ವಿಜಯಪುರ: ನಡೆದಾಡುವ ದೇವರೆಂದೇ ಭಕ್ತ ಜನರು ನಂಬಿದ್ದ ಆ ಮಹಾ ಸಂತ (ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ) ಇನ್ನು ನಮ್ಮ ನಡುವೆ ಓಡಾಡುವುದಿಲ್ಲ. ಮಾತಿನ ಮೂಲಕವೇ ಜಗವನ್ನು ಗೆದ್ದ ಆ ಧೀಮಂತ ಇನ್ನು ನಮ್ಮ ಜತೆ ಮಾತನಾಡುವುದಿಲ್ಲ. ಅವರು ತಮ್ಮಾಸೆಯಂತೆ, ತಾವು ಮೊದಲೇ ತೀರ್ಮಾನಿಸಿದಂತೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಇನ್ನು ಅವರ ಓಡಾಟವೇನಿದ್ದರೂ ಮಾನವ ನಿಗದಿತ ಪರಿಧಿಯ ಆಚೆಗಿನ ದಿವ್ಯಾಂತರಿಕ್ಷದಲ್ಲಿ. ಅಲ್ಲಿ ಅವರಾಡುವ ಮಾತುಗಳೆಲ್ಲ ದಿವ್ಯವಾಣಿ, ನಮ್ಮ ಪಾಲಿಗೆ ಅಶರೀರವಾಣಿ.
೮೨ ವರ್ಷಗಳ ಸಾರ್ಥಕ ಬದುಕಿನ ಉದ್ದಕ್ಕೂ ಸ್ವಂತದ ಬಗ್ಗೆ ಸಾಸಿವೆಯಷ್ಟೂ ಯೋಚಿಸದೆ, ಜಗತ್ತಿನ ಜನರ ಒಳಿತಿನ ಬಗ್ಗೆಯೇ ಧೇನಿಸಿದ ಮಹಾಗುರು ಇನ್ನು ಮುಂದೆಯೂ ತಮ್ಮ ಮಾತುಗಳ ಮೂಲಕ, ತಾವು ಬಿಟ್ಟು ಹೋದ ಉದಾತ್ತ ಆದರ್ಶಗಳ ಮೂಲಕ ಶತಮಾನಗಳ ಆಚೆಗೂ ಚಿರಂತನವಾಗಿ ಉಳಿಯಲಿದ್ದಾರೆ. ಯಾಕೆಂದರೆ, ಸಿದ್ದೇಶ್ವರ ಸ್ವಾಮೀಜಿ ಎಂಬ ಅರಿವಿನ ಮಹಾಗುರು ಮಂಗಳವಾರ ಮುಸ್ಸಂಜೆಯ ಹೊತ್ತು ಪರಿಮಳಿತ ಗಂಧದೊಂದಿಗೆ ನಭೋಮಂಡಲಕ್ಕೇರಿ ಧ್ರುವತಾರೆಯಾದರು. ಇನ್ನು ಅವರು ಆಕಾಶ ಸಂಚಾರಿ. ಜನರ ಮನದಲ್ಲಿ ನಿತ್ಯ ಸಂಚಾರಿ.
ವಿಜಯಪುರದ ಜ್ಞಾನ ಯೋಗಾಶ್ರಮದ ಗುರುವಾಗಿ ಜಗತ್ತಿಗೆ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಮಹಾಸಂದೇಶವನ್ನು ನೀಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅದೇ ಯೋಗಾಶ್ರಮದ ಮುಂದೆ ಅಗ್ನಿಗೆ ಸಮರ್ಪಿತರಾದರು. ಸೋಮವಾರ ರಾತ್ರಿ ಇಚ್ಛಾ ಮರಣಿಯಂತೆ ದೇಹತ್ಯಾಗ ಮಾಡಿದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರು.
