Site icon Vistara News

ರಾಜ್ಯದ ಮಕ್ಕಳಿಗಿಲ್ಲ ಶೂ ಭಾಗ್ಯ, ಇದೆಂಥಾ ದೌರ್ಭಾಗ್ಯ ಎಂದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತ್ತೊಂದು ಯೋಜನೆಗೆ ಎಳ್ಳು-ನೀರು ಬಿಡಲು ರಾಜ್ಯ ಸರ್ಕಾರ ಮುಂದಾಯಿತೇ ಎಂಬ ಅನುಮಾನ ಪ್ರಾರಂಭವಾಗಿದ್ದು, ಇದು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಮಾತಿನ ಸಮರಕ್ಕೆ ಕಾರಣವಾಗಿದೆ.

೨೦೧೬ರಿಂದ ಆರಂಭವಾಗಿದ್ದ ಶೂ ಭಾಗ್ಯ ಯೋಜನೆಯನ್ನು ಅಂತಿಮವಾಗಿ ಕೈ ಬಿಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ ಎಂದೇ ಹೇಳಲಾಗುತ್ತಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಒಟ್ಟು 50 ಲಕ್ಷ ಮಕ್ಕಳು ಶೂ, ಸಾಕ್ಸ್‌ನಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಸ್ಪಷ್ಟೀಕರಣವನ್ನು ನೀಡುವ ಪ್ರಯತ್ನ ಮಾಡಿರುವ ರಾಜ್ಯ ಸರ್ಕಾರವು, ಗುಣಮಟ್ಟದ ಶಿಕ್ಷಣ ನೀಡುವುದು ಮೊದಲ ಪ್ರಾಶಸ್ತ್ಯ ಎಂದು ಹೇಳಿಕೊಂಡಿದೆ.

ಶಿಕ್ಷಣ ಸಚಿವರು ಹೇಳೋದೇನು?

ಈ ಬಗ್ಗೆ ವಿಸ್ತಾರ ನ್ಯೂಸ್ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ಸಂಪರ್ಕಿಸಿದಾಗ, “ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಈ ಬಾರಿ ಅತಿಥಿ ಶಿಕ್ಷಕರ ನೇಮಕಕ್ಕೆ ಒತ್ತು ಕೊಡಲಾಗಿದೆ. ಇದರಿಂದ ಒಂದು ಶಾಲೆಗೆ ಎರಡರಿಂದ‌ ಮೂರು ಹೆಚ್ಚುವರಿ ಶಿಕ್ಷಕರು ಲಭ್ಯವಾಗಲಿದ್ದಾರೆ. ಕಲಿಲಾ ಚೇತರಿಕೆ ಕಂಡ ಬಳಿಕ ಬೇರೆ ಯೋಜನೆಗಳ ಬಗ್ಗೆ ಗಮನ ಕೊಡಲಾಗುವುದು‌” ಎಂದು ಹೇಳಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾಂಗ್ರೆಸಿಗರ ಕಾರ್ಯಕ್ರಮ, ಆದರೆ ಕಾಂಗ್ರೆಸ್‌ ಕಾರ್ಯಕ್ರಮ ಅಲ್ಲ

ಶೂ, ಸಾಕ್ಸ್‌ ವಿತರಣೆ ಬಗ್ಗೆ ತೀರ್ಮಾನಿಸಿಲ್ಲ

ರಾಜ್ಯದ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಬಗ್ಗೆ ಇನ್ನೂ ನಾವು ತೀರ್ಮಾನವನ್ನು ತೆಗೆದುಕೊಂಡಿಲ್ಲ. ನಾವು ಎಲ್ಲೂ ಸಹ ಈ ಯೋಜನೆಯನ್ನು ಸ್ಥಗಿತ ಮಾಡುತ್ತೇವೆ ಎಂದು ಹೇಳಿಕೊಂಡಿಲ್ಲ. ಸದ್ಯಕ್ಕೆ ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ ಎಂದಷ್ಟೇ ಶಿಕ್ಷಣ ಸಚಿವರು ಉತ್ತರಿಸಿದ್ದಾರೆ. ಆದರೆ, ಈಗಾಗಲೇ ಸರ್ಕಾರಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಇನ್ನು ಯಾವಾಗ ತೀರ್ಮಾನ ತೆಗೆದುಕೊಂಡು ಕೊಡಲಾಗುತ್ತದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಹೀಗಾಗಿ ಇನ್ನೂ ತೀರ್ಮಾನ ಮಾಡಿಲ್ಲ ಎಂಬ ಹೇಳಿಕೆಯು ಶೂ, ಸಾಕ್ಸ್‌ ವಿತರಣೆ ಯೋಜನೆಯನ್ನು ಕೈಬಿಟ್ಟಿರುವ ಪರೋಕ್ಷ ಸುಳಿವಾಗಿದೆ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಟ್ವೀಟ್‌ ಸಮರ

