Site icon Vistara News

Siddheshwar swamiji | ಆ ಮಹಾ ಸಂತರು ಎಲ್ಲರಿಗೂ ಬೇಕಾಗಿದ್ದರು, ಆದರೆ ಅವರಿಗೆ ಯಾವುದೂ ಬೇಕಾಗಿರಲಿಲ್ಲ!

siddheshwar front

ಸತ್ಯವೂ ಇಲ್ಲ, ಅಸತ್ಯವೂ ಇಲ್ಲ…
ಸಹಜವೂ ಇಲ್ಲ, ಅಸಹಜವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ, ಇಲ್ಲ ಎಂಬುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು

ಬದುಕಿನ ವಾಸ್ತವತೆಯನ್ನು ನಮಗೆಲ್ಲ ಸುಲಭದಲ್ಲಿ ಅರ್ಥವಾಗದ ಹಾಗೆ, ಅರಗಿಸಿ ಕೊಳ್ಳಲೂ ಆಗದ ಹಾಗೆ ಬದುಕಿದರು ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು. ಸಣ್ಣ ವಯಸ್ಸಿನಿಂದಲೇ ಅಧ್ಯಾತ್ಮದ ಕಡೆಗೆ ಸಹಜವಾಗಿ ಆಕರ್ಷಣೆಗೊಂಡು ಅದರ ಚೆಲುವನ್ನು ಜಗತ್ತಿಗೆ ಹಂಚಿದ ಅವರು ಎಲ್ಲರಿಗೂ ಬೇಕು ಬೇಕು ಅನಿಸಿದರು. ಪ್ರತಿಯೊಬ್ಬರೂ ಅವರ ಜತೆಗೆ ಕನೆಕ್ಟ್‌ ಆಗಿ ಬದುಕುವಂತೆ ಬಾಳಿದರು. ಆದರೆ, ಅವರು ಮಾತ್ರ ತನಗೆ ಯಾವುದೂ ಬೇಡ ಎಂದು ನಿರಾಕರಿಸಿದರು. ಅವರಿಗೆ ದುಡ್ಡು ಬೇಡ, ಕೀರ್ತಿ ಬೇಡ, ಪ್ರಶಸ್ತಿ ಬೇಡ, ಹೊಗಳಿಕೆ ಬೇಡ.. ಹೀಗೆ ಬೇಡವೆನ್ನುತ್ತಲೇ ಬದುಕಿದವರು ಅವರು. ಆದರೆ ಎಲ್ಲರಿಗೂ ಬೇಕಾದಂತೆ ಬದುಕಿದರು.

ಹಣ ಬೇಡ ಅಂದಿದ್ದು ಮಾತ್ರವಲ್ಲ ಜೇಬೇ ಬೇಡ ಎಂದರು!
ಶ್ರೀಗಳಿಗೆ ಹಣದ ಬಗ್ಗೆ ವ್ಯಾಮೋಹವೇ ಇರಲಿಲ್ಲ. ಅವರಿಗೆ ಹಣ ಕೊಡಲು ಮುಂದೆ ಬಂದವರ ಸಂಖ್ಯೆ ಸಣ್ಣದಿರಲಿಕ್ಕಿಲ್ಲ. ಆದರೆ, ನನಗ್ಯಾಕೆ ದುಡ್ಡು ನಾನು ಸನ್ಯಾಸಿ ಎನ್ನುತ್ತಾ ದುಡ್ಡಿನಿಂದ ದೂರ ಉಳಿದರು. ನಂಬಿದರೆ ನಂಬಿ ಅವರ ಶುಭ್ರ ಬಿಳಿ ವರ್ಣದ ಯಾವ ಪೈಜಾಮದಲ್ಲೂ ಜೇಬೇ ಇರಲಿಲ್ಲ. ಯಾರೋ ಕೇಳಿದರಂತೆ ನಿಮ್ಮ ಪೈಜಾಮದಲ್ಲಿ ಜೇಬು ಯಾಕಿಲ್ಲ ಎಂದು? ಅದಕ್ಕೆ ಅವರು ಹೇಳಿದರಂತೆ: ನನಗೆ ನಾಳೆಗೆ ತೆಗೆದಿಡಬೇಕು ಎನ್ನುವ ಯಾವ ದರ್ದೂ ಇಲ್ಲ. ಮುಂದಿನ ಕ್ಷಣಕ್ಕೂ ಅದು ಬೇಕಿಲ್ಲ. ಹಾಗಿರುವ ಯಾಕೆ ಜೇಬು ಬೇಕು ನನಗೆ? ದುಡ್ಡಂತೂ ನನಗೆ ಬೇಕಾಗಿಯೇ ಇಲ್ಲ! ಅಂದ ಹಾಗೆ, ಸ್ವಾಮೀಜಿಗಳ ಹೆಸರಲ್ಲಿ ಒಂದು ಬ್ಯಾಂಕ್‌ ಖಾತೆಯೂ ಇಲ್ಲ!

