Site icon Vistara News

ಗ್ಯಾರಂಟಿ ಬಗ್ಗೆ ಸುಳ್ಳು ಹೇಳೋದ್ಯಾಕೆ? ಸಿ.ಟಿ.ರವಿ ನಿನಗೆ ಮಾನ ಮರ್ಯಾದೆ ಇದ್ಯಾ: ಸಿದ್ದರಾಮಯ್ಯ ವಾಗ್ದಾಳಿ

Siddaramaiah slams CT Ravi about guarantee schemes

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಯೋಜನೆ ಜಾರಿಗೆ ತಂದರೆ ಕರ್ನಾಟಕ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ, ಗ್ಯಾರಂಟಿ ಯೋಜನೆಗಳಿಗಾಗಿ ಚಿಕ್ಕಮಗಳೂರು ಜಿಲ್ಲೆಗೆ 488.86 ಕೋಟಿ ಕೊಟ್ಟಿದ್ದೇವೆ. ಬಿಜೆಪಿಯವರೇ ಯಾಕ್ರೀ ಜನರಿಗೆ ಸುಳ್ಳು ಹೇಳ್ತೀರಾ? ಸಿ.ಟಿ.ರವಿ, ನಿನಗೆ ನಾಚಿಕೆ ಆಗಲ್ವಾ, ಮಾನ-ಮರ್ಯಾದೆ ಇದೆಯಾ? ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ನಗರದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಶಕ್ತಿಯೋಜನೆಯಲ್ಲಿ ಜಿಲ್ಲೆಯ 1.52 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ, ಇದಕ್ಕಾಗಿ ಕೆ.ಎಸ್.ಆರ್.ಟಿ.ಸಿಗೆ 55.71 ಕೋಟಿ ರೂ. ಜಮೆ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಜಿಲ್ಲೆಯ 2.95 ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ಪ್ರತಿ ತಿಂಗಳಿಗೆ ಅಂದಾಜು 10 ಕೋಟಿ ರೂ. ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಈ ಯೋಜನೆಗೆ ಈವರೆಗೂ 56.60 ಕೋಟಿ ರೂ. ಮೌಲ್ಯದ ವಿದ್ಯುತ್ ಒದಗಿಸಲಾಗಿದೆ. 2.41 ಲಕ್ಷ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ನೋಂದಣಿಯಾಗಿವೆ. ಮಾಸಿಕವಾಗಿ 12.98 ಕೋಟಿಗಳಂತೆ ಒಟ್ಟು 87.43 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮೆಯಾಗಿದೆ ಎಂದರು.

ಇದನ್ನೂ ಓದಿ | Blast in Bengaluru : ಬ್ರಾಂಡ್‌ ಬೆಂಗಳೂರು VS ಬಾಂಬ್‌ ಬೆಂಗಳೂರು; ಬಿಜೆಪಿ ಲೇವಡಿಗೆ ಡಿಕೆಶಿ ಗರಂ

