ಮೈಸೂರು: ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆದ ನಂತರದಲ್ಲಿ, ತಮ್ಮ ಪ್ರಯಾಣಕ್ಕೆ ಜೀರೊ ಟ್ರಾಫಿಕ್ ಮಾಡುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದರು. ಆದರೂ ಶನಿವಾರ ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಯಾಣಕ್ಕೆ ಜೀರೊ ಟ್ರಾಫಿಕ್ ಮಾಡಿದ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಆದ ನಂತರ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲಿ ಕೃತಜ್ಞತಾ ಸಮಾವೇಶನವನ್ನು ಮುಗಿಸಿ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯತ್ತ ಸಾಗಿದರು. ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಪೊಲೀಸರು ಜೀರೊ ಟ್ರಾಫಿಕ್ ಮಾಡಿದ್ದರು.
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಕಾರಿನಿಂದ ಇಳಿದ ಕೂಡಲೆ ಪೊಲೀಸರನ್ನು ಹತ್ತಿರಕ್ಕೆ ಕರೆದರು. ಕೋಪಗೊಂಡವರಾಗಿಯೇ, ಜೀರೊ ಟ್ರಾಫಿಕ್ ಏಕೆ ಮಾಡಿದಿರಿ? ಎಂದು ಪ್ರಶ್ನಿಸಿದರು. ಯಾರೂ ಪೊಲೀಸರು ಮಾತನಾಡಲಿಲ್ಲ. ನನ್ನ ಸಂಚಾರಕ್ಕೆ ಜೀರೊ ಟ್ರಾಫಿಕ್ ಬೇಡ ಎಂದು ಈಗಾಗಲೆ ಹೇಳಿದ್ದೇನೆ. ಅದಾದರೂ ಗೊತ್ತೋ ಇಲ್ಲವೋ ನಿಮಗೆ? ಎಂದು ಗದರಿದರು. ಸ್ವಲ್ಪ ಹೊತ್ತು ಮೌನವಾಗಿದ್ದು, don’t do that ಎನ್ನುತ್ತಾ ಸಭೆಯತ್ತ ಸಾಗಿದರು.
ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್‌ಸೇಠ್, ಶ್ರೀವತ್ಸ, ರವಿಶಂಕರ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಸೇರಿ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್ ವಾರ್ನಿಂಗ್