ಶೈಕ್ಷಣಿಕ ವಿಷಯವಾಗಿ ರಾಜ್ಯ ಸರ್ಕಾರವು ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವರನ್ನು ಸರಣಿ ಟ್ವೀಟ್‌ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದೆರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್‌ಗಳನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಹಿಂದಿನ ವರ್ಷಗಳಲ್ಲಿ ಕೊರೋನಾ ಕಾರಣ ನೀಡಿದ್ದ ಸರ್ಕಾರ ಈ ವರ್ಷ 40 ಪರ್ಸೆಂಟ್ ಕಮಿಷನ್‌ನಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ. ಒಂದೆಡೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | PSI Scam | ಗೃಹ ಸಚಿವ ಆರಗ ಪರ ಸಿಎಂ ಬಸವರಾಜ ಬೊಮ್ಮಾಯಿ ಬ್ಯಾಟಿಂಗ್‌

ಕಲಿಕಾ ಹಾಳೆ ಪೂರೈಸಲೂ ಸರ್ಕಾರದಲ್ಲಿ ದುಡ್ಡಿಲ್ಲವೆಂದು ತಿವಿತ

ಇಂದಿನ ದಿನದವರೆಗೆ ಶಾಲಾ ಮಕ್ಕಳಿಗೆ ನೀಡಬೇಕಾಗಿದ್ದ ಪಠ್ಯಪುಸ್ತಕಗಳ ಬಗ್ಗೆ ಖಚಿತ ತೀರ್ಮಾನವನ್ನು ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೆಲವು ಶಾಲೆಗಳಿಗೆ ಹಳೆಯ ಪಠ್ಯ, ಇನ್ನು ಕೆಲವು ಶಾಲೆಗಳಿಗೆ ಹೊಸ ಪಠ್ಯ, ಉಳಿದ ಶಾಲೆಗಳಿಗೆ ಪಠ್ಯವೇ ಇಲ್ಲದಂತಹ ದುಸ್ಥಿತಿ ಇದೆ. ಕೊರೋನಾ ಕಾಲದ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ “ವಿದ್ಯಾಪ್ರವೇಶ” ಮತ್ತು “ಕಲಿಕಾ ಚೇತರಿಕೆ” ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಇದಕ್ಕೆ ಸಂಬಂಧಿಸಿದ ಕಲಿಕಾ ಹಾಳೆಗಳನ್ನು ಕೂಡಾ ಪೂರೈಸಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸಿದ್ದರಾಮಯ್ಯ ತಿವಿದಿದ್ದಾರೆ.

ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿರುವ ಕಲಿಕಾ ಹಾಳೆಗಳನ್ನು ಶಿಕ್ಷಕರು ಸ್ವಂತ ಖರ್ಚಿನಿಂದ ಡೌನ್‌ಲೋಡ್ ಮಾಡಿಕೊಂಡು, ಜೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಷ್ಟೊಂದು ಗತಿಗೇಡಿನ ಸರ್ಕಾರ ಹಿಂದೆ ಇರಲಿಲ್ಲ, ಮಂದೆಯೂ ಇರಲಾರದು ಎಂದು ಟೀಕಿಸಿದ್ದಾರೆ.

ಯಡಿಯೂರಪ್ಪ ಅವರ ಮೇಲೆ ಬೊಮ್ಮಾಯಿಗೆ ಸೇಡು?

ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ನೀಡುವ ಯೋಜನೆ ಹಿಂದಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರದ್ದಾಗಿದೆ. ಆ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಯೇ? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಅವರು, ಶಾಲಾ ಬಡ ಮಕ್ಕಳಿಗಾಗಿ ನಮ್ಮ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಹೊರಟಿದೆ. ವಿದ್ಯಾಸಿರಿ ಯೋಜನೆಗೆ ಹಣ ನೀಡುತ್ತಿಲ್ಲ, ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟಕ್ಕೂ ಕಲ್ಲು ಹಾಕುತ್ತಿದೆ. ಈಗ ಸೈಕಲ್, ಶೂ, ಸಾಕ್ಸ್ ಗಳನ್ನು ಕೂಡಾ ಕಿತ್ತುಕೊಳ್ಳುತ್ತಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ದೇವೇಗೌಡರಿಗೆ ಪಠ್ಯ ಪರಿಷ್ಕರಣೆ ಬಗ್ಗೆ ಮನವರಿಕೆ ಮಾಡಿದ್ದೇವೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

Exit mobile version