ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೊಸತಲ್ಲ. ಈಗಂತೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ, ಶೀತಲ ಸಮರ ಬಹಿರಂಗವಾಗಿಯೇ ಕಾಣುತ್ತಿದೆ.
ಸಿದ್ದರಾಮಯ್ಯ ʻಆಪ್ತʼರೆಲ್ಲರೂ ಸೇರಿಕೊಂಡು ಆಗಸ್ಟ್ 3 ರಂದು ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸಿದ್ದರಾಮೋತ್ಸವ ಎಂದೇ ಪ್ರಸಿದ್ಧವಾಗಿರುವ 75ನೇ ಹುಟ್ಟು ಹಬ್ಬದ ಸಂಭ್ರಮದ ಮೂಲಕ ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬುದು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಚರ್ಚೆ. ಆದರೆ ಸಿದ್ದರಾಮಯ್ಯ ʻಆಪ್ತʼರ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಮಂಗಳವಾರ ನಡೆದ ಸ್ವಾರಸ್ಯಕರ ಪ್ರಸಂಗವಿದೆ.
ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನ ಆಗುತ್ತಿದ್ದಂತೆಯೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಶಾಸಕ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೇರಿ ಅನೇಕರು ಉಪಸ್ಥಿತರಿದ್ದರು.
ಸುಮಾರು 40 ನಿಮಿಷ ಸರ್ಕಾರದ ನಡೆ ಕುರಿತು ಮಾತನಾಡಿದ ನಂತರ ಸುದ್ದಿಗಾರರ ಪ್ರಶ್ನೆಗಳು ಆರಂಭವಾದವು. ಈ ಸಮಯದಲ್ಲಿ, ಶಾಸಕ ಜಮೀರ್ ಅಹ್ಮದ್ ಅವರ ಮನೆ ಮೇಲೆ ಎಸಿಬಿ ದಾಳಿ ಕುರಿತು ಪ್ರಶ್ನಿಸಲಾಯಿತು. ಬೆಳಗ್ಗೆ 7 ಗಂಟೆಯಿಂದಲೇ ದಾಳಿ ನಡೆಯುತ್ತಿದೆ, ರಾಜ್ಯದ ಎಲ್ಲ ಸುದ್ದಿವಾಹಿನಿಗಳೂ ಇದೇ ಸುದ್ದಿ ಬಿತ್ತರಿಸುತ್ತಿವೆ. ಆದರೆ ಸಿದ್ದರಾಮಯ್ಯ ಅವರೇ ಹೇಳುವಂತೆ, ಅವರಿಗೆ ಮಾತ್ರ ಈ ವಿಚಾರ ತಿಳಿದೇ ಇರಲಿಲ್ಲ. ʻಹೌದ? ಎಸಿಬಿ ದಾಳಿ ಆಗಿದೆಯ? ಯಾಕೆ ದಾಳಿ ಮಾಡಿದರು? ಯಾವ ಪ್ರಕರಣ? ನನಗೆ ಈಗ ನೀವು ಹೇಳಿದ ಮೇಲೇನೇ ಗೊತ್ತಾಗಿದ್ದುʼ ಎಂದರು.
ನಿಮ್ಮ ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆಯಲ್ಲ ಎಂದ ಕೂಡಲೆ ಸಿಟ್ಟಿಗೆದ್ದ ಸಿದ್ದರಾಮಯ್ಯ, ʻಯಾರು ನನ್ನ ಆಪ್ತರು? ಆಪ್ತರು, ಆಪ್ತರು ಎನ್ನುವ ರೋಗ ಬಂದುಬಿಟ್ಟಿದೆ. ನಾವು ಮನುಷ್ಯತ್ವ ಇರುವವರು. ಎಲ್ಲರೂ ನನ್ನ ಆಪ್ತರೆ. ನೀವೂ ನನ್ನ ಆಪ್ತʼ ಎಂದರು. ಬಲ ಪಕ್ಕದಲ್ಲಿದ್ದ ಪ್ರಿಯಾಂಕ್ ಖರ್ಗೆ ಅವರನ್ನು ತೋರಿಸಿ, ಪ್ರಿಯಾಂಕ್ ನನ್ನ ಆಪ್ತ ಎಂದರು. ದೂರದಲ್ಲಿ ಕುಳಿತಿದ್ದ ದಿನೇಶ್ ಗೂಳಿಗೌಡ ಕಡೆ ಬೆರಳು ತೋರಿಸಿ ಅವರೂ ನನ್ನ ಆಪ್ತ ಎಂದರು. ಆದರೆ ಎಡಪಕ್ಕದಲ್ಲೆ ಇದ್ದ ಡಿ.ಕೆ. ಶಿವಕುಮಾರ್ ಕುರಿತು ಪ್ರಸ್ತಾಪಿಸಲೇ ಇಲ್ಲ.
ಡಿ.ಕೆ. ಶಿವಕುಮಾರ್ ನಿಮ್ಮ ಆಪ್ತರಲ್ಲವೇ? ಎಂದು ಕೇಳಿದಾಗ, ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಇರುವ ಎಲ್ಲರೂ ನನ್ನ ಆಪ್ತರು ಎಂದರು. ಪದೇಪದೆ ಕೇಳಿದರೂ ಒಮ್ಮೆಯೂ ಶಿವಕುಮಾರ್ ಹೆಸರನ್ನು ಸಿದ್ದರಾಮಯ್ಯ ಹೇಳಲೇ ಇಲ್ಲ. ಕೊನೆಗೆ, OK Thank you ಎನ್ನುತ್ತ ಬೇರೆ ಪ್ರಶ್ನೆಗಳಿಗೆ ಹೊರಳಿದರು. ಇಷ್ಟೂ ಹೊತ್ತು ಪಕ್ಕದಲ್ಲಿ ಕುಳಿತಿದ್ದ ಶಿವಕುಮಾರ್ ಮುಗುಳ್ನಗುತ್ತ ಇಡೀ ಸನ್ನಿವೇಶವನ್ನು Enjoy ಮಾಡುತ್ತಿದ್ದರು.
ಇದನ್ನೂ ಓದಿ | ಖಾಕಿಗೆ ಮರ್ಯಾದೆ ಹೋಗಿದೆ, ಕಾವಿಗೆ ಮಾತ್ರ ಗೌರವವಿದೆ; ಮಠಗಳ ಕೊಡುಗೆ ಶ್ಲಾಘಿಸಿದ ಡಿ.ಕೆ. ಶಿವಕುಮಾರ್