ಪರಿಶುಭ್ರ ಬಿಳಿಯುಡುಗೆಯೊಂದಿಗೆ ಜೀವನವನ್ನು ನಿಷ್ಕಳಂಕವಾಗಿ ಕಳೆದ ಸ್ವಾಮೀಜಿ ದೇಹಾಂತ್ಯದ ಆಚೆಗೂ ಅಷ್ಟೇ ನಿಷ್ಕಲ್ಮಶವಾದ ನಗುವಿನೊಂದಿಗೆ ಭಕ್ತರಿಗೆ ದರ್ಶನ ನೀಡಿದ್ದು ಅಚ್ಚರಿಯಾದರೂ ಸತ್ಯ. ಪ್ರಫುಲ್ಲಿತ ಮುಖಭಾವದೊಂದಿಗೆ ಧ್ಯಾನಸ್ಥರಾಗಿದ್ದಾರೋ ಎಂಬಂತೆ ನಿರ್ಮೋಹಿಯಂತೆ ಕುಳಿತಿದ್ದ ಅವರನ್ನು ಕಂಡು ಜನ ಗದ್ಗದಿತರಾದರು, ತಮ್ಮಣ್ಣನನ್ನು, ಅಪ್ಪನನ್ನು ಕಳೆದುಕೊಂಡಂತೆ ಕಣ್ಣೀರಿಟ್ಟರು.
ಸೋಮವಾರ ರಾತ್ರಿಯಿಂದ ಬೆಳಗ್ಗಿನ ಆರು ಗಂಟೆವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲೇ ಅಂತಿಮ ದರ್ಶನಕ್ಕೆ ಅವಕಾಶವಿದ್ದರೆ ಬಳಿಕ ಬೆಳಗ್ಗಿನಿಂದ ಸಂಜೆ ಐದು ಗಂಟೆಯವರೆಗೆ ಸೈನಿಕ ಶಾಲೆಯ ಮೈದಾನದಲ್ಲಿ ಲಕ್ಷಾಂತರ ಜನರ ಮುಂದೆ ಬಯಲಲ್ಲಿ ದರ್ಶನ ನೀಡಿದರು ಸ್ವಾಮೀಜಿ. ಸಂಜೆ ಐದು ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕುಶಾಲುತೋಪು, ಪೊಲೀಸ್ ಬ್ಯಾಂಡ್ ಹಾಗೂ ರಾಷ್ಟ್ರ ಧ್ವಜ ಹಸ್ತಾಂತರದ ಮೂಲಕ ಸರ್ಕಾರಿ ಗೌರವ ನೀಡಲಾಯಿತು.
ಜನ ಸಾಗರದ ಮಹಾ ಮೆರವಣಿಗೆ
ಸಂಜೆ ಐದು ಗಂಟೆಯ ಬಳಿಕ ಸೈನಿಕ ಶಾಲಾ ಮೈದಾನದಿಂದ ಯೋಗಾಶ್ರಮಕ್ಕೆ ಸ್ವಾಮೀಜಿಯ ಅಂತಿಮ ಮೆರವಣಿಗೆ ನಡೆಯಿತು. ಲಕ್ಷಾಂತರ ಜನರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಭಕ್ತ ಜನರು ತಮ್ಮ ಗುರುವನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡರು. ಅಪ್ಪಾ.. ಅಪ್ಪೋರೇ ನಮಗ್ಯಾರು ದಿಕ್ಕು ಎನ್ನುವ ಕಣ್ಣೀರ ಮಾತುಗಳು ಸಂಜೆಗತ್ತಲನ್ನು ಸೀಳಿಕೊಂಡು ಮಾರ್ದನಿಸಿದವು. ʻಅವರು ನಮಗೆ ತಾಯಿಯಂತಿದ್ದರು, ಬಾ ಸಿದ್ಧ ಕಾಪಾಡು ಸಿದ್ಧ, ಅಪ್ಪನನ್ನು ಕಳೆದುಕೊಂಡು ಹೇಗೆ ಬದುಕಲಿʼ ಎಂಬ ಹೆಣ್ಮಕ್ಕಳ ಕೂಗು ಮುಗಿಲು ಮುಟ್ಟಿತ್ತು. ಅದಕ್ಕೆ ಸಂವಾದಿಯಾಗಿ ಓಂ ನಮಃ ಶಿವಾಯ, ಜೈ ಗುರುದೇವ, ಜೈ ಸಿದ್ದೇಶ್ವರ ಸ್ವಾಮೀಜಿ ಎಂಬ ಘೋಷಣೆಗಳು ಅನುರಣಿಸಿದವು.