ಕಾವಿಯೂ ಬೇಡ, ಬರಿ ಬಿಳಿ ವಸ್ತ್ರವಷ್ಟೇ ಸಾಕು!
ಗುರು ಮಲ್ಲಿಕಾರ್ಜುನ ಅಪ್ಪರ ಉತ್ತರಾಧಿಕಾರಿ ಆಗಬೇಕು ಎಂಬ ಬೇಡಿಕೆ ಬಂದಾಗ ಅದನ್ನು ತಿರಸ್ಕರಿಸಿದವರು ಶ್ರೀಗಳು. ನಾನು ಮಠ ಕಟ್ಟಿಕೊಂಡು ಬಾಳುವುದಿಲ್ಲ. ಊರೂರು ಅಲೆದು ಬದುಕುತ್ತೇನೆ ಎಂದು ಹೊರಟವರು. ಅವರು ಕಾವಿ ತೊಟ್ಟು ಮಠಾಧಿಪತಿಯಾಗಲಿಲ್ಲ. ಮಠ ಮಾನ್ಯಗಳ ಹಂಗು ತೊರೆದರು. ಜ್ಞಾನ ಯೋಗಾಶ್ರಮದ ವಾಸಿಯಾದರು. ಕಾವಿಯನ್ನು ಬಿಟ್ಟು ತನ್ನ ಶುದ್ಧ ಚಾರಿತ್ರ್ಯದಂತೆ ಧವಳ ವಸ್ತ್ರ ಧಾರಿಯಾದರು.

ಮನೆ ಬೇಡ, ಕಟ್ಟಡಗಳು ಬೇಡ, ಕಾರೂ ಬೇಡ
ಶ್ರೀಗಳಿಗೆ ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಭಕ್ತರಿದ್ದಾರೆ. ಅವರಲ್ಲಿ ಅನೇಕರು ಮನೆ ಕಟ್ಟಿ ಕೊಡುತ್ತೇವೆ ಎಂದರೆ ಶ್ರೀಗಳು ಒಪ್ಪಲಿಲ್ಲ. ಒಂದು ಕಾಣಿಕೆ ಎಂದರೂ ಸ್ವೀಕರಿಸಲಿಲ್ಲ. ಮಠದ ಹೆಸರಿನಲ್ಲಿ ಶಾಲೆ, ಕಾಲೇಜು ಕಟ್ಟೋಣ ಎಂದರೂ ಕೇಳಲಿಲ್ಲ. ಯಾರೋ ಶಾಲೆ ಕಟ್ಟಿಸಿ ಅವರ ಹೆಸರಿಡುತ್ತೇನೆ ಎಂದರೆ ಅದಕ್ಕೂ ಸಮ್ಮತಿಸಲಿಲ್ಲ. ನಿತ್ಯ ಎಲ್ಲಿಗಾದರೂ ಪ್ರವಚನಕ್ಕೆ ಹೋಗುತ್ತಿದ್ದ ಅವರಿಗೆ ಒಂದು ಕಾರು ಕೊಡಿಸಬೇಕು ಎಂದು ಯಾರೋ ಭಕ್ತರು ಮುಂದಾಗಿದ್ದರು. ಅದನ್ನು ಸಮರ್ಪಿಸುವುದಕ್ಕಾಗಿ ತಂದು ಮುಂದಿಟ್ಟರೆ ಕಡೆಗಣ್ಣಿನಿಂದಲೇ ಅದನ್ನು ನಿರಾಕರಿಸಿದ್ದರು. ಆರಂಭದ ಹತ್ತು ಹಲವು ವರ್ಷ ಅವರು ಸೈಕಲಿನಲ್ಲೇ ಓಡಾಡುತ್ತಿದ್ದರಂತೆ!

