Site icon Vistara News

Siddaramaiah Vs BJP : ಕಾಂಗ್ರೆಸ್‌ನಿಂದ ಬಿಜೆಪಿ ಕಳ್ಳಮಾರ್ಗ ಪುಸ್ತಕ; ಸಿದ್ದು ವಿರೋಧಿ ಪುಸ್ತಕಕ್ಕೆ ಕೌಂಟರ್‌

bjp kallamarga - congress ಪುಸ್ತಕ ವಾರ್‌

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ (Siddaramaiah Vs BJP) ನಡುವೆ ಬುಕ್ ವಾರ್ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವತಿಯಿಂದ “ಸಿದ್ದು ನಿಜ ಕನಸುಗಳು” ಪುಸ್ತಕ ಹೊರತರುತ್ತಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸಹ ಈಗ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದು, “ಬಿಜೆಪಿ ಕಳ್ಳಮಾರ್ಗ”- ಸಂಪುಟ 1 ಕೃತಿ ಬಿಡುಗಡೆಗೆ ಮುಂದಾಗಿದೆ.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿದ್ದ ಟಿಪ್ಪು ನಿಜ ಕನಸುಗಳು ಬುಕ್ ಮಾದರಿಯಲ್ಲಿ “ಸಿದ್ದರಾಮಯ್ಯ ನಿಜ ಕನಸುಗಳು” ಪುಸ್ತಕವನ್ನು ಬಿಜೆಪಿ ಸಿದ್ಧಪಡಿಸಿದ್ದು, ಸೋಮವಾರ ಮಧ್ಯಾಹ್ನ ೩ ಗಂಟೆಗೆ ಪುರಭವನದಲ್ಲಿ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್‌ ದೂರು ಕೊಟ್ಟರೂ ಕ್ಯಾರೆ ಎನ್ನದ ಬಿಜೆಪಿ ಪುಸ್ತಕವನ್ನು ಲೋಕಾರ್ಪಣೆಗೊಳಿಸುತ್ತಿದೆ. ಈಗ ಇದೇ ಕಾರಣದಿಂದ ಕಾಂಗ್ರೆಸ್‌ ಸಹ ಕೌಂಟರ್‌ ಕೊಡಲು ಮುಂದಾಗಿದ್ದು, ಅದೇ ಪುರಭವನದಲ್ಲಿ ಮಧ್ಯಾಹ್ನ ೨ ಗಂಟೆಗೆ ಬಿಜೆಪಿ ವಿರುದ್ಧ ಪುಸ್ತಕವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಬಿಜೆಪಿ ಕಳ್ಳಮಾರ್ಗ – ಸಂಪುಟ 1 ಕೃತಿಯನ್ನು ಸಿದ್ಧಪಡಿಸಿರುವ ಕಾಂಗ್ರೆಸ್‌ ಅದನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಿಕೊಂಡಿದೆ.

ಈಗಾಗಲೇ ಬಿಜೆಪಿ ಸಿದ್ಧಪಡಿಸಿರುವ “ಸಿದ್ದು ನಿಜ ಕನಸುಗಳು” ಪುಸ್ತಕದ ಕೆಲವು ಅಂಶಗಳು ಪೋಸ್ಟರ್‌ ರೂಪದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಹರಿದಾಡಿವೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ತಂಡವೂ ಸಹ ಕೌಂಟರ್‌ ಪೋಸ್ಟರ್‌ ಅನ್ನು ಕೊಟ್ಟಿದೆ. ಈ ಮಧ್ಯೆ ಬುಕ್‌ ವಾರ್‌ ಸಹ ನಡೆಯುತ್ತಿದೆ.

ಇದನ್ನೂ ಓದಿ | Fire Accident | ಕೊಟ್ಟಿಗೆಯಲ್ಲಿ ಅಗ್ನಿ ಅವಘಡ; ಬೆಂಕಿಯಲ್ಲಿ ಬೆಂದು ಎರಡು ಎತ್ತುಗಳ ದಾರುಣ ಸಾವು

