ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ 8 ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಮಂಗಳೂರು ಕಾಂಗ್ರೆಸ್ ಕಚೇರಿ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ನಡೆಸಿದರು. ಮಂಗಳೂರು ಕಾಂಗ್ರೆಸ್ ಕಚೇರಿ ಮುಂದೆ ಮಾಜಿ ಸಚಿವ ಅಭಯ ಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕೋಲಾರ ಅಭಿಮಾನಿಗಳಿಂದ ಸಿದ್ದುಗೆ ಟಗರು ಗಿಫ್ಟ್
ಕೋಲಾರ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಟಗರು ಗಿಫ್ಟ್ ನೀಡಲು ಮುಂದಾಗಿದ್ದಾರೆ. ಕೋಲಾರದಿಂದ ಟಗರು ಗಿಫ್ಟ್ ಕೊಡಲು ಅಭಿಮಾನಿಗಳು ಶನಿವಾರ ಬೆಂಗಳೂರಿಗೆ ತೆರಳಿದರು. ಕೋಲಾರದ ಕೀಲುಕೋಟೆಯ ಜಯರಾಮ್ ಅವರಿಂದ ಸುಮಾರು 45 ಕೆಜಿ ತೂಕದ ಟಗರು ಉಡುಗೊರೆಯಾಗಿ ನೀಡಲಾಗುತ್ತಿದೆ. ಇದೇ ವೇಳೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Karnataka CM: ಮುಗಿಲು ಮುಟ್ಟಿದ ಸಿದ್ದರಾಮಯ್ಯ ಕ್ರೇಜ್; ಎಲ್ಲೆಡೆ ಡ್ಯಾನ್ಸ್ ಮಾಡುತ್ತಿರುವ ಫ್ಯಾನ್ಸ್
ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಫ್ಲೆಕ್ಸ್‌ಗೆ ಕ್ಷೀರಾಭಿಷೇಕ
ಶಿವಮೊಗ್ಗ: ನಗರದ ಪೊಲೀಸ್ ಚೌಕಿ ವೃತ್ತದಲ್ಲಿ ಸಂಗೊಳ್ಳಿ ರಾಯಣ ಕುರುಬ ವೇದಿಕೆಯಿಂದ, ಸಿದ್ದರಾಮಯ್ಯ ಫ್ಲೆಕ್ಸ್‌ಗೆ ಕ್ಷೀರಾಭಿಷೇಕ ಮಾಡಲಾಯಿತು. ನಂತರ ಸಿದ್ದರಾಮಯ್ಯ ಪರ ಜೈಕಾರ ಘೋಷಣೆ ಕೂಗಿದ ಅಭಿಮಾನಿಗಳು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಚನ್ನಪಟ್ಟಣದಲ್ಲಿ ಕುರುಬ ಸಮುದಾಯದಿಂದ ಸಿಹಿ ಹಂಚಿ ಸಂಭ್ರಮ
ರಾಮನಗರ: ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಕುರುಬ ಸಮುದಾಯದಿಂದ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಕೋಟಿಗೊಬ್ಬ ನಮ್ಮ ಸಿದ್ದರಾಮಯ್ಯ ಎಂದು ಜೈಕಾರ ಹಾಕಿದ ಅಭಿಮಾನಿಗಳು, ಈ ಬಾರಿಯೂ 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಬಡವರ ಪರವಾಗಿ ಆಡಳಿತ ನಡೆಸಲಿ ಎಂದು ಶುಭ ಹಾರೈಸಿದರು.
101 ಈಡುಗಾಯಿ ಒಡೆದು ಹರಕೆ ತೀರಿಸಿದ ಗ್ರಾಮಸ್ಥರು
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯ ಚಿಕ್ಕಮ್ಮ ತಾಯಿ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು 101 ಈಡುಗಾಯಿ ಒಡೆದು ಹರಕೆ ತೀರಿಸಿ, ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಲಿ, ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಚಿಕ್ಮಮ್ಮ ತಾಯಿ, ಸಿದ್ದರಾಮಯ್ಯರ ಮನೆ ದೇವರಾಗಿದ್ದಾರೆ. ಸಿದ್ದು ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಿಲ್ಲಬೇಕು, ಒಂದೇ ಕ್ಷೇತ್ರದಲ್ಲಿ ನಿಂತರೂ ಗೆದ್ದು ಸಿಎಂ ಆಗುತ್ತಾರೆ ಎಂದು ಗ್ರಾಮದ ಚಿಕ್ಕಮ್ಮತಾಯಿ ಭವಿಷ್ಯ ನುಡಿದಿದ್ದರು. ಹೀಗಾಗಿ ಚಿಕ್ಕಮ್ಮ ತಾಯಿ ನುಡಿದಿದ್ದ ಭವಿಷ್ಯ ನಿಜವಾಗಿದೆ ಎಂದು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ 101 ಈಡುಗಾಯಿ ಒಡೆದಿದ್ದಾರೆ.