ಪದ್ಮಶ್ರೀ ಪ್ರಶಸ್ತಿಯೂ ಬೇಡ ಎಂದವರು ಅವರು
ಅವರ ಸರಳತೆ, ದಾರಿ ತೋರಿಸುವ ಪ್ರವಚನ, ಮಾದರಿ ಜೀವನವನ್ನು ಕಂಡು ಇಡೀ ಜಗತ್ತು ಅವರಿಗೆ ಶರಣಾಗಿದೆ. ಅದರ ಅಧ್ಯಾತ್ಮಿಕ ಬದುಕಿನ ಮುಂದೆ ಮಂಡಿಯೂರಿವೆ. ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿಯನ್ನು ನೀಡಲು ಮುಂದೆ ಬಂದಿದ್ದವು. ಆದರೆ, ಶ್ರೀಗಳು ಇದೆಲ್ಲ ನನಗ್ಯಾಕೆ ಎಂದು ಕೇಳಿ ಸುಮ್ಮನಾದರು. ೨೦೧೯ರಲ್ಲಿ ಕೇಂದ್ರ ಸರಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದಾಗ ಅತ್ಯಂತ ವಿನಯದಿಂದ ನಿರಾಕರಿಸಿ ಸ್ವತಃ ಪ್ರಧಾನಿಗೆ ಪತ್ರ ಬರೆದವರು ಅವರು. ಗೌರವ ಡಾಕ್ಟರೇಟನ್ನು ಕೂಡಾ ಅವರ ಅಂಟಿಕೊಳ್ಳಲು ಬಿಡಲಿಲ್ಲ. ಹೋಗಲಿ, ಒಂದು ಹಾರವೂ ಮೈ ಸೋಂಕದಂತೆ ನೋಡಿಕೊಂಡರು.

ಸಮಯದ ಮೇಲೆ ಅಪಾರ ಪ್ರೀತಿ
ಯಾವತ್ತೂ ಸಮಯಪಾಲನೆ ಶ್ರೀಗಳ ವಿಶೇಷತೆ. ಅವರ ಪ್ರವಚನಗಳೂ ಅಷ್ಟೆ. ಹೆಚ್ಚೆಂದರೆ ೪೫ ನಿಮಿಷ ಮಾತ್ರ. ಇನ್ನೊಬ್ಬರ ಸಮಯವನ್ನು ಹಾಳು ಮಾಡುವುದೂ ತನಗಿಷ್ಟವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು. ಎಷ್ಟೇ ಗಹನವಾದ ವಿಚಾರ ಎತ್ತಿಕೊಂಡರೂ ೪೫ ನಿಮಿಷದ ಒಳಗೆ ಅದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟು ಬಿಡುತ್ತಿದ್ದರು. ಅದರು ಅವರ ತಾಕತ್ತು. ತಾವು ಭಾಗವಹಿಸುವ ಕಾರ್ಯಕ್ರಮದಲ್ಲೂ ಸಮಯ ಪಾಲನೆ ಆಗಬೇಕು ಎಂದು ಬಯಸುತ್ತಿದ್ದರು.

ಕೊನೆಗೆ ಚಿಕಿತ್ಸೆಯೂ ಬೇಡ ಎಂದರು
ಸ್ವಾಮಿಗಳ ನಿರಾಕರಣೆ ಶಕ್ತಿ ಅದೆಷ್ಟು ಬಲವಾಗಿತ್ತೆಂದರೆ ಕೊನೆಗೆ ಆಹಾರವನ್ನೂ ನಿರಾಕರಿಸಿದರು, ಔಷಧವನ್ನೂ ನಿರಾಕರಿಸಿದರು. ಇದರ ಫಲವಾಗಿಯೇ ತಾನೇ ಬಯಸಿದಂತೆ ಅವರು ದೇಹವನ್ನು ಅಂತ್ಯಗೊಳಿಸಿದರು. ಯಾರಿಗೇ ಆದರೂ ಸಾವಿನ ಕೊನೆಯ ಕ್ಷಣ ಹತ್ತಿರ ಬಂದಾಗ ಆಸೆಗಳು ಚಿಗುರೊಡೆಯುತ್ತವಂತೆ. ಅಥವಾ ಅವರ ನಿಲುವುಗಳನ್ನು ಮೀರಿ ಬೇರೆಯವರು ಒಂದು ತೀರ್ಮಾನವನ್ನು ತೆಗೆದುಕೊಳ್ಳುವ ವಾತಾವರಣ ಸೃಷ್ಟಿಯಾಗಿರುತ್ತದೆ. ಆದರೆ, ಶ್ರೀಗಳ ವಿಚಾರದಲ್ಲಿ ಹಾಗಾಗಲೇ ಇಲ್ಲ. ಕೊನೆಯ ಉಸಿರಿನ ವರೆಗೂ ಅವರನ್ನು ಅವರೇ ನಿಯಂತ್ರಿಸಿದರು. ಅವರ ಇಚ್ಛೆಗೆ ವಿರುದ್ಧವಾಗಿ ಒಂದು ಹುಲ್ಲು ಕಡ್ಡಿಯೂ ಅಲುಗಾಡಲಿಲ್ಲ, ಒಂದು ತೊಟ್ಟು ಔಷಧವೂ ದೇಹ ಸೇರಲಿಲ್ಲ.