ನಾಡಿನೆಲ್ಲೆಡೆ ಭಕ್ತಿಯ ನಮನ
ವಿಜಯಪುರ ಮಾತ್ರವಲ್ಲ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಕಡೆ ಪೂಜ್ಯ ಶ್ರೀಗಳ ಅಧ್ಯಾತ್ಮಿಕ ಸಾಧನೆಯನ್ನು ಗೌರವಿಸುವ ಕಾರ್ಯಕ್ರಮಗಳು ನಡೆದವು. ಶಾಲೆಗಳು, ಸಂಘ ಸಂಘಸಂಸ್ಥೆಗಳು ನಮನ ಸಲ್ಲಿಸಿದವು. ಪ್ರತಿ ಊರಿನಲ್ಲೂ ಪ್ರವಚನದ ಮೂಲಕ ಸ್ಫೂರ್ತಿ ತುಂಬಿದ್ದ ಶ್ರೀಗಳನ್ನು ಜನ ನೆನೆದು ಕಣ್ಣೀರಾದರು.
ಬಿಜ್ಜರಗಿಯಿಂದ ಎದ್ದು ಬಂದ ಶುದ್ಧೋದನ
ಬಿಜ್ಜರಗಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬಾಲ್ಯದಲ್ಲೇ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿ ಬುದ್ಧನಂತೆ ಮನೆ ಬಿಟ್ಟು ಲೋಕೋತ್ತರ ಕಲ್ಯಾಣಕ್ಕಾಗಿ ಬದುಕನ್ನು ಮುಡಿಪಿಟ್ಟ ಕ್ರಾಂತಿಯೋಗಿಯ ಕಥಾನಕಗಳನ್ನು ಜನರು ನೆನಪು ಮಾಡಿಕೊಳ್ಳುತ್ತಲೇ ಇದ್ದರು.
ನಾನು ಏನೂ ಅಲ್ಲ ಎನ್ನುವ ನಿರ್ಮೋಹ, ಪರರನ್ನು ಪ್ರೀತಿಸುವ ಹಿತ ಭಾವ, ಹಿತವಚನಗಳ ಮೂಲಕ ಜನರ ಮನಸ್ಸನ್ನು ಪರಿವರ್ತಿಸಿದ ಸಂತನ ಮಾತುಗಳನ್ನು ಜನರು ನೆನಪು ಮಾಡಿಕೊಳ್ಳುತ್ತಾ ಜನರು ಕಣ್ಣೀರಾದರು.
ಪಂಚಭೂತಗಳಲ್ಲಿ ಲೀನವಾದರು ತಪಸ್ವಿ
ನಾನು ಭೂಮಿಗೆ ಭಾರವಾಗಲಾರೆ. ನನ್ನ ದೇಹವನ್ನು ಅಗ್ನಿಗೆ ಅರ್ಪಿಸಿ, ಚಿತಾಭಸ್ಮವನ್ನು ನದಿಗೋ ಸಮುದ್ರಕ್ಕೋ ಹಾಕಿ ಬಿಡಿ.. ನನಗೆ ಸ್ಮಾರಕ ಬೇಡ, ಶ್ರಾದ್ಧದ ನೆನಪುಗಳು ಬೇಡ.. ಎಲ್ಲದರಿಂದ ಕಳಚಿಕೊಂಡು ಮುಕ್ತಿ ಹೊಂದುತ್ತೇನೆ ನಾನು ಎಂದು ತನ್ನ ಅಂತಿಮ ಇಚ್ಛೆಯನ್ನು ಎಂಟು ವರ್ಷದ ಹಿಂದೆಯೇ ವ್ಯಕ್ತಪಡಿಸಿದ್ದರು ಎಂದು ಸ್ವಾಮೀಜಿ.
