ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ವೇಳೆ ಮುಖ್ಯಮಂತ್ರಿ ಯಾರಾಗುತ್ತಾರೆ? ಮಾಜಿ ಸಿಎಂ ಸಿದ್ದರಾಮಯ್ಯ ಅವರಾ? ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಎಂಬ ಬಗ್ಗೆ ಈಗ ಬಹುವಾಗಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ಈಗಾಲೇ ಸಿಎಂ ಗಾದಿಗಾರಿ ಲಾಬಿಯೂ ಶುರುವಾಗಿದೆ. ಆದರೆ, ಬಾಲಕನೊಬ್ಬ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ನೀಡಿರುವ ಹೇಳಿಕೆ ಈಗ ಸಖತ್ ವೈರಲ್ (Viral Video) ಆಗಿದೆ. ಸಿದ್ದರಾಮಯ್ಯ (Siddaramaiah) ಸಿಎಂ ಆಗೇ ಆಗ್ತಾನೆ. ಇಲ್ಲದಿದ್ದರೆ ಒಪ್ಪರೆ (ಒಂದು ಕಡೆಯ) ಮೀಸೆ ಬೋಳಿಸ್ತೇನೆ ಎಂದು ಮೂರು ವರ್ಷದ ಬಾಲಕನೊಬ್ಬ ಹೇಳಿಕೆ ನೀಡಿದ್ದಾನೆ.
ಸಖತ್ ಆ್ಯಕ್ಟಿವ್ ಆಗಿರುವ ಬಾಲಕನನ್ನು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದು, ಆತ ಅದಕ್ಕೆ ಉತ್ತರ ಕೊಟ್ಟಿರುವ ಶೈಲಿ ಎಲ್ಲವೂ ಜನರಿಗೆ ಇಷ್ಟವಾಗಿದೆ. ಅಲ್ಲದೆ, ಈ ವಿಡಿಯೊವನ್ನು ಸಾಕಷ್ಟು ಕಡೆಗಳಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೂ ಮುನ್ನ ಯುಎಸ್ಎ ಪ್ರವಾಸಕ್ಕೆ ಹೊರಟು ನಿಂತ ರಾಹುಲ್ ಗಾಂಧಿ; 10ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಆದಿತ್ಯ ದಳವಾಯಿ ಎಂಬ ಬಾಲಕನಿಗೇ ಈಗ ಸುದ್ದಿಯಲ್ಲಿ ಇರುವುದು. ಈತ ಮಾಳು ದಳವಾಯಿ ಎಂಬ ಡೊಳ್ಳು ಕಲಾವಿದನ ಮಗನಾಗಿದ್ದಾನೆ.
ವಿಡಿಯೊದಲ್ಲೇನಿದೆ?
ವ್ಯಕ್ತಿಯೊಬ್ಬರು ಬಾಲಕ ಆದಿತ್ಯ ಬಳಿ ಬಂದು, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ಬಾಲಕ, ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗುತ್ತಾನೆ ಎಂದು ಹೇಳುತ್ತಾನೆ. ಆಗ ಮಾತನಾಡಿಸುವ ವ್ಯಕ್ತಿ, ಅವ ಸಿದ್ದರಾಮಯ್ಯ ಯಾಕ್ ಆಗುತ್ತಾನಾ? ಅಂತ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಬಾಲಕ, ಸಿದ್ದರಾಮಯ್ಯ ಸಿಎಂ ಆಗದೇ ಇದ್ದರೆ ಮೀಸೆ ಬೋಳಿಸ್ತೀನಿ… ನನ್ನ ಒಂದು ಕಡೆ ಮೀಸೇನೇ ಬೋಳಿಸ್ತೀನಿ ಅಂತ ಹೇಳುತ್ತಾನೆ. ಮತ್ತೆ ಸಾವಿರ ರೂಪಾಯಿ ರೊಕ್ಕ ಕೊಡ್ತೀನಿ ಎಂದು ಹೇಳಿದ್ದಾನೆ.
ಆಗ ಆ ವ್ಯಕ್ತಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಾರೆ. ಅದಕ್ಕೆ ಇಲ್ಲವೇ ಇಲ್ಲ ಎಂದು ತಲೆ ಅಲ್ಲಾಡಿಸುವ ಬಾಲಕ, ಬೊಮ್ಮಾಯಿ ಎಲ್ ಸಿಎಂ ಆಕಾನೂ ಎಂದು ಪ್ರಶ್ನೆ ಮಾಡಿದ್ದಾನೆ.
ಬಾಲಕ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಇದನ್ನೂ ಓದಿ: PM Rozgar Mela: ಗ್ರೂಪ್ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ
ಜೈ ಸಿದ್ದರಾಮಯ್ಯ ಘೋಷಣೆ
ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುವ ಬಾಲಕ, ಶಾಲೆಯಲ್ಲಿ ಬೂಟ್ ಕೊಟ್ಟಾನು, ಅಕ್ಕಿ ಕೊಟ್ಟಾನು, ಹಾಲು ಕೊಟ್ಟಾನು, ಎಲ್ಲ ಕೊಡ್ತಾನೂ ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ, ಮತ್ತೆ ಸಿದ್ದರಾಮಯ್ಯ ಏನು ಮಾಡುತ್ತಾರೆ? ಎಂದು ಮರು ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಬಾಲಕ ಆದಿತ್ಯ, ಬಡವರನ್ನೆಲ್ಲಾ ನೋಡ್ತಾನಾ ಎಂದು ಪ್ರತ್ಯುತ್ತರ ನೀಡಿದ್ದಾನೆ. ಕೊನೆಗೆ ಜೈ ಸಿದ್ದರಾಮಯ್ಯ ಎಂಬ ಘೋಷಣೆಯನ್ನೂ ಕೂಗಿದ್ದಾನೆ.