ಬೆಂಗಳೂರು: ಕಳೆದ ಐದು ದಿನಗಳಿಂದ ಭಾರಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಕರ್ನಾಟಕದ ಮುಖ್ಯಮಂತ್ರಿ (Karnataka CM) ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಭಾರಿ ಮನವೊಲಿಕೆ ಬಳಿಕ ಡಿಸಿಎಂ ಪಟ್ಟವನ್ನು ಒಪ್ಪಿಕೊಂಡಿದ್ದಾರೆ. ಇದರ ಅಧಿಕೃತ ಪ್ರಕಟಣೆ ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ನಡೆಯಲಿದೆ. ಮೇ 20ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಬುಧವಾರ ದಿನವಿಡೀ ನಡೆದ ಸರಣಿ ಸಭೆಗಳ ಅಂತ್ಯದಲ್ಲಿ ರಾತ್ರಿ 2 ಗಂಟೆಯ ಹೊತ್ತಿಗೆ ಕಾಂಗ್ರೆಸ್ ಹೈಕಮಾಂಡ್ ಒಂದು ಸಂಧಾನಸೂತ್ರಕ್ಕೆ ಬರಲು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ತಮಗೇ ಸಿಎಂ ಪಟ್ಟ ಬೇಕು ಎಂದು ಹಠ ಹಿಡಿದ ಕಾರಣಕ್ಕಾಗಿ ಕಗ್ಗಂಟಾಗಿದ್ದ ಮಾತುಕತೆ ಕೊನೆಗೂ ತಿಳಿಯಾಗಿದ್ದು, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಪಟ್ಟವನ್ನು ಸ್ವೀಕರಿಸಲು ಕೊನೆಗೂ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪ್ರಮುಖ ನಾಯಕರು ನಡೆಸಿದ ಸಭೆಯಲ್ಲಿ ಅಂತಿಮವಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ, ಇದರ ಪ್ರಕಟಣೆ ಗುರುವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷ ಸಭೆಯಲ್ಲಿ ನಡೆಯಲಿದೆ. ಹೈಕಮಾಂಡ್ ಮುಚ್ಚಿದ ಲಕೋಟೆಯಲ್ಲಿ ಇಬ್ಬರ ಹೆಸರನ್ನು ಕಳುಹಿಸುವ ನಿರೀಕ್ಷೆ ಇದ್ದು, ಅದನ್ನು ಸಭೆಯಲ್ಲಿ ತೆರೆಯಲಾಗುತ್ತದೆ ಎನ್ನಲಾಗಿದೆ. ಒಬ್ಬರೇ ಡಿಸಿಎಂ ಇರುತ್ತಾರೆ ಎನ್ನಲಾಗಿದೆ.
ಅಧಿಕಾರಾವಧಿ ಎಷ್ಟು ವರ್ಷ?
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ 50:50 ಅಧಿಕಾರ ಹಂಚಿಕೆ ಸೂತ್ರಕ್ಕೆ ಮುಂದಾಗಿದೆ. ಇದರಡಿಯಲ್ಲಿ ಮೊದಲು ಸಿದ್ದರಾಮಯ್ಯ ಮತ್ತು ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ. ಆದರೆ, ಮೊದಲ ಅವಧಿ ಎರಡು ವರ್ಷ ಇರುತ್ತದೆಯೋ, ಎರಡೂವರೆ ವರ್ಷ ಇರುತ್ತದೆಯೋ ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಈ ಸಂಬಂಧ ಗುರುವಾರ ಇನ್ನೊಂದು ಹಂತದ ಸಭೆ ನಡೆಯುವ ಸಾಧ್ಯತೆ ಇದೆ.
ಸಂಜೆ 7 ಗಂಟೆಗೆ ಸಭೆ ಕರೆದ ಡಿ.ಕೆ. ಶಿವಕುಮಾರ್
ನೂತನ ಶಾಸಕಾಂಗ ಪಕ್ಷ ನಾಯಕನ ಆಯ್ಕೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸಂಜೆ 7 ಗಂಟೆಗೆ ಕಾಂಗ್ರೆಸ್ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಶಾಸಕಾಂಗ ಪಕ್ಷ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆಗಳಿವೆ.
ಮೇ 20ರಂದು ಪ್ರಮಾಣವಚನ ಕಾರ್ಯಕ್ರಮ
ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೆಲವು ಸಂಪುಟ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮೇ 20ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ, ಜಾಗ ಎಲ್ಲಿ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈಗಾಗಲೇ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಎಂದು ಈ ಹಿಂದೆ ಸಿದ್ಧತೆ ನಡೆಸಿದ್ದರಿಂದ ಅಲ್ಲೇ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರಂದು ನಡೆದು ಕಾಂಗ್ರೆಸ್ 135 ಸ್ಥಾನಗಳ ಭರ್ಜರಿ ಬಹುಮತವನ್ನು ಪಡೆದಿತ್ತು. ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನ ಹಾಗೂ ನಾಲ್ವರು ಇತರರು ಗೆದ್ದಿದ್ದರು. ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಸಿಎಂ ಯಾರಾಗಬೇಕು ಎಂಬ ವಿಷಯದಲ್ಲಿ ಐದು ದಿನಗಳ ಕಾಲ ಸುದೀರ್ಘ ಚರ್ಚೆ, ಸಮಾಲೋಚನೆ ಮತ್ತು ಒಂದಿಷ್ಟು ಶಕ್ತಿ ಪ್ರದರ್ಶನಗಳ ಬಳಿಕ ಅಂತಿಮವಾಗಿ ಸಿದ್ದರಾಮಯ್ಯ ಮತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಸೂತ್ರದ ಜಾರಿಯಾಗಲಿದೆ.
ಇದನ್ನೂ ಓದಿ : Karnataka CM: ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ದೇವರಿಗೆ ಮೊರೆ; 101 ತೆಂಗಿನಕಾಯಿ ಒಡೆದ ಹಿಂದು ಜಾಗೃತಿ ಸೇನೆ