Site icon Vistara News

BK Hariprasad : ಸಿಎಂ ಇಳಿಸುವ ಮಾತು ಹರಿಪ್ರಸಾದ್‌ರದ್ದೋ, ಡಿಕೆಶಿಯದ್ದೋ? ಮಾಳವೀಯ ಪ್ರಶ್ನೆ

Amit Malviya CM Siddaramaiah and BK Hariprasad

ಬೆಂಗಳೂರು: ನನಗೆ ಸಿಎಂ ಮಾಡೋದೂ ಗೊತ್ತು, ಇಳಿಸೋದೂ ಗೊತ್ತು ಎಂಬ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರ ಮಾತು ಕಾಂಗ್ರೆಸ್‌ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದರೆ, ಇತ್ತ ಬಿಜೆಪಿಗೆ ಅದೇ ಅಸ್ತ್ರವಾಗಿ ಪರಿಣಮಿಸಿದೆ. ಈ ಹೇಳಿಕೆಯು ಈಗ ರಾಷ್ಟ್ರೀಯ ಮಟ್ಟದಲ್ಲಿ ಹೈಲೈಟ್ ಆಗಿದ್ದು, ಹರಿಪ್ರಸಾದ್ ಹೇಳಿಕೆ ಕುರಿತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎರಡು ಟ್ವೀಟ್ ಮಾಡಿದ್ದಾರೆ.

ತಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಸಿಟ್ಟಿನಲ್ಲಿರುವ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯ (CM Siddaramaiah) ಮೇಲಿನ ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು. ಇದಕ್ಕೆ ಈಗ ಕೆಲವು ಕಾಂಗ್ರೆಸ್‌ ನಾಯಕರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದನ್ನು ಅಸ್ತ್ರವಾಗಿ ಎತ್ತಿಕೊಂಡಿರುವ ಬಿಜೆಪಿ ಮಾತ್ರ ಈಗ ಕಾಂಗ್ರೆಸ್‌ ಆಂತರಿಕ ಬೆಳವಣಿಗೆ ಬಗ್ಗೆ ಕಾಲೆಳೆಯುತ್ತಿದೆ.

ಅಮಿತ್ ಮಾಳವೀಯ ಟ್ವೀಟ್

ಈಗ ಬಿ.ಕೆ. ಹರಿಪ್ರಸಾದ್ ಹೇಳಿಕೆ ಕುರಿತು ಎರಡು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಮುಖ್ಯಮಂತ್ರಿಯನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ, ಅವರನ್ನು ಹೇಗೆ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಬೇಕೆಂದು ನನಗೆ ತಿಳಿದಿದೆ…” ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಈ ಮಾತು ಅವರದ್ದೋ ಅಥವಾ ಡಿ.ಕೆ. ಶಿವಕುಮಾರ್ ಅವರದ್ದೋ? ಈ ಹೋರಾಟದ ಬಣಗಳ ನಡುವೆ ಕಾಂಗ್ರೆಸ್ ಸರ್ಕಾರ ಎಷ್ಟು ಕಾಲ ಉಳಿಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇದರಿಂದ ಕರ್ನಾಟಕಕ್ಕೆ ತೊಂದರೆಯಾಗಲಿದೆ” ಎಂದು ಒಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಅನ್ನು ಎಂದಿಗೂ ಆಯ್ಕೆ ಮಾಡಬೇಡಿ!

ಸಿಎಂ ಸಿದ್ದರಾಮಯ್ಯ ಅವರು ಇತರ ಹಿಂದುಳಿದ ಸಮುದಾಯಗಳ (ತಮ್ಮ ಸಮುದಾಯವನ್ನು ಹೊರತುಪಡಿಸಿ) ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರ ಅವರನ್ನು ರಾಜಕೀಯವಾಗಿ ಒಗ್ಗೂಡಿಸುವಂತೆ ಒತ್ತಾಯಿಸಿದ್ದಾರೆ. (ಬಹುಶಃ ಕರ್ನಾಟಕದ ಮುಖ್ಯಮಂತ್ರಿ ಬಲವನ್ನು ಕುಗ್ಗಿಸಲು).

ಇದನ್ನೂ ಓದಿ: Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!

ರಾಜಸ್ಥಾನವು ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ನಿರಂತರ ಜಗಳದಿಂದಾಗಿ ಐದು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ‘5 ಭರವಸೆಗಳನ್ನು’ ಇನ್ನೂ ಈಡೇರಿಸಿಲ್ಲ. ಆದರೆ, ಆ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ನಡೆಸುವುದನ್ನು ಮಾತ್ರ ನಾವು ಕೇಳುತ್ತಿದ್ದೇವೆ. ಛತ್ತೀಸ್‌ಗಢದಲ್ಲಿಯೂ ನಾವು ಇದನ್ನು ನೋಡಿದ್ದೇವೆ. ಭೂಪೇಶ್ ಬಾಘೆಲ್ ಮತ್ತು ಟಿ.ಎಸ್.ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನಿಮಗೆ ಆಡಳಿತ ಮತ್ತು ಅಭಿವೃದ್ಧಿ ಬೇಕಾದರೆ, ಕಾಂಗ್ರೆಸ್ ಅನ್ನು ಎಂದಿಗೂ ಆಯ್ಕೆ ಮಾಡಬೇಡಿ” ಎಂದು ಅಮಿತ್‌ ಮಾಳವೀಯ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Exit mobile version