ವಿಜಯಪುರ: ತಮ್ಮ ಪ್ರವಚನಗಳ ಮೂಲಕ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಸರ್ಕಾರಿ ಗೌರವದ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಧ್ಯಾನಸ್ಥ ಭಂಗಿಯಲ್ಲಿರುವಂತೆ ಕುಳಿತ ಶ್ರೀಗಳು ಎಲ್ಲವನ್ನೂ ಸ್ವೀಕರಿಸುವಂತೆ ಮುಗುಳ್ನಗುತ್ತಿರುವಂತೆ ಕಂಡಿತು.
ನಡೆದಾಡುವ ದೇವರು, ಶತಮಾನದ ಸಂತ ಎಂದೇ ಹೆಸರಾದ ಸಿದ್ದೇಶ್ವರ ಸ್ವಾಮೀಜಿ ಅವರು ಸೋಮವಾರ ರಾತ್ರಿ ದೇಹ ತ್ಯಾಗ ಮಾಡಿದ್ದರು. ಅವರ ಪಾರ್ಥಿವ ಶರೀರವನ್ನು ರಾತ್ರಿ ಇಡೀ ಯೋಗಾಶ್ರಮದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅದಾದ ಬಳಿಕ ಮಂಗಳವಾರ ಬೆಳಗ್ಗೆ ಆರು ಗಂಟೆ ಹೊತ್ತಿಗೆ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯ ಆವರಣಕ್ಕೆ ತರಲಾಗಿತ್ತು. ದಿನವಿಡೀ ಲಕ್ಷಾಂತರ ಭಕ್ತರು ಗುರುಗಳ ಅಂತಿಮ ದರ್ಶನವನ್ನು ಪಡೆದರು.
ಈ ನಡುವೆ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ನೂರಾರು ರಾಜಕಾರಣಿಗಳು, ನೂರಾರು ಸಾಧುಸಂತರು, ಗಣ್ಯರು, ಲಕ್ಷಾಂತರ ಭಕ್ತರು ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನು ಪಡೆದರು.
ಸರ್ಕಾರಿ ಗೌರವ
ಸಂಜೆ ಐದು ಗಂಟೆಯ ಹೊತ್ತಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಶ್ರೀಗಳಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರ ಗೀತೆಯನ್ನು ನುಡಿಸಿ ಮೂರು ಸುತ್ತು ಕುಶಾಲು ತೋಪುಗಳನ್ನು ಗಗನ ಮುಖಿಯಾಗಿ ಹಾರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು. ಬಳಿಕ ಮುಖ್ಯಮಂತ್ರಿಗಳು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು. ಈ ಮೂಲಕ ಸರಕಾರಿ ಗೌರವವನ್ನು ಪರಿಪೂರ್ಣಗೊಳಿಸಲಾಯಿತು.
ರಾತ್ರಿಯ ಹೊತ್ತಿಗೆ ಅಂತ್ಯ ವಿಧಿ
ಸರ್ಕಾರಿ ಗೌರವದ ಬಳಿಕ ಭಕ್ತರ ಅಂತಿಮ ದರ್ಶನ ಮುಂದುವರಿದಿದ್ದು, ರಾತ್ರಿಯ ಹೊತ್ತಿಗೆ ಜ್ಞಾನ ಯೋಗಾಶ್ರಮದವರೆಗೆ ಅಂತಿಮ ಯಾತ್ರೆ ಆರಂಭವಾಗಬಹುದು ಎಂದು ಹೇಳಲಾಗಿದೆ. ಶ್ರೀಗಳ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ದರ್ಶನ ನೀಡಿದ ಬಳಿಕವೇ ಅಂತ್ಯ ವಿಧಿ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | Siddheshwar Swamiji | ಇಲ್ಲಿವೆ ಸಿದ್ದೇಶ್ವರ ಸ್ವಾಮೀಜಿ ಅವರ ಸರಳ ಜೀವನದಿಂದ ಹಿಡಿದು ಕಾಯಕ ಯೋಗಿವರೆಗಿನ ಫೋಟೊಗಳು