ಧಾರವಾಡ ಸೇರಿ ವಿವಿಧೆಡೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ
ಧಾರವಾಡ: ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಧಾರವಾಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಗಿದೆ. ಡಾ.ಮಯೂರ ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಧಾರವಾಡ ಮಿನಿ ವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ವಿತರಣೆ ಮಾಡಲಾಯಿತು. ಧಾರವಾಡ-ಹುಬ್ಬಳ್ಳಿ, ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿ ಮೂರು ಜಿಲ್ಲೆಗಳ 17 ಕ್ಯಾಂಟೀನ್‌ಗಳಲ್ಲಿ ಒಟ್ಟು 9 ಸಾವಿರ ಹೋಳಿಗೆಗಳನ್ನು ವಿತರಣೆ ಮಾಡಲಾಗಿದೆ.
ಇದನ್ನೂ ಓದಿ | Karnataka CM: ಮೊದಲ ಸುದ್ದಿಗೋಷ್ಠಿಯಿಂದಲೇ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ ಸಿದ್ದರಾಮಯ್ಯ!: ಕೇಂದ್ರದ ವಿರುದ್ಧ ಭರ್ಜರಿ ವಾಗ್ದಾಳಿ
ಹೊಸಪೇಟೆಯಲ್ಲಿ ಡೊಳ್ಳು ಸಿದ್ದಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು
ವಿಜಯನಗರ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಡೊಳ್ಳು ಸದ್ದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ನಂತರ ಕಾಂಗ್ರೆಸ್ ಮುಖಂಡ ರವಿ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.
ಕಾಳಗಿ ತಾಲೂಕಿನ ಬೀರಲಿಂಗೆಶ್ವರ ದೇವಸ್ಥಾನದಲ್ಲಿ ಪೂಜೆ
ಕಲಬುರಗಿ: ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೆಶ್ವರ ದೇವಸ್ಥಾನದಲ್ಲಿ ಬೆಂಬಲಿಗರು ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಮಲ್ಲಿಕಾರ್ಜುನ ಮಾಡಬೂಳ ಅವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ
ಬೆಳಗಾವಿ: ನಗರದ ಚೆನ್ನಮ್ಮ ವೃತ್ತದಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯಗೆ ಜೈಕಾರ ಕೂಗಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಪರಸ್ಪರ ಬಣ್ಣ ಎರಚಿಕೊಂಡು ಕಾರ್ಯಕರ್ತರು ಖುಷಿಪಟ್ಟರು. ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಸಂಭ್ರಮಾಚರಣೆ ನಡೆಸಿದರು.
ಇದನ್ನೂ ಓದಿ | Karnataka CM : ಮಹಿಳೆಯರಿಗೆ ಫ್ರೀ ಬಸ್ ಪಾಸ್, ಕರೆಂಟ್ ಫ್ರೀ: 5 ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ, ಜಾರಿ ಸದ್ಯಕ್ಕಿಲ್ಲ
ರಾಣೆಬೆನ್ನೂರಿನ ದೇವರಗುಡ್ಡ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಕೆ
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ತೆಂಗಿನಕಾಯಿ ಒಡೆದರು.
ಮಡಿಕೇರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ
ಮಡಿಕೇರಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಚೌಕಿ ವೃತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರಿಂದ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪರ ಮೊಳಗಿದವು.
ಕಲಬುರಗಿಯಲ್ಲಿ ಸಿದ್ದರಾಮಯ್ಯ ಭಾವಚಿತ್ರ ಮೆರವಣಿಗೆ
ಕಲಬುರಗಿ: ಕಲಬುರಗಿ ನಗರದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಶಾಸಕ ಅಲ್ಲಮಪ್ರಭು ಪಾಟೀಲ್ ಬೆಂಬಲಿಗರಿಂದ ಶ್ರೀ ಶರಣಬಸವೇಶ್ವರ ದೇಗುಲದಲ್ಲಿ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಲಾಯಿತು. ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದರು. ಬಳಿಕ ವಾದ್ಯ, ಡೊಳ್ಳು ಕುಣಿತದೊಂದಿಗೆ ಸಿದ್ದರಾಮಯ್ಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಶ್ರೀ ಶರಣಬಸವೇಶ್ವರ ದೇಗುಲದಿಂದ ಕೋರಿ ಸಿದ್ದೇಶ್ವರ ಮಠದವರೆಗೆ ಮೆರವಣಿಗೆ ನಡೆಯಿತು.
ಇದನ್ನೂ ಓದಿ | Karnataka CM: ಒಂದೇ ಸಭೆಯಲ್ಲಿ 10,000 ಕೋಟಿ ರೂ. ಉಳಿಸಿದ ಸಿದ್ದರಾಮಯ್ಯ!: ಗ್ಯಾರಂಟಿ ಜಾರಿ ಹೀಗಿರಲಿದೆಯೇ?
ಮಸ್ಕಿ ಪಟ್ಟಣದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ
ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣ ಚಿಗರಿ ನೇತೃತ್ವದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಅದೇ ರೀತಿ ಲಿಂಗಸುಗೂರು ತಾಲೂಕಿನ ಆನೆ ಹೊಸೂರಿನಲ್ಲೂ ಕಾಂಗ್ರೆಸ್ ಮುಖಂಡರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.