ಹೀಗಾಗಿ ಅವರ ಮನಸಿನ ಮಾತಿಗೆ ಬೆಲೆ ಕೊಟ್ಟು ಯಾವುದೇ ಶಾಸ್ತ್ರ ಸಂಪ್ರದಾಯಗಳಿಲ್ಲದೆ ಅತ್ಯಂತ ಸರಳವಾಗಿ ಪಾರ್ಥಿವ ಶರೀರವನ್ನು ಅಗ್ನಿಗೆ ಸಮರ್ಪಿಸಲಾಯಿತು. ಜ್ಞಾನ ಯೋಗಾಶ್ರಮದ ಎದುರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಸೇರಿಸಿದಂತೆ ನಾಯಕ ಗಡಣ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಶ್ರೀಗಳು ಸೇರಿದಂತೆ ನೂರಾರು ಸಂತರ ಸಮ್ಮುಖದಲ್ಲಿ, ಲಕ್ಷಾಂತರ ಭಕ್ತರ ಉದ್ಘೋಷಗಳ ನಡುವೆ ಅವರ ಅಳಿದ ಕಾಯವನ್ನು ಅಗ್ನಿಗೆ ಒಪ್ಪಿಸಲಾಯಿತು.
ಶ್ರೀಗಂಧ, ಬೆರಣಿ, ಕೊಬ್ಬರಿ, ತುಪ್ಪ, ಕರ್ಪೂರಗಳೊಂದಿಗೆ ಬೆಳಗಿದ ಅಗ್ನಿ ದೇವ ಎಂಟು ದಶಕಗಳ ಕಾಲ ಈ ಲೋಕವನ್ನು ಭಾಸ್ಕರನಂತೆ ಬೆಳಗಿದ ಮಹಾಪುರುಷನೊಬ್ಬನನ್ನು ನಿಧಾನವಾಗಿ ಸ್ವೀಕರಿಸಿ ದಿವ್ಯ ಪರಿಮಳವೊಂದನ್ನು ಹೊರಸೂಸುತ್ತಾ ಧೂಮರೂಪದಲ್ಲಿ ಆಕಾಶಕ್ಕೇರಿಸಿದ.
ಸೇರಿದ್ದ ಜನ ಸಂದೋಹದ ಬಿಕ್ಕಳಿಕೆಗಳು ಸಮುದ್ರಘೋಷದಂತೆ ಕೇಳಿಬಂತಾದರೂ ಶ್ರೀಗಳಾಡಿದ ಸಾಂತ್ವನದ ನುಡಿಗಳು ಅವರನ್ನು ಮತ್ತೆ ಸಂತೈಸಿ ನಿರಾಳಗೊಳಿಸಿದಂತೆ ಭಾಸವಾಯಿತು. ಜಗತ್ತಿಗೆ ಒಳಿತಿನ ಮಹಾಪಾಠವನ್ನು ಕಲಿಸಿದ, ನಿಷ್ಕಲ್ಮಶ ಬದುಕನ್ನು ಬಾಳಿದ ಸಹಸ್ರಮಾನದ ಮಾದರಿ ಜೀವನವೊಂದು ಹೀಗೆ ಚಿರಂತನಗೊಂಡಿತು.
ಇದನ್ನೂ ಓದಿ | Siddheshwar swamiji | ಸಿದ್ದೇಶ್ವರ ಸ್ವಾಮಿಗಳಿಗೆ ಸರ್ಕಾರಿ ಗೌರವ, ತ್ರಿವರ್ಣ ಧ್ವಜ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