನ, ಮರ್ಯಾದೆ ಹಾಗೂ ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಾಯಿ ತಪ್ಪಿ ಹೇಳಿದ್ದಾರೆ.

ಇದನ್ನೂ ಓದಿ: Karnataka ELection: ಮೊದಲ ಕ್ಯಾಬಿನೆಟ್‌ನಲ್ಲೇ 4 ಗ್ಯಾರಂಟಿ ಜಾರಿ ಗ್ಯಾರಂಟಿ: ಕೋಲಾರದಲ್ಲಿ ರಾಹುಲ್‌ ಗಾಂಧಿ ಭಾಷಣ

ಸಿದ್ದರಾಮಯ್ಯ ಅವರು ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ರಾಜ್ಯದ ಮಾನ, ಮರ್ಯಾದೆ ಹಾಗೂ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಹೇಳುವ ಬದಲು, ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ವೇದಿಕೆಯಲ್ಲಿದ್ದ ಯಾವುದೇ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾವು ಆಡಿದ ಮಾತಿನ ಬಗ್ಗೆಯೂ ಗೊತ್ತಾಗಲಿಲ್ಲ. ಹಾಗೇ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.

Exit mobile version