ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ (Congress Guarantee scheme) ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿರುವುದು ತಪ್ಪು. ಅದು ಸರಿಯಲ್ಲ. 10-15 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿಗೋಸ್ಕರ ಸಿಎಂ ಸಿದ್ದರಾಮಯ್ಯ (CM Siddaramaiah) ಇಟ್ಟುಕೊಂಡಿದ್ದು, ಮುಂದಿನ ನವೆಂಬರ್ – ಡಿಸೆಂಬರ್‌ನಲ್ಲಿ ಬರುವ ಪೂರಕ ಬಜೆಟ್‌ನಲ್ಲಿ ಅವರು ಅಭಿವೃದ್ಧಿಗಾಗಿ ಹಣ ನೀಡಲಿದ್ದಾರೆ ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಸರ್ಕಾರದಲ್ಲಿ ಹಣ ಇದೆ. ಇನ್ನೂ 10-15 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿಗೋಸ್ಕರ ಖರ್ಚು ಮಾಡಬಹುದಾಗಿದ್ದು, ನಾನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಹೇಳಿದ್ದೇನೆ. ನವೆಂಬರ್-ಡಿಸೆಂಬರ್‌ನಲ್ಲಿ ನಡೆಸಲಾಗುವ ಪೂರಕ ಬಜೆಟ್‌ನಲ್ಲಿ (Supplementary Budget) ಹಣ ಕೊಡಲು ನೀವು ಇಟ್ಟುಕೊಂಡಿದ್ದೀರಿ ಎಂದು ನಾನು ಅವರಿಗೆ ಹೇಳಿದ್ದೆ. ಅದಕ್ಕೆ ಅವರು ಮೌನವಾಗಿಯೇ ಉತ್ತರ ಕೊಟ್ಟರು ಎಂದು ಹೇಳಿದರು.
ಅನ್ನಭಾಗ್ಯ ಮತಕ್ಕಾಗಿ ಬಂದ ಯೋಜನೆಯಲ್ಲ
ಬಡತನ ಇನ್ನೂ ಶಾಶ್ವತವಾಗಿ ನಿರ್ಮೂಲನೆಯಾಗಿಲ್ಲ. ನಿರುದ್ಯೋಗ ಸಮಸ್ಯೆ ಸಹ ಬಗೆಹರಿದಿಲ್ಲ. ನಾವು ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳನ್ನು ಉಚಿತವಾಗಿ ಕೊಡಬೇಕೋ? ರಿಯಾಯಿತಿ ದರದಲ್ಲಿ ಕೊಡಬೇಕೋ ಎಂಬ ವಿಚಾರ ಚರ್ಚೆಯಲ್ಲಿತ್ತು. ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಆಗಿನ ಕೇಂದ್ರ ಸರ್ಕಾರ ಆಹಾರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಅನುಸಾರ ಜಿಲ್ಲೆಯ ಯಾವುದೇ ಒಬ್ಬ ಮನುಷ್ಯ ಹಸಿವಿನಿಂದ ಮೃತಪಟ್ಟರೆ, ಅದಕ್ಕೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಸಹ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದೇಶದ ಎಲ್ಲ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಗೆ ಕನಿಷ್ಠ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಬೇಕು ಎಂದೂ ಸಹ ಈ ಆದೇಶದಲ್ಲಿ ಹೇಳಲಾಗಿತ್ತು. ಇನ್ನು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಹಸಿವಿನ ನಿಜವಾದ ಅರ್ಥ ಗೊತ್ತಿದ್ದರಿಂದ ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಒಬ್ಬ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯವನ್ನು ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ವೋಟಿನ ರಾಜಕಾರಣಕ್ಕಾಗಿ ಜಾರಿಗೆ ತಂದಿರುವ ಸ್ಕೀಂ ಅಲ್ಲ. ಇದರ ಮೂಲ ಉದ್ದೇಶ ಬಡವರಿಗೆ ಅನುಕೂಲ ಆಗಲಿ ಎಂಬುದಾಗಿದೆ ಎಂದು ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ಈ ಬಾರಿ ಮತ ಬ್ಯಾಂಕ್‌ಗೋಸ್ಕರ ಅನ್ನಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿಯನ್ನು ಘೋಷಣೆ ಮಾಡಲಿಲ್ಲ. ಬಡವರ ಹಸಿವಿನ ಹಿನ್ನೆಲೆಯಲ್ಲಿ ಘೋಷಣೆ ಮಾಡಿದರು. ಅವರಿಗೆ ಬಡತನ ಹಾಗೂ ಹಸಿವಿನ ಅರಿವು ಇದೆ. ಅವರು ಎಂದೂ ಸಹ ಸೈದ್ಧಾಂತಿಕ ಹಿನ್ನೆಲೆಯನ್ನು ಬಿಟ್ಟು ಕೆಲಸ ಮಾಡುವವರಲ್ಲ. ಹೀಗಾಗಿ ಈಗ ಅಧಿಕಾರಕ್ಕೆ ಬಂದವರು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದರು. ಇದಕ್ಕಾಗಿ ಕೇಂದ್ರಕ್ಕೆ ಅಕ್ಕಿ ಕೊಡುವಂತೆ ಮೊರೆ ಇಟ್ಟರು. ಆದರೆ, ಕೇಂದ್ರ ಸರ್ಕಾರದವರು ಈ ವಿಚಾರದಲ್ಲಿ ರಾಜಕೀಯ ಮಾಡಿದರು. ಇನ್ನು ಈ ವಿಚಾರವಾಗಿ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಅವರಾಗಲೀ, ಬಸವರಾಜ ಬೊಮ್ಮಾಯಿ ಅವರಾಗಲೀ ಮಾತನಾಡಬೇಕಿತ್ತು. ಅವರೂ ಆ ಕೆಲಸವನ್ನು ಮಾಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಶೇ. 36ರಷ್ಟು ಮಂದಿ ಮತ ಹಾಕಿದ್ದಾರೆ. ಅವರಿಗಾದರೂ ಕೇಂದ್ರ ಅಕ್ಕಿ ಕೊಡುವ ಕೆಲಸವನ್ನು ಮಾಡಬೇಕಿತ್ತು ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಲಾಗಿದೆ. ರಾಜ್ಯದಲ್ಲಿ 3.50 ಕೋಟಿ ಹೆಣ್ಣು ಮಕ್ಕಳಿದ್ದಾರೆ. ಆದರೆ, ದಿನ ಅಷ್ಟೂ ಜನ ಓಡಾಟ ನಡೆಸುವುದಿಲ್ಲವಲ್ಲಾ? ಈಗ ಮೊದಲ ಬಾರಿಗೆ ಯೋಜನೆ ಜಾರಿಗೆ ಬಂದಿರುವುದರಿಂದ ಹೆಚ್ಚಿನ ಹೆಣ್ಣು ಮಕ್ಕಳು ಉತ್ಸಾಹದಿಂದ ಸಂಚಾರ ಮಾಡುತ್ತಿದ್ದಾರೆ. ಬರಬರುತ್ತಾ ಇದು ತಗ್ಗಲಿದೆ. ಆಗ ಈಗಿರುವ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಇಂದಿನ ಲೆಕ್ಕಾಚಾರದ ಪ್ರಕಾರ, ಪ್ರತಿ ವರ್ಷಕ್ಕೆ ಸುಮಾರು 4 ಸಾವಿರ ಕೋಟಿ ರೂಪಾಯಿ ಖರ್ಚಾಗಲಿದೆ. ಆದರೆ, ಈ ಯೋಜನೆಯಿಂದ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಬಡತನವುಳ್ಳವರಿಗೆ ತುಂಬಾ ಅನುಕೂಲವಾಗಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಈಗಿರುವುದು ವಾಮ ಮಾರ್ಗದ ರಾಜಕಾರಣ
2000ನೇ ಇಸವಿಗಿಂತ ಮೊದಲಿನ ರಾಜಕಾರಣವೇ ಬೇರೆ. ಆಗ ಬದ್ಧತೆ, ಶಿಸ್ತು ಹಾಗೂ ತತ್ವ ನೀತಿಗಳಿಗೆ ಬೆಲೆ ಇತ್ತು. ಹಣದ ರಾಜಕಾರಣವೂ ಇರಲಿಲ್ಲ. ಆದರೆ, ಅದರಿಂದೀಚೆಗೆ ರಾಜಕಾರಣವು ಕೆಡುತ್ತಾ ಬಂತು. ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕೆಟ್ಟಿದೆ. ಹಣ, ಹೆಂಡ ಹಾಗೂ ಜಾತಿ ಮೂಲಕ ವಾಮ ಮಾರ್ಗದ ರಾಜಕಾರಣ ತೀವ್ರಗತಿಯನ್ನು ಪಡೆದುಕೊಂಡಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಮೊದಲು ಸಮಾಜ ಸೇವೆ ಮಾಡಲು ರಾಜಕಾರಣಕ್ಕೆ ಬಂದರೆ, ಈಗ ವ್ಯಾಪಾರ, ಹಣ ಮಾಡಲೆಂದು ಬರುವವರು ಹೆಚ್ಚಿದ್ದಾರೆ. ಇದು ಯಾವುದೋ ಒಂದು ಪಕ್ಷ ಎಂದು ನಾನು ಹೇಳಲಾರೆ. ಕಾಂಗ್ರೆಸ್ ಸೇರಿ ಎಲ್ಲರೂ ಈ ವ್ಯವಸ್ಥೆಯಲ್ಲಿದ್ದಾರೆ. ಒಬ್ಬರು ದೊಡ್ಡ ಕಳ್ಳರಿದ್ದರೆ ಮತ್ತೊಬ್ಬರು ಸಣ್ಣ ಕಳ್ಳರಿದ್ದಾರೆ. ವ್ಯಾಪಾರವನ್ನು ಮಾಡಲೆಂದೇ ಕೆಲವರು ಬರುತ್ತಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಇದನ್ನೂ ಓದಿ: Commission Politics : ಕಮಿಷನ್ ಕೇಳಿಲ್ಲವಾದರೆ ಡಿಕೆಶಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ: ಸಿ.ಟಿ. ರವಿ ಸವಾಲು
ನನ್ನ ಮೇಲೆ ಯಾವುದೇ ಕಪ್ಪು ಚುಕ್ಕಿ ಇಲ್ಲ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಟ್ರ್ಯಾಕ್ ರೆಕಾರ್ಡ್ ಕೂಡಾ ಚೆನ್ನಾಗಿದೆ. ಆದರೆ, ಇಂದು ರಾಜಕಾರಣದಲ್ಲಿ ಮೆರಿಟ್ ಎಂಬುದು ಮಾನದಂಡವಾಗಿ ಉಳಿದಿಲ್ಲ. ಜಾತಿ ಮತ್ತು ಧರ್ಮದ ರಾಜಕಾರಣವಿದೆ. ಹೀಗಾಗಿ ವಾಮ ಮಾರ್ಗದಲ್ಲಿ ಕೆಲವರು ಮಂತ್ರಿಗಳಾಗುತ್ತಾರೆ. ನಮ್ಮ ಆಡಳಿತ ಯಂತ್ರ ಕುಸಿಯಲು ಇದೂ ಒಂದು ಕಾರಣವಾಗಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.