ಬಿಜೆಪಿ ಕಳ್ಳಮಾರ್ಗ- ಸಂಪುಟ 1 ಕೃತಿಯಲ್ಲಿ ಏನೇನಿದೆ?
“ಸಿದ್ದು ನಿಜ ಕನಸುಗಳು” ಕೃತಿ ಬಿಡುಗಡೆಗೂ ಮೊದಲೇ “ಬಿಜೆಪಿ ಕಳ್ಳಮಾರ್ಗ” ಸಂಪುಟ ಬಿಡುಗಡೆಗೆ ಸಜ್ಜಾಗಿರುವ ಕಾಂಗ್ರೆಸ್‌, ತಿರುಗೇಟು ನೀಡಲು ಮುಂದಾಗಿದೆ. ಈ ಕೃತಿಯಲ್ಲಿ ಗುಜರಾತ್ ನರಮೇಧ, ಬಿಜೆಪಿ ಕಳ್ಳಮಾರ್ಗಗಳು ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಕಾರ್ಯಕ್ರಮ
ಸೋಮವಾರ (ಜ.೯) ಮಧ್ಯಾಹ್ನ ಮೂರು ಗಂಟೆಗೆ ಟೌನ್‌ಹಾಲ್‌ನಲ್ಲಿ ಸಚಿವ ಅಶ್ವಥ್ ನಾರಾಯಣ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರಿಂದ “ಸಿದ್ದು ನಿಜ ಕನಸುಗಳು ಪುಸ್ತಕ” ಬಿಡುಗಡೆಗೊಳ್ಳಲಿದೆ. ಸಿದ್ದರಾಮಯ್ಯ ಅವರ ೫ ವರ್ಷಗಳ ಆಡಳಿತ ಅವಧಿಯಲ್ಲಿ ಆಗಿರುವ ಹಿಂದು ಯುವಕರ ಹತ್ಯೆ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಸುಮಾರು 13ಕ್ಕೂ ಹೆಚ್ಚು ಯುವಕರ ಕೊಲೆ ಆಗಿತ್ತು ಎಂದು ಈ ಪುಸ್ತಕದ ಮೂಲಕ ಬಿಜೆಪಿ ಆರೋಪಿಸಿದೆ.

ಹಿಂದು ಕಾರ್ಯಕರ್ತರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸೇರಿದಂತೆ 13ಕ್ಕೂ ಹೆಚ್ಚು ಯುವಕರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, 2018ರಲ್ಲಿ ಇದೇ ಅಸ್ತ್ರವನ್ನು ಬಳಸಿಕೊಂಡಿದ್ದ ಬಿಜೆಪಿ ಕರಾವಳಿ ಕರ್ನಾಟಕವನ್ನು ಫುಲ್ ಸ್ವೀಪ್ ಮಾಡಿತ್ತು. ಅದೇ ಮಾದರಿಯಲ್ಲಿ ರಾಜ್ಯದ ಹಿಂದುಗಳ ಪಾಲಿಗೆ ಸಿದ್ದರಾಮಯ್ಯ ಆಧುನಿಕ ಟಿಪ್ಪು ಎಂದು ಬಿಜೆಪಿ ಈಗ ಬಿಂಬಿಸಲು ಹೊರಟಿದೆ.

ಸಿದ್ದು ನಿಜ ಕನಸುಗಳು ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು?
-ಸಿದ್ದರಾಮಯ್ಯ ಕಾಲದಲ್ಲಿ 13 ಜನ ಹಿಂದು ಕಾರ್ಯಕರ್ತರ ಕೊಲೆ
-ಮುಸ್ಲಿಂ ಓಲೈಕೆ ಮಾಡಲು ಶಾದಿ ಭಾಗ್ಯ ಜಾರಿ ಮಾಡಿರುವುದು
-ಹಿಂದುಳಿದ ಮತ್ತು ಮುಸ್ಲಿಂ ಸಮುದಾಯದ ಮಕ್ಕಳಿಗೆ ಪ್ರವಾಸ ಭಾಗ್ಯ ನೀಡಿರುವುದು
-ಸಿದ್ದರಾಮಯ್ಯ ಸಿಎಂ ಆಗುವ ಸಲುವಾಗಿ ಪರಮೇಶ್ವರ್ ಅವರನ್ನು ಸೋಲಿಸಿರುವುದು

ಇದನ್ನೂ ಓದಿ | Siddu Nijakanasugalu : ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಪಕ್ಕಾ; ಕಾನೂನು ಕ್ರಮದ ಬಗ್ಗೆ ನೋಡ್ತೀನಿ ಅಂದ್ರು ಸಿದ್ದರಾಮಯ್ಯ

Exit mobile version