ಗೃಹಲಕ್ಷ್ಮಿ ಯೋಜನೆಯಲ್ಲಿ 2.44 ಲಕ್ಷ ಫಲಾನುಭವಿಗಳಿಗೆ ಒಟ್ಟು 49 ಕೋಟಿಗಳು ಸಂದಾಯಗಿದೆ. ಯೋಜನೆ ಪ್ರಾರಂಭವಾದ 2023ರ ಆಗಸ್ಟ್‌ನಿಂದ ಈವರೆಗೆ 289.19 ಕೋಟಿ ಫಲಾನುಭವಿಗಳಿಗೆ ಡಿ ಬಿ ಟಿ ಮೂಲಕ ಸಂದಾಯವಾಗಿದೆ. “ಯುವನಿಧಿ” ಯೋಜನೆ ಅಡಿಯಲ್ಲಿ ಇದುವರೆಗೆ 2657 ಫಲಾನುಭವಿಗಳು ನೋಂದಣಿಯಾಗಿದ್ದಾರೆ. 441 ಯುವ ಜನರಿಗೆ ತಲಾ 3 ಸಾವಿರ ರೂ.ಗಳಂತೆ ಒಟ್ಟು 13.23 ಲಕ್ಷ ಯುವನಿಧಿ ಭತ್ಯೆ ಮಂಜೂರಾಗಿರುತ್ತದೆ. ಈ 5 ಯೋಜನೆಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ರೂ 486.86 ಕೋಟಿ ವೆಚ್ಚವಾಗಿದೆ ಎಂದು ಅಂಕಿ ಅಂಶಗಳ ಸಮೇತ ಸಿಎಂ ವಿವರಿಸಿದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎನ್ನುವ ಬಿಜೆಪಿ-ಜೆಡಿಎಸ್‌ನವರಿಗೆ ಧಮ್ಮು, ತಾಖತ್ತು ಇದ್ರೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ. ಈ ದೇಶದಲ್ಲಿ ಬಡತನ ಇರುವವರೆಗೂ ಗ್ಯಾರಂಟಿ ಯೋಜನೆಗಳು ಇರುತ್ತವೆ. ಅವರು ಅಧಿಕಾರಕ್ಕೆ ಬಂದ್ರೆ ನಿಲ್ಲಿಸೋದಕ್ಕೆ ಆಗುತ್ತಾ? ಅವರು ಅಧಿಕಾರಕ್ಕೆ ಬರೋದೇ ಇಲ್ಲ, ಮತ್ತೆ ನಿಲ್ಲಿಸುವುದಾದರೂ ಎಲ್ಲಿ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | Congress Guarantee: ಬಿಜೆಪಿಯಿಂದ ಸುಳ್ಳುಗಳ ಆಧಾರದಲ್ಲೇ ದೇಶ ಆಳುವ ಸರ್ಕಸ್: ಸಿಎಂ ಸಿದ್ದರಾಮಯ್ಯ

ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಮಾಡಿದ್ದು ಯಾರು? ಬಿಎಸ್‌ವೈ ಮಾಡಿದ್ರಾ? ನಿಜಲಿಂಗಪ್ಪ ಅಥವಾ ಬೊಮ್ಮಾಯಿ ಮಾಡಿದ್ರಾ? ಇಲ್ಲಾ… ಸಿದ್ದರಾಮಯ್ಯ ಸರ್ಕಾರ ಮಾಡಿತು ಎಂದ ಅವರು, ಆ ಸಿ.ಟಿ.ರವಿಗೆ ಹೇಳಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ಇವರು ರಾಜಕೀಯ ಡೋಂಗಿತನ ಮಾಡುತ್ತಾರೆ. 100 ರೂ ತೆರಿಗೆ ಸಂಗ್ರಹಣೆ ಮಾಡಿದ್ರೆ ನಮಗೆ ವಾಪಸ್ ಕೊಡೋದು 12-13 ರೂಪಾಯಿ, ಈ ಬಾರಿ 4 ಲಕ್ಷ ಕೋಟಿ ಸಂಗ್ರಹಣೆ ಆಯಿತು, ಆದರೆ ನಮಗೆ ಬರೋದು ಕೇವಲ 50 ಸಾವಿರ ಕೋಟಿಯಷ್ಟು ಹಣವಷ್ಟೇ. ಸಿ.ಟಿ.ರವಿ, ನಿನಗೆ ನಾಚಿಕೆ ಆಗಲ್ವಾ, ಮಾನ-ಮರ್ಯಾದೆ ಇದೆಯಾ ನಿಂಗೆ. ಬಿಜೆಪಿಯವರು 7 ಕೋಟಿ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಅವರನ್ನು ಮನೆಗೆ ಕಳುಹಿಸಿ ಎಂದು ಜನರಿಗೆ ಕರೆ ನೀಡಿದರು.

Exit mobile version