ಇಷ್ಟೆಲ್ಲ ಆಗಿ ಕೊನೆಗೆ ಭೂಮಿಗೂ ಭಾರ ಬೇಡ ಅಂದರು!
ತನ್ನ ಬದುಕು ಹೇಗೆ ಅಂತ್ಯವಾಗಬೇಕು ಎನ್ನುವುದನ್ನು ಕೂಡಾ ತಾವೇ ನಿರ್ಧಾರ ಮಾಡಿಕೊಂಡಿದ್ದರು ಸ್ವಾಮೀಜಿ. ಎಂಟು ವರ್ಷಗಳ ಹಿಂದೆ ಗುರುಪೂರ್ಣಿಮೆಯ ದಿನದಂದು ಬರೆದಿಟ್ಟ ಅಂತಿಮ ಪತ್ರದಲ್ಲಿ ತನ್ನ ಸಾವಿನ ನಂತರ ಏನು ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದರು. ಲಿಂಗಾಯತ ಪರಂಪರೆಯ ಪದ್ಧತಿಗಳನ್ನು ಮೀರಿ ಪಂಚಭೂತಗಳಲ್ಲಿ ಲೀನವಾಗಬಯಸಿದರು. ಎಲ್ಲೂ ಮಣ್ಣಿನಲ್ಲಿ ನನ್ನ ಅಸ್ತಿತ್ವ ಉಳಿಯಬಾರದು ಎಂಬ ಕಾರಣಕ್ಕಾಗಿ ಮಣ್ಣಿನಲ್ಲಿ ಹೂಳಬೇಡಿ ಎಂದರು, ಸಮಾಧಿಗಳನ್ನು ಕಟ್ಟಬೇಡಿ ಎಂದರು. ತನ್ನನ್ನು ಪದೇಪದೆ ನೆನಪೂ ಮಾಡಿಕೊಳ್ಳಬೇಕಾಗಿಲ್ಲ ಎನ್ನುತ್ತಾ ಶ್ರಾದ್ಧಾದಿ ಕರ್ಮಗಳ ಅಗತ್ಯವಿಲ್ಲ ಎಂದರು.

ನಿಜವೆಂದರೆ ಅವರ ಅನುಭಾವದ ಬದುಕಿಗೆ, ಶಕ್ತಿ ತುಂಬಿದ ಪ್ರವಚನಗಳಿಗೆ ನಾವು ಉಪಕೃತರು ಎನ್ನಬೇಕು. ಆದರೆ, ಅವರು ಮಾತ್ರ ನನ್ನದು ಆವೇಗವಿಲ್ಲದ ಸಾವಧಾನದ ಸಾಮಾನ್ಯ ಬದುಕು ಎನ್ನುತ್ತಾರೆ. ಇಡೀ ಜಗತ್ತಿಗೆ ನಾನು ಉಪಕೃತ ಎನ್ನುತ್ತಾರೆ. ಎಲ್ಲವನ್ನೂ ಅನುಭವಿಸಿದ ಈ ಜಗತ್ತನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎನ್ನುತ್ತಾರೆ. ಹೀಗೆಲ್ಲ ಹೇಳಲು, ಬಾಳಲು ಸಾಮಾನ್ಯರಿಗೆ ಸಾಧ್ಯವೇ ಇಲ್ಲ. ಎಲ್ಲದರಿಂದ ದೂರ ನಿಂತು, ಎಲ್ಲವನ್ನೂ ಆವರಿಸಿ ನಿಲ್ಲುವ ಮಾಯೆಗೆ ಮಾತ್ರ ಇದು ಸಾಧ್ಯ. ಅಂಥ ಮಾಯೆಯ ಹೆಸರು ಶ್ರೀ ಸಿದ್ದೇಶ್ವರ ಶ್ರೀಗಳು. ಇಂಥ ಮಹಾನ್‌ ಸಂತರೆಲ್ಲ ಆಗಾಗ ಬರುವುದಿಲ್ಲ. ಬಂದವರನ್ನೇ ನಾವು ಮನಸಿನಲ್ಲಿ ನೂರ್ಕಾಲ ಕಾಪಿಟ್ಟುಕೊಳ್ಳಬೇಕು ಅಷ್ಟೆ.

ಇದನ್ನೂ ಓದಿ | Siddheshwar Swamiji | ಓದು, ಬರಹ, ಅಧ್ಯಯನ, ಪ್ರವಚನವೇ ಸಿದ್ದೇಶ್ವರ ಶ್ರೀಗಳ ಜೀವನಶಕ್ತಿ

Exit mobile version